ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಿಗೆಕೋರನ ಕಾಲಿಗೆ ಗುಂಡೇಟು

ಮುಕ್ಕಾಲು ತಾಸಿನಲ್ಲಿ ಆರು ಮಂದಿಯ ಸುಲಿಗೆ
Last Updated 29 ನವೆಂಬರ್ 2018, 20:34 IST
ಅಕ್ಷರ ಗಾತ್ರ

ಬೆಂಗಳೂರು:‌ ಮುಕ್ಕಾಲು ತಾಸಿನ ಅಂತರದಲ್ಲಿ ಆರು ಮಂದಿಯಿಂದ ಸುಲಿಗೆ ಮಾಡಿದ್ದ ಆರೋಪಿಗಳ ಪೈಕಿ ಮೊಹಮದ್ ಅಶ್ರಫ್ ಖಾನ್ (27) ಎಂಬಾತನ ಕಾಲಿಗೆ ಚಿಕ್ಕಜಾಲ ಪೊಲೀಸರು ಗುಂಡು ಹೊಡೆದಿದ್ದಾರೆ.

ಆರ್‌.ಟಿ.ನಗರದ ಅಶ್ರಫ್ ಹಾಗೂ ಆತನ ಮೂವರು ಸಹಚರರು, ಗುರುವಾರ ನಸುಕಿನಲ್ಲಿ (4.30ರ ಸುಮಾರಿಗೆ) ಚಿಕ್ಕಜಾಲಕ್ಕೆ ಬಂದಿದ್ದರು. ಬೈಕ್‌ನಲ್ಲಿ ಒಂಟಿಯಾಗಿ ಬರುವವರನ್ನು ಅಡ್ಡಗಟ್ಟಿ ಮಚ್ಚು–ಲಾಂಗುಗಳಿಂದ ಬೆದರಿಸಿ, ಹಣ ಹಾಗೂ ಮೊಬೈಲ್ ಕಿತ್ತುಕೊಳ್ಳುತ್ತಿದ್ದರು.

ಆರ್‌ಎಂಸಿ ಯಾರ್ಡ್‌ನ ವ್ಯಾಪಾರಿ ಅಶೋಕ್‌ ರೆಡ್ಡಿ ಹಾಗೂ ಸ್ಥಳೀಯ ರೈತ ನಾಗರಾಜ್ ಅವರಿಂದ ಎರಡು ಸ್ಕೂಟರ್‌ಗಳನ್ನು ಕಸಿದುಕೊಂಡು, ಅವುಗಳಲ್ಲೇ 4.50ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಡೆಗೆ ತೆರಳಿದ್ದರು. ಅಲ್ಲಿಯೂ ರಸ್ತೆ ಬದಿ ನಿಂತು ಸವಾರರಿಂದ ಸುಲಿಗೆ ಮಾಡಿದ್ದರು.

ಈ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ದೂರುಗಳು ಬರುತ್ತಿದ್ದಂತೆಯೇ ಚಿಕ್ಕಜಾಲ ಹಾಗೂ ಕೆಐಎಎಲ್ ಪೊಲೀಸರು ನಾಕಾಬಂದಿ ಹಾಕಿಕೊಂಡು ಕಾರ್ಯಾಚರಣೆ ಪ್ರಾರಂಭಿಸಿದ್ದರು.

‘5.15ರ ಸುಮಾರಿಗೆ ಆರೋಪಿಗಳು ಕೆಐಎಎಲ್‌ ಕಡೆಯಿಂದ ಭಾರತಿನಗರಕ್ಕೆ ಬರುತ್ತಿದ್ದರು. ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಸ್ಕೂಟರ್‌ಗಳನ್ನು ತಿರುಗಿಸಿಕೊಂಡು ವಿಐಟಿ ಕಾಲೇಜು ಕಡೆಗೆ ಹೊರಟರು. ತಕ್ಷಣ ಪಿಎಸ್‌ಐ ಪ್ರವೀಣ್ ಹಾಗೂ ಕಾನ್‌ಸ್ಟೆಬಲ್ ಲೋಕೇಶ್ ಅವರನ್ನು ಹಿಂಬಾಲಿಸಿಕೊಂಡು ಹೋದರು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿನ ಬಳಿ ಸಿಬ್ಬಂದಿ ಒಂದು ಸ್ಕೂಟರನ್ನು ಅಡ್ಡಗಟ್ಟಿದರು. ಈ ಹಂತದಲ್ಲಿ ಕಾನ್‌ಸ್ಟೆಬಲ್ ಲೋಕೇಶ್ ಅವರ ಕೈಗೆ ಅಶ್ರಫ್‌ಮಚ್ಚಿನಿಂದ ಹಲ್ಲೆ ನಡೆಸಿದ. ಪಿಎಸ್‌ಐ ಮೇಲೂ ಮಚ್ಚು ಬೀಸಲು ಮುಂದಾದಾಗ, ಅವರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದರು. ಈ ಹಂತದಲ್ಲಿ ಆತನ ಸಹಚರ ತಪ್ಪಿಸಿಕೊಂಡ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT