ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀರಾಮಾಯಣ ದರ್ಶನಂ’ ಪ್ರದರ್ಶನ

ನ.23 ಮತ್ತು 24 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ
Last Updated 19 ನವೆಂಬರ್ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಂಗಾಯಣ ವತಿಯಿಂದ ನ.23 ಮತ್ತು 24 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕುವೆಂಪು ವಿರಚಿತ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ‘ಶ್ರೀ ರಾಮಾಯಣ ದರ್ಶನಂ’ ಕೃತಿಯ ನಾಟಕ ರೂಪ ಪ್ರದರ್ಶನ ನಡೆಯಲಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಜೆ 6ಕ್ಕೆ ಆರಂಭವಾಗುವ ನಾಟಕಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಕುವೆಂಪು ಅವರ ಈ ಕೃತಿಗೆ 50 ವರ್ಷಗಳು ತುಂಬಿದ ಸವಿನೆನಪಿಗಾಗಿ ರಂಗರೂಪಕ್ಕಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದೆವೆ’ ಎಂದರು.

‘ಕೃತಿಯಲ್ಲಿ ಚಿತ್ರಿಸಲಾದ ವೈಚಾರಿಕ ದರ್ಶನಗಳನ್ನು ಪ್ರಸ್ತುತ ಸಮಾಜದ ಮುಂದಿಡುವ ಪ್ರಯತ್ನ ಇದಾಗಿದ್ದು, ಕೃತಿಯನ್ನು ಓದದೆ ಇರುವವರು ನೆರವಾಗಿ ನಾಟಕವನ್ನು ನೋಡಿ ಅರ್ಥೈಸಿಕೊಳ್ಳಬಹುದು. ಪ್ರದರ್ಶನ ಯಶಸ್ವಿಗೊಳಿಸಲು 2 ತಂಡಗಳನ್ನು ರಚಿಸಲಾಗಿದೆ. ನ.27 ಮತ್ತು 28 ರಂದು ಮೈಸೂರಿನಲ್ಲಿ ಪ್ರದರ್ಶನ ನಡೆಯಲಿದೆ’ ಎಂದು ರಂಗಾಯಣದ ಜಂಟಿ ನಿರ್ದೇಶಕ ಮಂಜುನಾಥಸ್ವಾಮಿ ತಿಳಿಸಿದರು.

ನಾಟಕದ ವಿಶೇಷ: ‘ಒಟ್ಟು 95 ಪಾತ್ರಧಾರಿಗಳಿದ್ದು, 92 ಪಾತ್ರಗಳಿವೆ. ಬಾಣವಿಲ್ಲದ ರಾಮ, ಬಾಲವಿಲ್ಲದ ಹನುಮಂತನನ್ನು ಕಾಣಬಹುದು. ಅಂದಿನ ಕಾಲದಲ್ಲಿದ್ದ ಶ್ರೀಲಂಕಾ, ಅಯೋಧ್ಯೆಯ ವಸ್ತ್ರಾಲಂಕಾರ ಮರುಸೃಷ್ಟಿಸಲಾಗಿದೆ. ನಾಗಾಲ್ಯಾಂಡ್‌ ಬುಡಕಟ್ಟು ಜನರ ಸಂಗೀತ ಸೇರಿದಂತೆ ಜಾನಪದ, ಹಿಂದೂಸ್ಥಾನಿ ಸಂಗೀತವನ್ನು ಅಳವಡಿಸಲಾಗಿದೆ. ಕಂದ ಪದ್ಯ, ರಗಳೆಯ ವಿಶೇಷವೂ ಇದೆ’ ಎಂದರು.

ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಪಡೆಯಲು ‌rangayana.org ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT