ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಅಕ್ರಮದ ಬಗ್ಗೆ ಪ್ರಶ್ನೆಗಳ ಸುರಿಮಳೆ

ರಾಜಕೀಯ ಪಕ್ಷಗಳಿಂದ ನಿಯಮ ಉಲ್ಲಂಘನೆ: ಪಕ್ಷೇತರರ ಅಸಮಾಧಾನ
Last Updated 14 ಏಪ್ರಿಲ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ಸಂದರ್ಭ ನಿಗದಿತ ಗಾತ್ರಕ್ಕಿಂತ ಹೆಚ್ಚು ಗಾತ್ರದ ಧ್ವಜಗಳನ್ನು ಬಳಸುತ್ತಿವೆ. ಬೈಕ್‌ ರ‍್ಯಾಲಿಗೆ ಅನುಮತಿ ಪಡೆದಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ಬಳಸುತ್ತಿವೆ. ಇದಕ್ಕೆ ಭರಿಸಿರುವ ವೆಚ್ಚದ ಮಾಹಿತಿ ನೀಡುವವರು ಯಾರು? ಆಯೋಗವೇನಾದರು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆಯೇ?

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ನಿಯಮ ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಪಕ್ಷೇತರ ಅಭ್ಯರ್ಥಿಗಳು ಹರಿಹಾಯ್ದ ಪರಿ ಇದು. ನಗರದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ವಿಶೇಷಾಧಿಕಾರಿಯಾಗಿ ನಿಯೋಜನೆಗೊಂಡಿರುವ ಭೂ ಕಂದಾಯ ಮತ್ತು ಭೂಮಾಪನಾ ಇಲಾಖೆಯ ಆಯುಕ್ತ ಮುನೀಶ್‌ ಮೌದ್ಗಿಲ್ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಜೊತೆ ಭಾನುವಾರ ಸಭೆ ನಡೆಸಿದರು. ಮಾದರಿ ನೀತಿಸಂಹಿತೆ ಉಲ್ಲಂಘನೆಗಳ ಬಗ್ಗೆ ಆಯೋಗವು ಮೌನ ವಹಿಸಿರುವ ಬಗ್ಗೆ ಈ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಕರ ಪತ್ರಗಳನ್ನು ಮುದ್ರಿಸುತ್ತಾರೆ. ಆದರೆ, ಚುನಾವಣಾ ವೆಚ್ಚ ತೋರಿಸುವಾಗ ಅದಕ್ಕಿಂತ ಭಾರಿ ಕಡಿಮೆ ಪ್ರಮಾಣ ನಮೂದಿಸುತ್ತಾರೆ.‌ಇದಕ್ಕೆಆಯೋಗ ಅವಕಾಶ ನೀಡಬಾರದು’ ಎಂದರು.

‘ಚುನಾವಣೆ ವೇಳೆ ಮದ್ಯ ಮಾರಾಟ ಹೆಚ್ಚಾಗಿದೆ. ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ಸ್ ಲಿಮಿಟೆಡ್‍ನ (ಎಂಎಸ್‌ಐಎಲ್‌) ಸಂಸ್ಥೆಯನ್ನೂ ಈ ಸಲುವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂತಹ ಚಟುವಟಿಕೆಯನ್ನು ನಿಯಂತ್ರಿಸಬೇಕು. ಅಭ್ಯರ್ಥಿಗಳ ವಾಹನಗಳಿಗೆ ಗ್ಲೋಬಲ್‌ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್)ಟ್ರ್ಯಾಕಿಂಗ್ ಅಳವಡಿಸಿದರೆ ಅವರ ಚಲನ-ವಲನದ ಮೇಲೆ ನಿಗಾ ಇಡಬಹುದು’ ಎಂದು ಕೆಲವರು ಸಲಹೆ ನೀಡಿದರು.

‘ಉಲ್ಲಂಘನೆಗಳ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುನಿಷ್ ಮೌದ್ಗಿಲ್ ಆಶ್ವಾಸನೆ ನೀಡಿದರು.

ಚುನಾವಣಾ ಅಕ್ರಮಗಳು ಕಂಡು ಬಂದರೆ ಸಹಾಯವಾಣಿ:1950ಕ್ಕೆ ಅಥವಾ ಬೆಂಗಳೂರು ಉತ್ತರ ಕ್ಷೇತ್ರದ ಸಹಾಯವಾಣಿ: 080-224 0515ಕ್ಕೆ ಮಾಹಿತಿ ನೀಡುವಂತೆ ಕೋರಿದರು.

ಪ್ರಕಟಣೆ ನೀಡದ ಅಭ್ಯರ್ಥಿಗಳು: ಎಚ್ಚರಿಕೆ
ತಮ್ಮ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ವಿದ್ಯುನ್ಮಾನ ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡದಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದುಬೆಂಗಳೂರು ಜಿಲ್ಲಾ ಚುನಾವಣಾ ಮೇಲ್ವಿಚಾರಣಾ ಅಧಿಕಾರಿ ಮುನೀಶ್‌ ಮೌದ್ಗಿಲ್ ಎಚ್ಚರಿಸಿದರು.

ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಪ್ರತಿನಿಧಿಗಳ ಜೊತೆಮೌದ್ಗಿಲ್ ಭಾನುವಾರ ಸಭೆ ನಡೆಸಿದರು. ಈ ವೇಳೆಉತ್ತರ ಲೋಕಸಭಾ ಕ್ಷೇತ್ರದ ಇಬ್ಬರು ಅಭ್ಯಥಿಗಳು ಇನ್ನೂ ಸಾರ್ವಜನಿಕ ಪ್ರಕಟಣೆ ನೀಡದಿರುವ ವಿಷಯ ತಿಳಿದು ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್‌ ಬಳಿ ವಿವರಣೆ ಕೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದೆ. ಮುಂದಿನ ಕ್ರಮಕ್ಕಾಗಿ ಆಯೋಗಕ್ಕೆ ಪತ್ರ ಬರೆಯಲಾಗುವುದು’ ಎಂದು ವಿವರಿಸಿದರು.

ಕೂಡಲೇ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳ ಕುರಿತು ಸಾರ್ವಜನಿಕ ಪ್ರಕಟಣೆ ನೀಡದಿರುವ ಅಭ್ಯರ್ಥಿಗಳ ಪಟ್ಟಿ ನೀಡುವಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ ತಾಕೀತು ಮಾಡಿದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಮೂರು ಬಾರಿ ಮೂರು ಪತ್ರಿಕೆಗಳಲ್ಲಿ ಹಾಗೂ ಮೂರು ಬಾರಿ ಟಿವಿಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಬೇಕು. ಇಲ್ಲವಾದಲ್ಲಿ ಅಂತಹ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮೌದ್ಗಿಲ್ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT