ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣ ಹತ್ಯೆ: ‘ಕ್ಯಾಟ್‌ ರಾಜ’ಗೆ ಗುಂಡೇಟು

ಇಂಡಿಕಾ ಕಾರಿನ ಆಸೆಗೆ ಕೃತ್ಯಕ್ಕೆ ಕೈಜೋಡಿಸಿದ್ದ: ಹೆಡ್‌ಕಾನ್‌ಸ್ಟೆಬಲ್ ಮೇಲೆ ಹಲ್ಲೆ
Last Updated 9 ಮಾರ್ಚ್ 2019, 19:10 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಲಕ್ಷ್ಮಿಲೇಔಟ್‌ನಲ್ಲಿ ಗುರುವಾರ ಮಧ್ಯಾಹ್ನ ರೌಡಿ ಲಕ್ಷ್ಮಣನನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಹಂತಕರ ಪೈಕಿ, ಕುಖ್ಯಾತ ಸುಪಾರಿ ಹಂತಕ ರಾಜ ಅಲಿಯಾಸ್ ಕ್ಯಾಟ್ ರಾಜನ ಕಾಲುಗಳಿಗೆ ಪೊಲೀಸರು ಶನಿವಾರ ಗುಂಡು ಹೊಡೆದಿದ್ದಾರೆ.

ತನ್ನ ಪತ್ನಿಯ ಊರಾದ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯಲ್ಲಿ ಅಡಗಿದ್ದ ರಾಜನನ್ನು ಪೊಲೀಸರು ನಸುಕಿನ ವೇಳೆ (4.15ಕ್ಕೆ) ಬಂಧಿಸಿ ನಗರಕ್ಕೆ ಕರೆತಂದಿದ್ದರು. ವಿಚಾರಣೆ ನಡೆಸಿದಾಗ, ‘ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಪೀಣ್ಯ 2ನೇ ಹಂತದ ಕರೀಂಸಾಬ್‌ ಲೇಔಟ್‌ನಲ್ಲಿ ಎಸೆದಿದ್ದೇನೆ’ ಎಂದು ಹೇಳಿದ್ದ. ಹೀಗಾಗಿ, ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ‍ಪೊಲೀಸರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆತನನ್ನು ಅಲ್ಲಿಗೆ ಕರೆದೊಯ್ದಿದ್ದರು.

‘ಕ್ಯಾಟ್ ರಾಜ ಹೆಡ್‌ಕಾನ್‌ಸ್ಟೆಬಲ್ ಚೌಡೇಗೌಡ ಅವರ ಮೇಲೆ ಹಲ್ಲೆ ನಡೆಸಿ ಓಡಲಾರಂಭಿಸಿದ. ಆಗ ಮಹಾಲಕ್ಷ್ಮಿಲೇಔಟ್‌ ಠಾಣೆಯ ಇನ್‌ಸ್ಪೆಕ್ಟರ್ ಪ್ರಶಾಂತ್ ಅವರು ಆತನ ಎರಡೂ ಕಾಲುಗಳಿಗೆ ಗುಂಡು ಹೊಡೆದರು. ಕುಸಿದು ಬಿದ್ದ ಆತನನ್ನು ಹಾಗೂ ಹಲ್ಲೆಗೊಳಗಾದ ಚೌಡೇಗೌಡ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಉತ್ತರ ವಿಭಾಗದ ಡಿಸಿಪಿ ಎಸ್.ಶಶಿಕುಮಾರ್ ತಿಳಿಸಿದರು.

ಕಾರಿನ ಆಸೆಗೆ ಕೊಲೆ: ಮಂಡ್ಯದ ಹೊಳಲು ಗ್ರಾಮದ ರಾಜ (31), ದಶಕದಿಂದಲೂ ಅಪರಾಧ ಚಟುವಟಿಕೆ
ಗಳಲ್ಲಿ ಸಕ್ರಿಯನಾಗಿದ್ದಾನೆ. ಆತನ ಕಣ್ಣುಗಳು ಬೆಕ್ಕಿನ ಕಣ್ಣುಗಳಂತೆ ಇದ್ದುದರಿಂದ ಪಾತಕ ಲೋಕದಲ್ಲಿ ‘ಕ್ಯಾಟ್ ರಾಜ’ ಎಂದೇ ಕುಖ್ಯಾತಿ ಪಡೆದಿದ್ದಾನೆ.

ಕೊಲೆ, ಡಕಾಯಿತಿ, ದರೋಡೆ ಸೇರಿದಂತೆ ಬೆಂಗಳೂರು ನಗರ, ಹೊರವಲಯ, ರಾಮನಗರ, ಮಂಡ್ಯ, ಮೈಸೂರು ಹಾಗೂ ತುಮಕೂರಿನ ಠಾಣೆಗಳಲ್ಲಿ ರಾಜನ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2015ರಲ್ಲಿ ಚಾಮರಾಜಪೇಟೆ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಈತನ ಹೆಸರು ಸೇರಿತ್ತು.

ಆರಂಭದಲ್ಲಿ ಕಳವು, ಸುಲಿಗೆ ಪ್ರಕರಣಗಳಿಂದ ಕುಖ್ಯಾತಿ ಪಡೆದಿದ್ದ ರಾಜ, ಕ್ರಮೇಣ ಸುಪಾರಿ ಹಂತಕನಾಗಿ ಬದಲಾಗಿದ್ದ. 2016ರಲ್ಲಿ ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಿದ್ದ. 2018ರ ನವೆಂಬರ್‌ನಲ್ಲಿ ಡಕಾಯಿತಿ ಪ್ರಕರಣ ಸಂಬಂಧ ಚಂದ್ರಾಲೇಔಟ್ ಪೊಲೀಸರು ಈತನನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿದ್ದರು.

ಜೈಲಿನಲ್ಲಿ ಆತನಿಗೆ ಬ್ಯಾಡರಹಳ್ಳಿ ರೌಡಿ ಹೇಮಂತ್ ಅಲಿಯಾಸ್ ಹೇಮಿಯ ಪರಿಚಯವಾಗಿತ್ತು. ತಾನು ಪ್ರೀತಿಸುತ್ತಿದ್ದ ಯುವತಿ ಜತೆ ಸ್ನೇಹ ಸಂಪಾದಿಸಿದ್ದ ಲಕ್ಷ್ಮಣನನ್ನು ಮುಗಿಸಲು ಸಂಚು ರೂಪಿಸಿದ್ದ ಹೇಮಂತ್, ‘ಲಕ್ಷ್ಮಣನ ಕತೆ ಮುಗಿಸಲು ನೀನು ಸಹಕರಿಸಿದರೆ ಇಂಡಿಕಾ ಕಾರು ಕೊಡಿಸುತ್ತೇನೆ’ ಎಂದು ಆಮಿಷವೊಡ್ಡಿದ್ದ. ಅದಕ್ಕೆ ಒಪ್ಪಿಕೊಂಡ ರಾಜ, ಬ್ಯಾಡರಹಳ್ಳಿಯ ರೌಡಿಗಳಿಗೆ ಸಾಥ್ ಕೊಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಮೊಬೈಲ್ ಸಂಖ್ಯೆಯ ಬೆನ್ನತ್ತಿ

ಲಕ್ಷ್ಮಣನ ಹತ್ಯೆಯ ದೃಶ್ಯಾವಳಿ ಸಮೀಪದ ಅಪಾರ್ಟ್‌ಮೆಂಟ್ ಸಮುಚ್ಚಯದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಪರಿಶೀಲಿಸಿದ ಪೊಲೀಸರಿಗೆ, ಕ್ಯಾಟ್ ರಾಜನ ಚಲನವಲನ ಸ್ಪಷ್ಟವಾಗಿ ಗೊತ್ತಾಗಿತ್ತು. ಆತನ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ, 2006ರಲ್ಲಿ ಲಕ್ಷ್ಮಣನಿಂದ ಕೊಲೆಯಾಗಿದ್ದ ಮಂಜುನಾಥ ಅಲಿಯಾಸ್ ಮಚ್ಚನ ಶಿಷ್ಯ ಶ್ರೀಕಂಠ ಹಾಗೂ ಹೇಮಂತನ ಜತೆ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು.

ಅಲ್ಲದೇ, ಹತ್ಯೆ ನಡೆದ ಸಮಯದಲ್ಲಿ ಅವರಿಬ್ಬರ ಮೊಬೈಲ್‌ಗಳೂ ಕೃತ್ಯ ನಡೆದ ಸ್ಥಳಕ್ಕೆ ಸಮೀಪದ ಟವರ್‌ನಿಂದಲೇ ಸಂಪರ್ಕ ಪಡೆದಿದ್ದವು. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಮೂರು ಪೊಲೀಸ್ ತಂಡಗಳು ಪ್ರತ್ಯೇಕವಾಗಿ ಒಬ್ಬೊಬ್ಬರ ಬೆನ್ನ ಹಿಂದೆ ಬಿದ್ದಿದ್ದವು. ಅಂತೆಯೇ ಪ್ರಶಾಂತ್ ನೇತೃತ್ವದ ತಂಡ, ಗುಡಿಬಂಡಿಯಲ್ಲಿ ಕ್ಯಾಟ್‌ರಾಜನನ್ನು ಬಂಧಿಸಿ ಕರೆತಂದಿತ್ತು.

ಎರಡು ಕಾರುಗಳಲ್ಲಿ ದಾಳಿ

ಕ್ಯಾಟ್ ರಾಜ, ಹೇಮಂತ್, ಶ್ರೀಕಂಠ ಹಾಗೂ ಅವರ ಎಂಟು ಸಹಚರರು ಮಾರ್ಚ್ 6ರಂದು ದೇವನಹಳ್ಳಿ ಸಮೀಪದ ಬೂದಿಗೆರೆ ಬಳಿ ಸೇರಿದ್ದರು. ‘ಲಕ್ಷ್ಮಣ ಬೆಳಿಗ್ಗೆ ತುಮಕೂರು ರಸ್ತೆಯ ಆರ್‌.ಜಿ.ರಾಯಲ್ ಹೋಟೆಲ್‌ಗೆ ಬರುತ್ತಾನೆ. ಅಲ್ಲೇ ಮುಗಿಸಬೇಕು’ ಎಂದು ಅಲ್ಲೇ ಮಾತುಕತೆ ನಡೆಸಿದ್ದರು.

ಅಂತೆಯೇ ಬೆಳಿಗ್ಗೆ ಹಂತಕರು ಎರಡು ತಂಡಗಳಾಗಿ ಇಂಡಿಕಾ ಹಾಗೂ ಸ್ಕಾರ್ಪಿಯೊ ಕಾರುಗಳಲ್ಲಿ ಹೋಟೆಲ್‌ ಬಳಿ ಬಂದಿದ್ದರು. 11.30ರ ಸುಮಾರಿಗೆ ಅಲ್ಲಿಗೆ ಬಂದ ಲಕ್ಷ್ಮಣ, ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಟೆಲ್ ಆವರಣ ಪ್ರವೇಶಿಸಿದ್ದರಿಂದ ದಾಳಿ ನಡೆಸಲು ಸಾಧ್ಯವಾಗಿರಲಿಲ್ಲ. ಆ ನಂತರ ಆರೋಪಿಗಳು ಅದೇ ರಸ್ತೆಯಲ್ಲಿ ಸುತ್ತಾಡುತ್ತ ಆತ ಬರುವಿಕೆಗಾಗಿಯೇ ಕಾಯುತ್ತಿದ್ದರು.

12.30ರ ಸುಮಾರಿಗೆ ಹೋಟೆಲ್‌ನಿಂದ ಹೊರಟ ಲಕ್ಷ್ಮಣನನ್ನು ಹಂತಕರು ಕಾರುಗಳಲ್ಲಿ ಹಿಂಬಾಲಿಸಿದ್ದರು. ಇಂಡಿಕಾ ಕಾರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರೆ, ಕ್ಯಾಟ್‌ ರಾಜನಿದ್ದ ಸ್ಕಾರ್ಪಿಯೊ ಕಾರು ಲಕ್ಷ್ಮಣನ ವಾಹನವನ್ನು ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ಹಿಂಭಾಗದ ರಸ್ತೆಯಲ್ಲಿ ಅಡ್ಡಗಟ್ಟಿತ್ತು. ನಂತರ ಆರು ಮಂದಿ ಆತನನ್ನು ಮಚ್ಚು–ಲಾಂಗುಗಳಿಂದ ಕೊಚ್ಚಿ ಪರಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT