ಗುರುವಾರ , ಸೆಪ್ಟೆಂಬರ್ 19, 2019
29 °C

ಎಲೆಕ್ಟ್ರಾನಿಕ್‌ ಸಿಟಿ: ಪಾದಚಾರಿ ಮೇಲ್ಸೇತುವೆ ಉದ್ಘಾಟನೆ

Published:
Updated:
Prajavani

ಬೊಮ್ಮನಹಳ್ಳಿ: ಎಲೆಕ್ಟ್ರಾನಿಕ್‌ ಸಿಟಿಯ ಟೋಲ್‌ ಗೇಟ್‌ ಸಮೀಪ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯನ್ನು ಗುರುವಾರ ಉದ್ಘಾಟನೆ ಮಾಡಲಾಯಿತು.

ವೇಗವಾಗಿ ಬರುವ ವಾಹನಗಳ ನಡುವೆ ಜನರು ರಸ್ತೆ ದಾಟುವುದು ಇಲ್ಲಿ ಕಷ್ಟವಾಗಿತ್ತು. ಈಗ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣದಿಂದ ಸಾವಿರಾರು ಜನರ ಆತಂಕ ದೂರುವಾಗಿದೆ.     

ಈ ಮೇಲ್ಸೇತುವೆಯನ್ನು ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಉಪನಗರ ಪ್ರಾಧಿಕಾರ ನಿರ್ಮಿಸಿದೆ. ಇದರಲ್ಲಿ ಲಿಫ್ಟ್‌ ವ್ಯವಸ್ಥೆ ಇದೆ. 7 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿ ನಿಯೋಜಿಸಲು ವ್ಯವಸ್ಥೆ ಮಾಡಲಾಗಿದೆ. 

‘ಚಂದಾಪುರದಿಂದ ಬಸ್ಸಿನಲ್ಲಿ ಬಂದು ಇಲ್ಲಿ ರಸ್ತೆ ದಾಟಬೇಕಾದರೆ ಭಯವಾಗುತ್ತಿತ್ತು. ಅಂತು ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮುಗಿದು, ಬಳಕೆಗೆ ಸಿಕ್ಕಿತಲ್ಲ ಎಂಬ ಸಂತೋಷ ಆಗುತ್ತಿದೆ’ ಎಂದು ಕಂಪನಿಯೊಂದರ ಉದ್ಯೋಗಿ ಕವಿತಾ ಹೇಳಿದರು.

‘ಹೆದ್ದಾರಿಯಲ್ಲಿ ವಾಹನಗಳ ಮೇಲ್ಸೇತುವೆ ಇದ್ದಿದ್ದರಿಂದ ಪಾದಚಾರಿಗಳ ಮೇಲ್ಸೇತುವೆ ಪೂರ್ಣಗೊಳಿಸಲು ಒಂದು ವರ್ಷ ಬೇಕಾಯಿತು. ಇಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ’ ಎಂದು ಪ್ರಾಧಿಕಾರದ ಸಿಇಓ ರಮಾ ತಿಳಿಸಿದರು. 

‘ಇತ್ತೀಚೆಗೆ ಮೂರು ಅಪಘಾತಗಳು ಸಂಭವಿಸಿ ಇಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸೇತುವೆ ನಿರ್ಮಾಣದಿಂದ ಪಾದಚಾರಿಗಳು ಸುರಕ್ಷಿತರಾಗಿದ್ದಾರೆ. ನಮಗೂ ಒಂದಿಷ್ಟು ಕೆಲಸ ಕಡಿಮೆಯಾಗಿದೆ’ ಎಂದು ಸಂಚಾರ ಠಾಣೆಯ ಎಎಸ್‌ಐ ಎಸ್.ರಾಜು ಹೇಳಿದರು.

*

ಅಂಕಿ–ಅಂಶ

₹ 2 ಕೋಟಿ

ಪಾದಚಾರಿ ಮೇಲ್ಸೇತುವೆ ನಿರ್ಮಾಣದ ವೆಚ್ಚ

73 ಮೀಟರ್‌

ಮೇಲ್ಸೇತುವೆಯ ಉದ್ದ

Post Comments (+)