ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟರ್ಬನ್ ತೆಗೆದು ಶಾಲೆಗೆ ಬಾ’ ಎಂದಿದ್ದಕ್ಕೆ ಎಫ್‌ಐಆರ್

ಸಂಜಯ್‌ನಗರ ಪೊಲೀಸರ ಮೊರೆ ಹೋದ ಸಿಖ್ ಪೋಷಕರು
Last Updated 17 ಡಿಸೆಂಬರ್ 2018, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ಟರ್ಬನ್ ಹಾಗೂ ಕೈಗೆ ಧರಿಸಿರುವ ಕಡಗ ತೆಗೆದಿಟ್ಟು ಶಾಲೆಗೆ ಬರುವಂತೆ ನನ್ನ ಮಗನಿಗೆ ಸೂಚಿಸಿರುವ ಗೆದ್ದಲಹಳ್ಳಿಯ ಜವಾಹರ್‌ಲಾಲ್ ವಿದ್ಯಾಕೇಂದ್ರದ ಪ್ರಾಂಶುಪಾಲರು, ಅದೇ ವಿಚಾರವಾಗಿ ನಿತ್ಯವೂ ಆತನಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಜಗತ್ ಸಿಂಗ್ ಸೇಥಿ ಎಂಬುವರು ಸಂಜಯ್‌ನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

ಪಂಜಾಬ್‌ನ ಜಗತ್, ದಶಕದ ಹಿಂದೆಯೇ ನಗರಕ್ಕೆ ಬಂದು ಎಇಸಿಎಸ್‌ ಲೇಔಟ್‌ನಲ್ಲಿ ನೆಲೆಸಿದ್ದಾರೆ. ಅವರು ದೂರಿನ ಅನ್ವಯ ಬಾಲ ನ್ಯಾಯಕಾಯ್ದೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ (ಐಪಿಸಿ 298) ಆರೋಪದಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಪ್ರಾಂಶುಪಾಲರು ಹಾಗೂ ಶಿಕ್ಷಕಿ ಸವಿತಾ ಅವರಿಗೆ ವಿಚಾರಣೆ ಕರೆದಿದ್ದಾರೆ.

ವಿದ್ಯೆಗೂ, ಟರ್ಬನ್‌ಗೂ ಸಂಬಂಧವೇನು?

‘ನಾವು ಸಿಖ್ ಸಮುದಾಯದವರು. ಟರ್ಬನ್ ಧರಿಸಲೇಬೇಕು. ಅದಕ್ಕೂ ಮಗನ ವಿದ್ಯಾಭ್ಯಾಸಕ್ಕೂ ಏನು ಸಂಬಂಧ? ಪ್ರಾಂಶುಪಾಲರು ವರ್ಷದ ಹಿಂದೆಯೂ ಇದೇ ರೀತಿ ವರ್ತಿಸಿದ್ದರು. ಈಗ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ದಯವಿಟ್ಟು ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಸಮಸ್ಯೆಗೆ ಶಾಶ್ವತ ಪ‍ರಿಹಾರ ಒದಗಿಸಿಕೊಡಿ’ ಎಂದು ಜಗತ್ ಮನವಿ ಮಾಡಿದ್ದಾರೆ.

‘ಮಗ ಐದು ವರ್ಷಗಳಿಂದ ಇದೇ ಶಾಲೆಯಲ್ಲಿ ಓದುತ್ತಿದ್ದಾನೆ. ವರ್ಷದಿಂದ ಇದೇ ರೀತಿಯ ನೋವು ಅನುಭವಿಸುತ್ತಿದ್ದಾನೆ. ಪ್ರಾಂಶುಪಾಲರು ಹಾಗೂ ಶಿಕ್ಷಕಿ ಸವಿತಾ ಅವರು ವಾರದ ಹಿಂದೆ ಮರದ ಸ್ಕೇಲ್‌ನಿಂದ ಹೊಡೆದು ಮಗನ ಕುತ್ತಿಗೆಗೆ ಗಾಯ ಮಾಡಿದ್ದರು. ಇದನ್ನು ಪ್ರಶ್ನಿಸಲು ಹೋದಾಗ, ‘ಇಲ್ಲಿನ ವಿಧಾನ ನಿಮಗೆ ಗೊತ್ತಿಲ್ಲವೇ. ಎಲ್ಲರ ಹಾಗೆಯೇ ತರಗತಿಗೆ ಬರುವಂತೆ ಹೇಳಿ. ಟರ್ಬನ್ ಹಾಗೂ ಕಡಗ ತೆಗೆಯದ ಹೊರತು ಶಾಲೆಗೆ ಕಳುಹಿಸಬೇಡಿ’ ಎಂದರು. ಅವರ ವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾದಾಗ ಪ್ರಾಂಶುಪಾಲರ ಮೊಮ್ಮಗಳು ನನ್ನ ಕೆನ್ನೆಗೆ ಹೊಡೆದರು.’

‘ಡಿ.11ರಂದು ಠಾಣೆಗೆ ತೆರಳಿ ಪೊಲೀಸರಿಗೆ ದೂರು ಕೊಟ್ಟೆವು. ಅವರು ಪ್ರಾಂಶುಪಾಲರನ್ನು ಕರೆಸಿ ಬುದ್ಧಿವಾದ ಹೇಳಿದ್ದರು. ಆದರೆ, ಮರುದಿನವೂ ಅದೇ ವರ್ತನೆ ಮುಂದುವರಿಯಿತು. ನನ್ನ ಮಗನೊಂದಿಗೆ ಮಾತನಾಡದಂತೆ, ಒಟ್ಟಿಗೆ ಕುಳಿತು ಊಟ ಮಾಡದಂತೆ ಇತರೆ ಮಕ್ಕಳಿಗೆ ಸೂಚಿಸಿದ್ದಾರೆ. ಇದರಿಂದ ತುಂಬ ನೋವಾಗಿದೆ. ಹೀಗಾಗಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರತಿಕ್ರಿಯೆ ಪಡೆಯಲು ಶಾಲಾ ಆಡಳಿತ ಮಂಡಳಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ, ‘ನಮ್ಮ ಪ್ರಾಂಶುಪಾಲರು ನಾಳೆ ಪ್ರತಿಕ್ರಿಯೆ ನೀಡುತ್ತಾರೆ’ ಎಂದು ನೌಕರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT