ಮಂಗಳವಾರ, ಮಾರ್ಚ್ 2, 2021
29 °C

ಸ್ನೇಹಿತನಿಗೆ ಗುಂಡಿಕ್ಕಿದ ವ್ಯಾಪಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಜಗಳವಾಗಿ ಸಿಮೆಂಟ್ ವ್ಯಾಪಾರಿಯೊಬ್ಬರು ಸ್ನೇಹಿತನ ತಲೆಗೆ ರಿವಾಲ್ವರ್‌ನಿಂದ ಗುಂಡು ಹೊಡೆದಿದ್ದಾರೆ.

ಕೋಣನಕುಂಟೆಯಲ್ಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿ ಪ್ರಹ್ಲಾದ್ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಸಿದ್ಧರಾಜು ಅಲಿಯಾಸ್ ಸಿದ್ಧ (43) ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆ ಮಾಡಿ ಗುಂಡನ್ನು ಹೊರತೆಗೆಯಲಾಗಿದೆ. ಅವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ.

ಪ್ರಹ್ಲಾದ್ ಅವರು ಮನೆಗೆ ಕೊಳವೆಬಾವಿ ಕೊರೆಸಲು ನಿರ್ಧರಿಸಿದ್ದರು. ಆ ವಿಚಾರವನ್ನು ಸಿದ್ಧರಾಜು ಬಳಿ ಹೇಳಿದಾಗ, ‘ನನ್ನ ಪರಿಚಿತರು ಕಡಿಮೆ ಬೆಲೆಗೆ ಈ ಕೆಲಸ ಮಾಡಿಕೊಡುತ್ತಾರೆ. ಅವರಿಗೇ ಹೇಳುತ್ತೇನೆ’ ಎಂದಿದ್ದರು. ಅಂತೆಯೇ ವಾರದ ಹಿಂದೆ ‌ಕಾರ್ಮಿಕರ ಮೂಲಕ ಬಾವಿ ಕೊರೆಯಿಸಿದ್ದರು.

ಕೆಲಸ ಮುಗಿದ ಬಳಿಕ ₹ 74 ಸಾವಿರ ‌ಕೊಡುವಂತೆ ಸಿದ್ಧರಾಜು ಕೇಳಿದಾಗ ಅದಕ್ಕೆ ಒಪ್ಪದ ಪ್ರಹ್ಲಾದ್, ‘₹ 13 ಸಾವಿರಕ್ಕೇ ಈ ಕೆಲಸ ಮಾಡುತ್ತಾರೆ. ಸ್ನೇಹಿತನೆಂದು ನಿನಗೆ ಹೇಳಿದರೆ ನನ್ನ ಬಳಿಯೂ ಸುಲಿಗೆ ಮಾಡುತ್ತೀಯಾ’ ಎಂದಿದ್ದರು. ಈ ವಿಚಾರವಾಗಿ ಪರಸ್ಪರರ ನಡುವೆ ವಾಗ್ವಾದ ನಡೆದಿತ್ತು.

ಸಂಜೆ 6 ಗಂಟೆಗೆ ಸಿದ್ಧರಾಜು ಹಣ ಕೇಳಲು ಕೋಣನಕುಂಟೆಯಲ್ಲಿರುವ ಪ್ರಹ್ಲಾದ್ ಮನೆಗೇ ಹೋಗಿದ್ದರು. ಅಲ್ಲಿ ಮತ್ತೆ ಗಲಾಟೆ ಶುರುವಾಗಿತ್ತು. ಈ ಹಂತದಲ್ಲಿ ತಾಳ್ಮೆ ಕಳೆದುಕೊಂಡ ಆರೋಪಿ, ತಮ್ಮ ಬಳಿ ಇದ್ದ ‘ಪಾಯಿಂಟ್–22’ ರಿವಾಲ್ವರ್‌ನಿಂದ ತಲೆಗೆ ಗುಂಡು ಹೊಡೆದರು.

ನಂತರ ಅವರ ಕುಟುಂಬ ಸದಸ್ಯರೇ ಸ್ಥಳೀಯರ ನೆರವಿನಿಂದ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ನಂತರ ಮನೆಯಿಂದ ಹೊರನಡೆದಿದ್ದ ಪ್ರಹ್ಲಾದ್ ಅವರನ್ನು ಪೊಲೀಸರು ಪಕ್ಕದ ರಸ್ತೆಯಲ್ಲೇ ಹಿಡಿದು ಠಾಣೆಗೆ ಕರೆದೊಯ್ದರು.

‘ರಿವಾಲ್ವರ್‌ಗೆ ಪರವಾನಗಿ ಇದೆ’
‘ಬನಶಂಕರಿ 3ನೇ ಹಂತದಲ್ಲಿ ಸ್ಟೀಲ್ ಹಾಗೂ ಸಿಮೆಂಟ್ ವ್ಯಾಪಾರ ಮಾಡುವ ಪ್ರಹ್ಲಾದ್, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಅನುಮತಿ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದರು. ಕೊಲೆ ಯತ್ನ (ಐಪಿಸಿ 307) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು