ಅನಾಥ ಶವಗಳ ಅಂತ್ಯಕ್ರಿಯೆಗೆ ‘ಎಸ್‌ಒಪಿ’!

7
ಹೆಡ್‌ಕಾನ್‌ಸ್ಟೆಬಲ್‌ ಪುತ್ರನ ಸಾವಿನ ಪ್ರಕರಣದಿಂದ ಕಲಿತ ಪಾಠ

ಅನಾಥ ಶವಗಳ ಅಂತ್ಯಕ್ರಿಯೆಗೆ ‘ಎಸ್‌ಒಪಿ’!

Published:
Updated:

ಬೆಂಗಳೂರು: ಉಡುಪಿ ಹೆಡ್‌ಕಾನ್‌ಸ್ಟೆಬಲ್ ಪುತ್ರನ ಅಂತ್ಯಕ್ರಿಯೆ ಅವಾಂತರದಿಂದ ಎಚ್ಚೆತ್ತಿರುವ ರಾಜ್ಯ ಪೊಲೀಸ್ ಇಲಾಖೆ, ವಾರಸುದಾರರಿಲ್ಲದ ಶವಗಳನ್ನು ಸುಡಲು ಪೊಲೀಸರಿಗೆ ಏಕರೂಪದ ಕಾರ್ಯಾಚರಣಾ ಮಾರ್ಗಸೂಚಿಗಳನ್ನು (ಎಸ್‌ಒಪಿ) ಜಾರಿಗೆ ತರುತ್ತಿದೆ.

‘ಶವ ಪತ್ತೆಯಾದ ಕೂಡಲೇ, ಬೇಕಾಬಿಟ್ಟಿಯಾಗಿ ಸುಟ್ಟು ಹಾಕಕೂಡದು. ಇದು ಶವಕ್ಕೂ ಅಪಮಾನ ಮಾಡಿದಂತೆ’ ಎಂಬ ಘೋಷವಾಕ್ಯದಡಿ ಇಲಾಖೆಯು ಈ ವ್ಯವಸ್ಥೆ ಪ್ರಾರಂಭಿಸುತ್ತಿದ್ದು, ಇನ್ನು ಒಂದು ವಾರದಲ್ಲಿ ಹೊಸ ಮಾರ್ಗಸೂಚಿಗಳ ಸುತ್ತೋಲೆ ರಾಜ್ಯದ ಎಲ್ಲ ಠಾಣೆಗಳಿಗೂ ರವಾನೆಯಾಗಲಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅಪರಾಧ ಹಾಗೂ ತಾಂತ್ರಿಕ ವಿಭಾಗದ ಎಡಿಜಿಪಿ ಎಂ.ಎ.ಸಲೀಂ, ‘ಶಿಕ್ಷಣಕ್ಕಾಗಿಯೋ, ಉದ್ಯೋಗ ಅರಸಿಯೋ ಒಬ್ಬ ವ್ಯಕ್ತಿ ವಾಸಸ್ಥಳ ಬಿಟ್ಟು ಬೇರೆ ಕಡೆ ಬಂದಿರುತ್ತಾನೆ. ಆತನನ್ನು ನಂಬಿ ದೊಡ್ಡ ಕುಟುಂಬವೇ ಇರುತ್ತದೆ. ಆತನ ಬರುವಿಕೆಗಾಗಿ ಅವರು ಸದಾ ಕಾಯುತ್ತಿರುತ್ತಾರೆ. ಹೀಗಾಗಿ, ಇಂಥ ಪ್ರಕರಣಗಳಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ’ ಎಂದು ಹೇಳಿದರು.

‘ಅಪರಿಚಿತ ಶವ ಪತ್ತೆ ಪ್ರಕರಣಗಳನ್ನು ಸಿಬ್ಬಂದಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಒಂದು ದಿನ ಶವಾಗಾರದಲ್ಲಿಟ್ಟು ಸುಟ್ಟು ಬಿಡುತ್ತಾರೆ. ಆ ನಂತರ ಮೃತನ ಕುಟುಂಬ ಸದಸ್ಯರನ್ನು ಹುಡುಕುವ ಪ್ರಯತ್ನ ಕೂಡ ಮಾಡುವುದಿಲ್ಲ. ಎಸ್‌ಒಪಿ ಜಾರಿ ನಂತರ ಇನ್‌ಸ್ಪೆಕ್ಟರ್‌ಗಳೇ ಖುದ್ದು ತನಿಖೆ ನಡೆಸಬೇಕಾಗುತ್ತದೆ. ವ್ಯಕ್ತಿ ಮೃತಪಟ್ಟ ಬಗ್ಗೆ ಆತನ ಕುಟುಂಬಕ್ಕೆ ತಿಳಿಸುವವರೆಗೂ ಪ್ರಕರಣ ಮುಕ್ತಾಯ ಆಗುವುದಿಲ್ಲ’ ಎಂದು ಮಾಹಿತಿ ನೀಡಿದರು.

ಶವ ತೇಲಿಸುವ ವಿದ್ಯೆ: ‘ನದಿಗಳಲ್ಲಿ, ರಾಜಕಾಲುವೆ, ನಾಲೆಗಳಲ್ಲಿ ಶವ ಪತ್ತೆಯಾದಾಗ ಸಿಬ್ಬಂದಿ ‘ಚಾಣಾಕ್ಷ’ರಂತೆ ವರ್ತಿಸಿಬಿಡುತ್ತಾರೆ. ತಮ್ಮ ಠಾಣೆ ವ್ಯಾಪ್ತಿಯಲ್ಲಿರುವ ಶವ ಮೇಲೆತ್ತಿದರೆ ತನಿಖೆಯನ್ನು ನಾವು ನಡೆಸಬೇಕಾಗುತ್ತದೆ ಎಂಬ ಕಾರಣಕ್ಕೆ, ಐದಾರು ಮೀಟರ್ ಅಥವಾ ಅರ್ಧ ಕಿಲೊ ಮೀಟರ್ ದೂರದಲ್ಲಿ ಶುರುವಾಗುವ ಮತ್ತೊಂದು ಠಾಣಾ ವ್ಯಾಪ್ತಿಗೆ ಶವವನ್ನು ನೀರಿನಲ್ಲೇ ತಳ್ಳಿಬಿಡುತ್ತಾರೆ.

ನಂತರ ತಾವೇ ಮುಂದಿನ ಠಾಣೆಗಳಿಗೆ ಕರೆ ಮಾಡಿ, ‘ನಿಮ್ಮ ವ್ಯಾಪ್ತಿಯ ಕಾಲುವೆ/ನಾಲೆಯಲ್ಲಿ ಶವ ಬಿದ್ದಿದೆಯಂತೆ. ಯಾರೋ ಠಾಣೆಗೆ ಕರೆ ಮಾಡಿ ಹೇಳಿದರು’ ಎಂದು ಮಾಹಿತಿಯನ್ನೂ ಕೊಟ್ಟು ಬಿಡುತ್ತಾರೆ. ಇಂಥ ಪ್ರಕರಣವೊಂದರಲ್ಲಿ ಕೆಲ ದಿನಗಳ ಹಿಂದೆ ಕುಶಾಲನಗರದ ಇಬ್ಬರು ಪೊಲೀಸರು ಅಮಾನತಾಗಿದ್ದರು’ ಎಂದು ಇನ್‌ಸ್ಪೆಕ್ಟರ್‌ ಒಬ್ಬರು ವಿವರಿಸಿದರು.

**

ಪಾಠ ಕಲಿಸಿದ ಆ ಪ್ರಕರಣ

ಉಡುಪಿ ಹೆಡ್‌ಕಾನ್‌ಸ್ಟೆಬಲ್ ಸಿದ್ಧಪ್ಪ ಅವರ ಪುತ್ರ ಸಿ.ಎಸ್.ಗೌತಮ್, ಬೆಂಗಳೂರಿನ ದಯಾನಂದಸಾಗರ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಎಲೆಕ್ಟ್ರಾನಿಕ್‌ ಸಿಟಿಯ ಕರುಣಾಕರ ರೆಡ್ಡಿ ಕೆರೆಯಲ್ಲಿ ಇದೇ ಸೆ.23ರಂದು ಆತ ಶವವಾಗಿ ಪತ್ತೆಯಾಗಿದ್ದ. ‘ವಾರಸುದಾರರು ಬರಲಿಲ್ಲ’ ಎಂದು ಪರಪ್ಪನ ಅಗ್ರಹಾರ ಪೊಲೀಸರು ಅಂತ್ಯಕ್ರಿಯೆ ಮುಗಿಸಿದ್ದರು.

ಆದರೆ, ‘ಗೌತಮ್ ಎರಡು ದಿನಗಳಿಂದ ಹಾಸ್ಟೆಲ್‌ಗೆ ಬಂದಿಲ್ಲ’ ಎಂದು ವಾರ್ಡನ್ ಹೇಳಿದ ಬಳಿಕ ಮಗನನ್ನು ಹುಡುಕಿಕೊಂಡು ಸಿದ್ಧಪ್ಪ ಬೆಂಗಳೂರಿಗೆ ಬಂದಿದ್ದರು. ಅಷ್ಟರಲ್ಲಾಗಲೇ ಅಂತ್ಯಕ್ರಿಯೆಯೇ ಮುಗಿದು ಹೋಗಿದ್ದರಿಂದ ನೊಂದು ಬರೀ ಅಸ್ಥಿಯೊಂದಿಗೆ ಉಡುಪಿಗೆ ಮರಳಿದ್ದರು. ಈ ಮನಕಲಕುವ ಘಟನೆ ಬಳಿಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದ ಡಿಜಿಪಿ, ಅಂಥ ಪ್ರಸಂಗಗಳಿಗೆ ಕಡಿವಾಣ ಹಾಕಲು ಎಸ್‌ಒಪಿ ಜಾರಿಗೆ ಮುಂದಾಗಿದ್ದಾರೆ.

ಮಾರ್ಗಸೂಚಿಗಳು ಯಾವುವು?

* ಅಪರಿಚಿತ ಶವಗಳು ಸಿಕ್ಕಾಗ ವಾರಸುದಾರರ ಬರುವಿಕೆಗಾಗಿ ಕನಿಷ್ಠ 72 ತಾಸು (3 ದಿನ) ಕಾಯಬೇಕು.

* ಮೃತ ವ್ಯಕ್ತಿ ವಿದೇಶಿಗನಾಗಿದ್ದರೆ, ವಾರದವರೆಗೆ ಅಂತ್ಯಕ್ರಿಯೆ ಮಾಡಕೂಡದು.

* ಈ ಕಾಯುವಿಕೆ‌ ಅವಧಿಯಲ್ಲಿ ವಾರಸುದಾರರ ಪತ್ತೆ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು.

* ದೇಹದ ಮೇಲೆ ಹಚ್ಚೆ, ಗಾಯದ ಗುರುತುಗಳಿದ್ದರೆ ಅವನ್ನು ಫೋಟೊ ಸಮೇತ ದಾಖಲಿಸಿಕೊಳ್ಳುವುದು ಕಡ್ಡಾಯ.

* ವಾರಸುದಾರರು ಸಿಗದಿದ್ದಲ್ಲಿ ಮೃತನ ರಕ್ತದ ಮಾದರಿ ಹಾಗೂ ಬೆರಳ ಮುದ್ರೆ ಸಂಗ್ರಹಿಸಿ ಅಂತ್ಯಕ್ರಿಯೆ ಮುಗಿಸಬೇಕು.

* ಇನ್‌ಸ್ಪೆಕ್ಟರ್ ನೇತೃತ್ವದಲ್ಲೇ ತನಿಖೆ ನಡೆಯಬೇಕು. ಇಡೀ ಪ್ರಕ್ರಿಯೆಯ ಹೊಣೆ ಅವರದ್ದೇ.

**
ಅಂಕಿ ಅಂಶ
1,24,717 - ಐದು ವರ್ಷದಲ್ಲಿ ಪತ್ತೆಯಾದ ಶವಗಳು
52,541 - ವಾರಸುದಾರರು ಪತ್ತೆಯಾಗದ ಪ್ರಕರಣಗಳು

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 3

  Sad
 • 1

  Frustrated
 • 0

  Angry

Comments:

0 comments

Write the first review for this !