ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿಗಳ ನಿರ್ವಹಣೆಗೆ ತಂತ್ರಜ್ಞಾನ

ಐಐಎಸ್‌ಸಿ ವಿಜ್ಞಾನಿಯಿಂದ ಕೃತಕ ಬುದ್ಧಿಮತ್ತೆ ಆಧರಿಸಿದ ವ್ಯವಸ್ಥೆ
Last Updated 20 ನವೆಂಬರ್ 2018, 20:49 IST
ಅಕ್ಷರ ಗಾತ್ರ

ಬೆಂಗಳೂರು: ಮಹಾನಗರಗಳಲ್ಲಿ ದಿನವೂ ಎಲ್ಲೆಂದರಲ್ಲಿ ಕೊಳೆಗೇರಿಗಳು ಹುಟ್ಟಿಕೊಳ್ಳುತ್ತವೆ, ಈಗಾಗಲೇ ಇರುವ ಕೊಳೆಗೇರಿಗಳೂ ವಿಸ್ತರಣೆಗೊಳ್ಳುತ್ತಲೇ ಇವೆ. ಇಂತಹ ಬೆಳವಣಿಗೆಯ ಮೇಲೆ ಕಣ್ಣಿಟ್ಟು ನಿಖರ ಮಾಹಿತಿಯನ್ನು ನೀಡಬಲ್ಲ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌) ಆಧರಿಸಿದ ತಂತ್ರಜ್ಞಾನವೊಂದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಯುವ ವಿಜ್ಞಾನಿ ಶಿಶಿರ್‌ ಮಯ್ಯ ಅಭಿವೃದ್ಧಿಪಡಿಸಿದ್ದಾರೆ.

ಗೂಗಲ್‌ ಅರ್ಥ್‌ ಉಪಗ್ರಹ ಆಧಾರಿತ ಚಿತ್ರಗಳನ್ನು ಬಳಸಿ ದೇಶದ ಎಲ್ಲ ಕೊಳೆಗೇರಿಗಳ ಮ್ಯಾಪಿಂಗ್‌ ತಯಾರಿಸಿಕೊಳ್ಳಬಹುದು. ಕೃತಕ ಬುದ್ಧಿಮತ್ತೆಆಧಾರಿತ ಮಾದರಿಯನ್ನು ಡೀಪ್‌ ಲರ್ನಿಂಗ್‌ ಎಂದೂ ಕರೆಯಲಾಗುತ್ತದೆ. ಇದು ಅಧಿಕಾರಿಗಳ ಕೆಲಸವನ್ನು ಕಡಿಮೆ ಮಾಡುವ ತಂತ್ರಜ್ಞಾನವೂ ಹೌದು.

ಈ ತಂತ್ರಜ್ಞಾನವು ಬಿಬಿಎಂಪಿಯಂತಹ ಸಂಸ್ಥೆಗಳಿಗೆ ವರದಾನವಾಗಲಿದೆ. ಕೊಳೆಗೇರಿಗಳ ವಿಸ್ತೀರ್ಣ ಎಷ್ಟು ಹೆಚ್ಚಾಗಿದೆ. ಅವರಿಗೆ ಏನೆಲ್ಲ ಸೌಲಭ್ಯ ಒದಗಿಸಬೇಕು ಅಥವಾ ಪುನರ್‌ವಸತಿ ಕಲ್ಪಿಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲು ಇದು ಸಹಾಯಕವಾಗುತ್ತದೆ. ಈಗಿನ ವ್ಯವಸ್ಥೆಯಲ್ಲಿ ಸಿಬ್ಬಂದಿ ಭೌತಿಕವಾಗಿ ಕೊಳೆಗೇರಿಗಳಿಗೆ ಹೋಗಿ ನೋಡಿ ಮಾಹಿತಿ ಸಂಗ್ರಹಿಸಬೇಕು. ಇಂತಹ ಸಮೀಕ್ಷೆಗೇ ಹಲವು ತಿಂಗಳು ಬೇಕಾಗುತ್ತದೆ. ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ವಿಶ್ಲೇಷಣೆಗೂ ಸಾಕಷ್ಟು ಸಮಯ ಹಿಡಿಯುತ್ತಿತ್ತು. ಹೊಸ ವ್ಯವಸ್ಥೆಯಿಂದ ನಗರಾಡಳಿತಗಳಿಗೆ ಸಮಯ ಮತ್ತು ಹಣ ಉಳಿಯುತ್ತದೆ.

ಬೆಂಗಳೂರಿನ ಶಿಶಿರ್ ಮಯ್ಯ ಐಐಟಿ ಬಾಂಬೆಯ ಸುದರ್ಶನ ಚಂದ್ರಬಾಬು ಜತೆಗೂಡಿ ಈ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ವಿಶ್ವದ ಅತಿ ದೊಡ್ಡ ಕೊಳೆಗೇರಿಗಳನ್ನು ಹೊಂದಿರುವ ಮುಂಬೈನಲ್ಲಿ ಅಧ್ಯಯನ ನಡೆಸಿದ್ದಾರೆ. ಕೊಳೆಗೇರಿಯಲ್ಲಿ ಒಂದು ಗುಡಿಸಲು ಹೆಚ್ಚಾದರೂ ಗೂಗಲ್‌ ಅರ್ಥ್‌ ಉಪಗ್ರಹ ಚಿತ್ರಗಳನ್ನು ತಕ್ಷಣವೇ ಪತ್ತೆ ಮಾಡಲು ಸಾಧ್ಯವಾಗುವಂತೆ ಕೃತಕ ಬುದ್ಧಿಮತ್ತೆ ಈ ತಂತ್ರಜ್ಞಾನಕ್ಕೆ ತರಬೇತಿ ನೀಡಿದೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಶಿಶಿರ್‌ ಮಯ್ಯ, ಈ ತಂತ್ರಜ್ಞಾನವು ಕೊಳೆಗೇರಿ ವಿಸ್ತೀರ್ಣ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ ಎಂಬುದನ್ನು ತಿಳಿಸುತ್ತದೆ. ಇದಕ್ಕೆ ಐತಿಹಾಸಿಕ ದತ್ತಾಂಶವನ್ನೂ ಪೂರಕವಾಗಿ ಬಳಸುತ್ತದೆ. ಕೃತಕ ಬುದ್ಧಿಮತ್ತೆಗೆ ತರಬೇತಿ ನೀಡಿ ಮಾದರಿಯನ್ನು ಕರಾರುವಾಕ್ಕು ಕಾರ್ಯನಿರ್ವಹಿಸಲು ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ಸೇರಿಸಲಾಯಿತು ಎಂದು ಅವರು ತಿಳಿಸಿದರು.

‘ಈ ತಂತ್ರಜ್ಞಾನದ ಬಗ್ಗೆ ಪ್ರಬಂಧ ಮಂಡಿಸಲು ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆಯುವ ಪ್ರತಿಷ್ಠಿತ ನ್ಯೂರಲ್‌ ಇನ್‌ಫರ್ಮೇಷನ್‌ ಪ್ರೊಸೆಸಿಂಗ್‌ ಸಿಸ್ಟಮ್‌ ಸಮಾವೇಶಕ್ಕೆ ನಮಗೆ ಆಹ್ವಾನ ಸಿಕ್ಕಿದೆ’ ಎಂದು ಅವರು ಹೇಳಿದರು.

‘ಈ ತಂತ್ರಜ್ಞಾನಕ್ಕೆ ಮಾರು ಹೋಗಿರುವ ಮುಂಬೈ ಕೊಳೆಗೇರಿ ಪುನರ್‌ವಸತಿ ಪ್ರಾಧಿಕಾರ, ಮುಂಬೈ ಕೊಳೆಗೇರಿ ಅಭಿವದ್ಧಿ ಮಂಡಳಿ ಮತ್ತು ಮಹಾರಾಷ್ಟ್ರ ಸರ್ಕಾರ, ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಮುಂದಾಗಿವೆ. ಮುಂಬೈನಲ್ಲಿ 13 ವರ್ಷಗಳಲ್ಲಿ ಶೇ 35ರಷ್ಟು ಕೊಳೆಗೇರಿಗಳ ವಿಸ್ತೀರ್ಣ ಹೆಚ್ಚಾಗಿದ್ದು ನಮ್ಮ ತಂತ್ರಜ್ಞಾನದಿಂದ ಕಂಡು ಬಂದಿತು’ ಎಂದು ಅವರು ಹೇಳಿದರು.

ಕೊಳೆಗೇರಿ: ಪ್ರತಿ ಮನೆಯ ಚಿತ್ರ

ಈ ವಿಧಾನದ ಮೂಲಕ ಯಾವುದೇ ಕೊಳೆಗೇರಿಯ ಪ್ರತಿಯೊಂದು ಮನೆ, ಗುಡಿಸಲು, ಶೆಡ್‌ಗಳ ನಿರ್ದಿಷ್ಟ ಚಿತ್ರಗಳನ್ನು ಪಡೆಯಬಹುದು. ಅಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿರುವ ಬದಲಾವಣೆಗಳನ್ನೂ ಈ ತಂತ್ರಜ್ಞಾನ ಗುರುತಿಸುತ್ತದೆ. ಬದಲಾದ ಪ್ರದೇಶದ ನಕಾಶೆಯನ್ನೂ ತಯಾರಿಸಬಹುದು. ನಗರಾಡಳಿತಗಳಿಗೆ ಮೂಲಸೌಕರ್ಯ ಕಲ್ಪಿಸಲು ಇದರಿಂದ ಹೆಚ್ಚು ಸಹಾಯಕವಾಗುತ್ತದೆ. ಮುಂಬೈನಲ್ಲಿ ಶೇ 62 ರಷ್ಟು ಜನ ಕೊಳೆಗೇರಿಗಳಲ್ಲೇವಾಸಿಸುತ್ತಿದ್ದಾರೆ.

ಹೊಸ ತಂತ್ರಜ್ಞಾನದ ಕೆಲಸ

* ಕೊಳೆಗೇರಿ ಪ್ರದೇಶಗಳ ವಿಭಜನೆ, ಬದಲಾದ ಪ್ರದೇಶದ ಗುರುತಿಸುವಿಕೆ

* ಕೊಳೆಗೇರಿಗಳ ಕಾರ್ಯಯೋಜನೆ ರೂಪಿಸಲು ಸಹಾಯಕ

*ಅಧಿಕಾರಿಗಳ ಕಾರ್ಯಭಾರ ಕಡಿಮೆ ಮಾಡುವ ತಂತ್ರಜ್ಞಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT