ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದಲ್ಲಿ ನಿದ್ರಿಸಲು ‘ಗೂಡು’!

Last Updated 20 ನವೆಂಬರ್ 2018, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಸುಕಿನ ವಿಮಾನ ಏರಲು ನಿದ್ದಗೆಟ್ಟು ಬರುವವರು ಆಯಾಸಗೊಂಡಿದ್ದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ಏಕೆಂದರೆ, ಇಲ್ಲಿರುವ ಐಷಾರಾಮಿ ಸ್ಲೀಪಿಂಗ್ ಪಾಡ್‌ನಲ್ಲಿ (ನಿದ್ರಿಸುವ ಗೂಡು) ವಿಶ್ರಾಂತಿ ಪಡೆಯುವ ಅವಕಾಶ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ತಿಂಗಳ ಹಿಂದೆ ಈ ತರಹದ ಐದು ಸ್ಲೀಪಿಂಗ್ ಪಾಡ್‌ಗಳುಳ್ಳ ಲಾಂಜ್‌ಅನ್ನು ವಿಮಾನ ನಿಲ್ದಾಣದ ನಿರ್ಗಮನ ಟರ್ಮಿನಲ್‌ನಲ್ಲಿ ಅಳವಡಿಸಲಾಗಿದೆ.

ಏವಿಸರ್ವ್‌ ಏರ್‌ಪೋರ್ಟ್ ಸರ್ವಿಸಸ್‌ ಸಂಸ್ಥೆ ಈ ಪಾಡ್‌ಗಳನ್ನು ನಿರ್ಮಿಸಿದ್ದು, ಅವುಗಳು ಮಿನಿ ಬೆಡ್‌ ತರಹ ಇವೆ. ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಚಾರ್ಜರ್‌ಗಳನ್ನು ಹೊಂದಿವೆ. ಅಲ್ಲದೇ ಇದರಲ್ಲಿ ಹ್ಯಾಂಡ್ ಬ್ಯಾಗ್‌ಗಳನ್ನು ಇಡಲು ಸುರಕ್ಷಿತ ಸ್ಥಳವಕಾಶವೂ ಇದೆ. ಬೆಳಕು, ಶಬ್ದ ಬರದಂತೆ ಮತ್ತು ಹೊರಗಿನ ಚಲನವಲನ ಕಾಣದಂತೆ ಎಳೆಯಬಹುದಾದ ಪರದೆಯನ್ನು ಇವುಗಳು ಹೊಂದಿವೆ.

ಪ್ರಯೋಗಾರ್ಥ ಹಂತದಲ್ಲಿಯೂ ಇದರ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆ. ಒಂದು ಗಂಟೆಯ ಬಳಕೆಗೆ ₹700, ಎರಡು ಗಂಟೆಗೆ ₹1,200, ಮೂರು ಗಂಟೆಗೆ ₹1,400 ಶುಲ್ಕವನ್ನು ನಿಗದಿಪಡಿಸಿದೆ. ಭಾರತದಲ್ಲಿ ಈ ಸೌಲಭ್ಯವನ್ನು ಈಗಾಗಲೇ ದೆಹಲಿ ವಿಮಾನ ನಿಲ್ದಾಣ ಅಳವಡಿಸಿಕೊಂಡಿದೆ.

‘ಅಕ್ಟೋಬರ್‌ 18ರಂದು ಪ್ರಯೋಗಾರ್ಥವಾಗಿ ಇವುಗಳನ್ನು ಅಳವಡಿಸಲಾಗಿದೆ. ಆರು ತಿಂಗಳ ಬಳಿಕ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದುವರಿಸಲಾಗುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 2 ಅಥವಾ 3 ಗಂಟೆಗೆ ಪ್ರಯಾಣಿಸುವ ಪ್ರಯಾಣಿಕರು ಇದನ್ನು ಬಳಸುತ್ತಿದ್ದಾರೆ. ಇದು ಹೋಟೆಲ್ ಕೋಣೆಗೆ ಪರ್ಯಾಯವಲ್ಲ. ಆದರೆ, ಕೆಲವು ಗಂಟೆಗಳ ವಿಶ್ರಾಂತಿಗೆ ಉತ್ತಮ ಆಯ್ಕೆ’ ಎನ್ನುತ್ತಾರೆ ಬಿಐಎಎಲ್‌ ಅಧಿಕಾರಿಗಳು.

‘ಪ್ರಯಾಣಿಕರು ದಣಿವಾರಿಸಿಕೊಳ್ಳಲು ಹಾಗೂ ಚೆನ್ನಾಗಿ ವಿಶ್ರಾಂತಿ ಪಡೆಯಲು ಬಯಸುತ್ತಾರೆ.‌ ಆದರೆ, ನಿದ್ದೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ಸಹಜ. ಅದಕ್ಕೂ ಸಹ ಕೆಲವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬೇರೆ ವ್ಯವಸ್ಥೆ ಮಾಡಲಾಗಿದೆ. ನಿಲ್ದಾಣದ ಸಿಬ್ಬಂದಿ ವಿಮಾನದ ಸಮಯಕ್ಕೆ ಸರಿಯಾಗಿ ಪಾಡ್‌ಗಳ ಬಳಿ ತೆರಳಿ ಪ್ರಯಾಣಿಕರನ್ನು ಎಚ್ಚರಿಸುತ್ತಾರೆ. ಆಗ ವಿಮಾನ ತಪ್ಪುವುದಿಲ್ಲ’ ಎನ್ನುತ್ತಾರೆ ಏವಿಸರ್ವ್‌ ಏರ್‌ಪೋರ್ಟ್ ಸರ್ವಿಸಸ್‌ ಸಂಸ್ಥೆಯ ಪ್ರತಿನಿಧಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT