ಉಪನಗರ ರೈಲು ಯೋಜನೆಗೆ ವೇಗ

7
ತಿಂಗಳಲ್ಲಿ ವಿಶೇಷ ಉದ್ದೇಶದ ಘಟಕ ಸ್ಥಾಪನೆ: ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ

ಉಪನಗರ ರೈಲು ಯೋಜನೆಗೆ ವೇಗ

Published:
Updated:

ಬೆಂಗಳೂರು: ನಗರದಲ್ಲಿ ಉಪನಗರ ರೈಲು ಯೋಜನೆಯ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ಒಂದು ತಿಂಗಳಲ್ಲಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಸ್ಥಾಪಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ಹಾಗೂ ತಜ್ಞ ಪ್ರಶಾಂತ್ ಶ್ರೀನಿವಾಸ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ನಗರ ಭೂಸಾರಿಗೆ ನಿರ್ದೇಶನಾಲಯವು (ಡಲ್ಟ್‌ ) 2017ರ ಜುಲೈನಲ್ಲೇ ಎಸ್‌ಪಿವಿಯ ಕರಡನ್ನು ಸಿದ್ಧಪಡಿಸಿತ್ತು. ಸಮಗ್ರ ಯೋಜನೆ ಜಾರಿಗೊಳಿಸುವಾಗ ಯಾವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೋರಿ ರೈಲ್ವೆ ಇಲಾಖೆ ಡಲ್ಟ್‌ಗೆ ಪತ್ರ ಬರೆದಿತ್ತು.

ಕೇಂದ್ರ ಸರ್ಕಾರವು ಕಳೆದ ವರ್ಷ ಬಿಡುಗಡೆ ಮಾಡಿದ್ದ ಹೊಸ ಸಬ್‌ ಅರ್ಬನ್‌ ರೈಲು ನೀತಿಯ ಪ್ರಕಾರ ಒಟ್ಟು ಯೋಜನಾ ವೆಚ್ಚದಲ್ಲಿ ಶೇ 80ರಷ್ಟು ಅನುದಾನ ಹೊಂದಿಸುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಕೇಂದ್ರ ಸರ್ಕಾರ ಕೇವಲ ಶೇ 20ರಷ್ಟು ಹೂಡಿಕೆ ಮಾಡಲಿದೆ.

ಕೇಂದ್ರ ಸರ್ಕಾರ ಯೋಜನೆಯ ಶೇ 50ರಷ್ಟು ಪಾಲನ್ನು ಭರಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿತ್ತು. ಇದಕ್ಕೆ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ಮೇ ತಿಂಗಳಲ್ಲಿ ಒಪ್ಪಿಗೆ ಸೂಚಿಸಿದ್ದರು. ಎಸ್‌ಪಿವಿಯಲ್ಲಿ ರೈಲ್ವೆ ಶೇ 49 ಹಾಗೂ ಕರ್ನಾಟಕ ಸರ್ಕಾರ ಶೇ 51ರ ಪಾಲುದಾರಿಕೆ ಹೊಂದಿರುತ್ತವೆ.

ಈ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿರುವ 444 ಕಿ.ಮೀ. ರೈಲ್ವೆ ಮಾರ್ಗದ ಸದ್ಬಳಕೆಯೊಂದಿಗೆ, ಕೆಲವೆಡೆ ವಿಸ್ತರಣೆ, ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆಗಳು ಹಾಗೂ ರೈಲ್ವೆ ಮಾರ್ಗಗಳ ವಿದ್ಯುದೀಕರಣದ ಮೂಲಕ ಉಪನಗರ ರೈಲು ಸೌಲಭ್ಯ ಕಲ್ಪಿಸಲಾಗುತ್ತದೆ. ಇದರಿಂದ ನಗರದಲ್ಲಿ ತ್ವರಿತ ಸಂಚಾರಕ್ಕೆ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ. ಈಗಾಗಲೇ 15 ರೈಲುಗಳ ಸಂಪರ್ಕ ಒದಗಿಸಲಾಗಿದ್ದು, ₹1,745 ಕೋಟಿ ವೆಚ್ಚದಲ್ಲಿ 116 ಹೊಸ ರೈಲುಗಳ ಸೇವೆ ಒದಗಿಸಲು ಅವಕಾಶ ಸಿಗಲಿದೆ ಎಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು.

ಈ ಯೋಜನೆಗೆ 17,000 ಕೋಟಿ ಕಾದಿರಿಸಿದ್ದೇವೆ ಎಂದು ಬಜೆಟ್‌ ಭಾಷಣದಲ್ಲಿ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದರು. ಆದರೆ, ರೈಲ್ವೆ ಪಿಂಕ್‌ ಬುಕ್‌ನಲ್ಲಿರುವ ಮಾಹಿತಿ ಪ್ರಕಾರ ಈ ಯೋಜನೆಗೆ ₹ 12,061 ಕೋಟಿ ಅನುದಾನ ಮೀಸಲಿಡಲಾಗಿದೆ. ಇದಕ್ಕೆ ಸಾಂಕೇತಿಕವಾಗಿ ₹ 1 ಕೋಟಿ ಅನುದಾನ ಕಾದಿರಿಸಲಾಗಿದೆ.

ರೈಟ್ಸ್‌ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಶಿಫಾರಸು ಮಾಡಿರುವ ಪ್ರಕಾರ ನಗರದಲ್ಲಿ ಉಪನಗರ ರೈಲು ಯೋಜನೆಯ ಉದ್ದ 142.8 ಕಿ.ಮೀ. ಇದರ ಜೊತೆಗೆ ಕಂಟೋನ್ಮೆಂಟ್‌ ಮತ್ತು ವೈಟ್‌ಫೀಲ್ಡ್‌ ನಡುವಿನ 19 ಕಿ.ಮೀ ಉದ್ದದ ಮಾರ್ಗವನ್ನು ನಾಲ್ಕು ಹಳಿಗಳ ಮಾರ್ಗವನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

ನೈರುತ್ಯ ರೈಲ್ವೆಯು 9 ಪ್ರಮುಖ ಮಾರ್ಗಗಳನ್ನು ಸಬ್‌ಅರ್ಬನ್‌ ರೈಲು ಜಾಲಕ್ಕಾಗಿ ಗುರುತಿಸಿದೆ. ವರ್ತುಲಾಕಾರದ, ಅದನ್ನು ಅಡ್ಡ ಹಾದುಹೋಗುವ (ಡಯಾಗೊನಲ್‌) ರೈಲ್ವೆ ಜಾಲವನ್ನು ಇದು ಹೊಂದಿರಲಿದೆ. ನೆಲಮಂಗಲ, ರಾಜಾನಕುಂಟೆ, ಕೆಂಗೇರಿ, ದೇವನಹಳ್ಳಿ, ವೈಟ್‌ಫೀಲ್ಡ್‌, ಹೀಲಳಿಗೆ, ಯಶವಂತಪುರ, ಹೆಬ್ಬಾಳ, ಬೈಯಪ್ಪನಹಳ್ಳಿ, ಯಲಹಂಕ, ಕಂಟೋನ್ಮೆಂಟ್‌ ನಿಲ್ದಾಣಗಳು ಈ ಜಾಲದಲ್ಲಿ ಸೇರಿವೆ. ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವು ಈ ರೈಲು ಜಾಲದ ಕೇಂದ್ರಸ್ಥಾನದಲ್ಲಿರಲಿದೆ.

ಸಂಗೊಳ್ಳಿ ರಾಯಣ್ಣ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಬಿನ್ನಿಮಿಲ್‌ ಪ್ರದೇಶದಲ್ಲಿ ಸುಮಾರು 10 ಎಕರೆಯಷ್ಟು ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಅಗತ್ಯವಿದೆ. ಎಲೆಕ್ಟ್ರಿಕ್‌ ರೈಲುಗಳಿಗಾಗಿ ಡಿಪೊ ಹಾಗೂ ಶೆಡ್‌ಗಳನ್ನು ನಿರ್ಮಿಸಲು ನಗರದ ಹೊರವಲಯದಲ್ಲಿ 75 ಎಕರೆ ಜಾಗ ಬೇಕಾಗುತ್ತದೆ.

‘ಬೆಂಗಳೂರು ಮೆಟ್ರೊ ರೈಲು ಯೋಜನೆಯ ಮಾದರಿಯಲ್ಲೇ ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ಸ್ವಾಯತ್ತತೆ ಕೇಳಿದೆ. ಆಗ ದರ ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಸಿಗಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹಾಸನ ನಿಲ್ದಾಣದ ಸಮಸ್ಯೆ: ಹಾಸನದಲ್ಲಿ ರೈಲು ನಿಲ್ದಾಣದಿಂದ ಹೊಸ ಬಸ್‌ ನಿಲ್ದಾಣ ಸಾಕಷ್ಟು ದೂರದಲ್ಲಿದೆ. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

ವೆಚ್ಚ ಹಂಚಿಕೊಳ್ಳುವ ಮಾದರಿಯಲ್ಲಿ ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ 36 ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಆದಷ್ಟು ಬೇಗ ಹಣ ಬಿಡುಗಡೆ ಮಾಡಬೇಕು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಕೋರಿದರು. ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

**

‘ಜನವರಿಯಲ್ಲಿ ಡಿಪಿಆರ್‌ ಸಿದ್ಧ’

ಉಪನಗರ ರೈಲು ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಜನವರಿಯಲ್ಲಿ ಸಿದ್ಧಗೊಳ್ಳಲಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತ ತಿಳಿಸಿದರು.

‘ಯೋಜನೆಗೆ ಶೇ 50 ಹಣಕಾಸು ನೀಡಲು ರೈಲ್ವೆ ಇಲಾಖೆ ಸಮ್ಮತಿ ಸೂಚಿಸಿದೆ’ ಎಂದೂ ತಿಳಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !