‘ನಂಬರ್‌ ಒನ್‌ ರಾಜ್ಯ ಮಾಡುವೆ’

7

‘ನಂಬರ್‌ ಒನ್‌ ರಾಜ್ಯ ಮಾಡುವೆ’

Published:
Updated:
Prajavani

ಬೆಂಗಳೂರು: ‘ನನ್ನ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕರ್ನಾಟಕವನ್ನು ದೇಶದ ಭೂಪಟದಲ್ಲಿ ನಂಬರ್‌ ಒನ್‌ ರಾಜ್ಯ ಮಾಡದಿದ್ದರೆ ರಾಜಕಾರಣ ತ್ಯಜಿಸಿ, ಪಕ್ಷದ ಕಚೇರಿ ಬಂದ್‌ ಮಾಡುವುದು ಒಳ್ಳೆಯದು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

‘ನಾನು ರಾಜ್ಯವನ್ನು ನಂಬರ್‌ ಒನ್‌ ಸ್ಥಾನಕ್ಕೆ ತರುತ್ತೇನೆ. ನಮ್ಮ ‍ಪಕ್ಷ ಅಧಿಕಾರದಲ್ಲಿದ್ದಾಗ ಬೆಂಗಳೂರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. 25 ವರ್ಷಗಳ ಹಿಂದೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಉಪ ನಗರ ರೈಲು ಯೋಜನೆ ಸಿದ್ಧಪಡಿಸಿದ್ದರು. ಇದು ₹ 36 ಸಾವಿರ ಕೋಟಿಯ ಯೋಜನೆ’ ಎಂದರು.

ಈ ಯೋಜನೆಗೆ ನೀತಿ ಆಯೋಗದ ಒಪ್ಪಿಗೆ ಕೊಡಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ. ಬೆಂಗಳೂರಿಗೆ ಇನ್ನೂ ಅನೇಕ ಯೋಜನೆಗಳನ್ನು ನಾವು ರೂಪಿಸಿದ್ದೇವೆ ಎಂದು ವಿವರಿಸಿದರು. ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಕೈಗೊತ್ತಿಕೊಳ್ಳುವ ಇಂಗಿತವನ್ನು ಮುಖ್ಯಮಂತ್ರಿ ಪರೋಕ್ಷವಾಗಿ ವ್ಯಕ್ತಪಡಿಸಿದರು.

‘ನಾನು ಅತ್ಯಂತ ಪ್ರಯಾಸದಿಂದ ಸರ್ಕಾರ ನಡೆಸುತ್ತಿದ್ದೇನೆ. ಹೇಗೆ ಆಡಳಿತ ನಡೆಯುತ್ತಿದೆ ಎಂಬುದನ್ನು ಬಿಡಿಸಿ ಹೇಳಲು ಹೋಗುವುದಿಲ್ಲ. ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ಮಾಡಿದಾಗ ನಮ್ಮ ಕೆಲವು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಾನು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಹೊಸತರಲ್ಲಿ ಇದೇ ಕಚೇರಿಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದೆ. ಅದಕ್ಕೆ ಬೇರೆಯದೇ ಕಥೆ ಕಟ್ಟಲಾಯಿತು’ ಎಂದು ಅವರು ವಿಷಾದಿಸಿದರು.

‘ಮಾಧ್ಯಮಗಳು ದಿನವೂ ನಮ್ಮ ಸರ್ಕಾರವನ್ನು ಟೀಕಿಸುತ್ತಿವೆ. ನಮ್ಮ ಸರ್ಕಾರ ‘ಟೇಕಾಫ್‌’ ಆಗಿಲ್ಲ ಎಂದು ಬೊಬ್ಬೆ ಹಾಕುತ್ತಿವೆ. ಈ ಟೀಕೆಗಳಿಗೆ ಮಹತ್ವ ಕೊಡಲು ಹೋಗುವುದಿಲ್ಲ’ ಎಂದು ಕುಮಾರಸ್ವಾಮಿ ನುಡಿದರು.

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿ ಕೆಲಸ ಮಾಡುವುದು ಕಷ್ಟ. ಸರ್ಕಾರದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕುಮಾರಸ್ಬಾಮಿ ಸಾಕಷ್ಟು ನೋವಿನಿಂದ ಸರ್ಕಾರ ನಡೆಸುತ್ತಿದ್ದಾರೆ.‍ ಪ್ರಾದೇಶಿಕ ಪಕ್ಷಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಜೆಡಿಎಸ್‌ ವರಿಷ್ಠ ದೇವೇಗೌಡರು ಹೇಳಿದರು.

‘ಅಪ್ಪ– ಮಕ್ಕಳನ್ನು ಮೂಲೆಗುಂಪು ಮಾಡುವುದಾಗಿ ಯಡಿಯೂರಪ್ಪ ಹೇಳುತ್ತಿದ್ದಾರೆ. ನಾವು ಅಂಥ ಪಾಪ ಏನು ಮಾಡಿದ್ದೇವೆ. ಒಂದು ಹಂತದಲ್ಲಿ ಮಂತ್ರಿ ಮಾಡಿದರೆ ಜೆಡಿಎಸ್‌ಗೆ ಬರುತ್ತೇನೆ ಎಂಬುದಾಗಿ ಹೇಳಿದ್ದ ಅವರು, ಈಗ ನಮ್ಮ ವಿರುದ್ಧವೇ ಮಾತನಾಡುತ್ತಿರುವುದು ಸರಿಯೇ’ ಎಂದು ಗೌಡರು ಕಿಡಿ ಕಾರಿದರು.  

Tags: 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !