ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣ ಮನರಂಜನಾ ನೀತಿ ರೂಪಿಸಲು ನಕಾರ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಹೈಕೋರ್ಟ್‌
Last Updated 7 ಆಗಸ್ಟ್ 2019, 18:55 IST
ಅಕ್ಷರ ಗಾತ್ರ

ಬೆಂಗಳೂರು: ಯೂಟ್ಯೂಬ್, ನೆಟ್‌ಫ್ಲೆಕ್ಸ್‌, ಹಾಟ್‌ಸ್ಟಾರ್ ಮತ್ತಿತರ ಕಂಪನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಚಲನಚಿತ್ರ, ಕಿರುಚಿತ್ರ, ಧಾರಾವಾಹಿ ಇನ್ನಿತರ ಮಲ್ಟಿ ಮೀಡಿಯಾ ವಿಡಿಯೋಗಳ ನಿಯಂತ್ರಣಕ್ಕೆ ಸೂಕ್ತ ನೀತಿ ರೂಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಪದ್ಮನಾಭ ಶಂಕರ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.

ನೆಟ್‌ಫ್ಲೆಕ್ಸ್‌ ಎಂಟರ್‌ಟೇನ್‌ಮೆಂಟ್ ಸರ್ವೀಸಸ್, ಯೂಟ್ಯೂಬ್ ಗೂಗಲ್ ಇಂಡಿಯಾ, ಹಾಟ್ ಸ್ಟಾರ್ ಇಂಡಿಯಾ, ಅಮೆಜಾನ್ ಪ್ರೈಮ್, ಅಮೆಜಾನ್ ಡೆವಲಪ್‌ಮೆಂಟ್ ಸೆಂಟರ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್, ಆಲ್ಟ್ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಕಂಪನಿಗಳು ಪ್ರದರ್ಶಿಸುವ ಚಿತ್ರಗಳನ್ನು ನಿಯಂತ್ರಣಕ್ಕೆ ಮನವಿ ಮಾಡಿ ಅರ್ಜಿ ಸಲ್ಲಿಸಲಾಗಿತ್ತು.

ಈ ಕಂಪನಿಗಳು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿವೆ. ಅದನ್ನು ಸಿನಿಮಾಟ್ರೋಗ್ರಫಿ ಕಾಯ್ದೆ-1952ರ ಸೆಕ್ಷನ್ 2(ಸಿ) ಅಡಿಗೆ ತರಬೇಕು ಅಥವಾ ಅವುಗಳ ನಿಯಂತ್ರಣಕ್ಕಾಗಿ ಪ್ರತ್ಯೇಕ ಶಾಸನ ರೂಪಿಸುವಂತೆ ಅರ್ಜಿದಾರರು ಕೋರಿದ್ದಾರೆ. ಆದರೆ, ಇವುಗಳಿಗೆ ಸಿನಿಮಾಟೋಗ್ರಫಿ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿತ್ತು.

ಅಲ್ಲದೆ, ನಿರ್ದಿಷ್ಟ ರೂಪದ ಶಾಸನ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯವು ನಿರ್ದೇಶನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅರ್ಜಿಯನ್ನು ಮಾನ್ಯ ಮಾಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು. ಈ ಮಧ್ಯೆ ಯಾವುದೇ ಸೆನ್ಸಾರ್‌ಗೆ ಒಳಗಾಗದೆ ವಿಡಿಯೋ ಪ್ರಸಾರ ಮಾಡುವುದು ಗಂಭೀರ ವಿಚಾರವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವನ್ನು ನ್ಯಾಯಾಲಯ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT