‘ಹಟಕ್ಕೆ ಬಿದ್ದು ಸೇತುವೆ ನಿರ್ಮಿಸುತ್ತಿಲ್ಲ’

7
ಯೋಜನೆಯನ್ನು ಮತ್ತೆ ಸಮರ್ಥಿಸಿಕೊಂಡ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

‘ಹಟಕ್ಕೆ ಬಿದ್ದು ಸೇತುವೆ ನಿರ್ಮಿಸುತ್ತಿಲ್ಲ’

Published:
Updated:

ಬೆಂಗಳೂರು: ಹೆಬ್ಬಾಳದಿಂದ ಬಸವೇಶ್ವರ ವೃತ್ತದವರೆಗೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಈ ಯೋಜನೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಸಂಚಾರ ದಟ್ಟಣೆ ನಿವಾರಿಸಬೇಕಾದ ಅನಿವಾರ್ಯದಿಂದಾಗಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆಯೇ ಹೊರತು ನಮಗೆ ಬೇರಾವ ಉದ್ದೇಶವೂ ಇಲ್ಲ. ನಾವೇನೂ ಹಟಕ್ಕೆ ಬಿದ್ದು ಈ ಯೊಜನೆ ಕೈಗೆತ್ತಿಕೊಳ್ಳುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಯೋಜನೆಯ ಅಂದಾಜು ವೆಚ್ಚ ಹಾಗೂ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಡಿಪಿಆರ್‌ ಸಿದ್ಧಗೊಂಡ ಬಳಿಕ ಅದನ್ನು ತಾಂತ್ರಿಕ ಸಮಿತಿ ಹಾಗೂ ತಜ್ಞರ ಸಮಿತಿಯಿಂದ ಪರಾಮರ್ಶೆಗೆ ಒಳಪಡಿಸುತ್ತೇವೆ. ಬಳಿಕ ಯೋಜನೆಯ ಸಾಧಕ ಬಾಧಕಗಳ ಚರ್ಚೆಗೂ ಮುಕ್ತ ಅವಕಾಶ ಕಲ್ಪಿಸುತ್ತೇವೆ. ಟೀಕೆಗಳನ್ನೂ ಸ್ವಾಗತಿಸುತ್ತೇವೆ. ಡಿಪಿಆರ್‌ ಕುರಿತು ಸಾರ್ವಜನಿಕರಿಂದ ಸಲಹೆ, ಸೂಚನೆ ಪಡೆದ ಬಳಿಕವೇ ಈ ಯೋಜನೆ ಕೈಗೆತ್ತಿಕೊಳ್ಳುತ್ತೇವೆ’ ಎಂದರು.

‘ಈ ಯೋಜನೆಗೆ ಹಸಿರು ನ್ಯಾಯಮಂಡಳಿಯಿಂದಲೂ ಒಪ್ಪಿಗೆ ಪಡೆಯುತ್ತೇವೆ. ನಗರದ ಸಂಚಾರ ದಟ್ಟಣೆ ನಿವಾರಣೆ ದೃಷ್ಟಿಯಿಂದ ಈ ಕಾಮಗಾರಿ ಎಷ್ಟು ಅನಿವಾರ್ಯ ಎಂಬುದನ್ನು ನ್ಯಾಯಮಂಡಳಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಕುಮಾರಸ್ವಾಮಿ ನಿಲುವು ಸ್ಪಷ್ಟಪಡಿಸಲಿ: ಕೋಟ

ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿಲುವು ಸ್ಪಷ್ಟಪಡಿಸಲಿ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕರಾಗಿದ್ದಾಗ ಕುಮಾರಸ್ವಾಮಿ ಯೋಜನೆಯನ್ನು ವಿರೋಧಿಸಿದ್ದರು. ಕಿಕ್‌ ಬ್ಯಾಕಿನ ಆರೋಪ ಮಾಡಿದ್ದರು. ಯೋಜನೆಗೆ ಈಗ ಅವರ ಒಪ್ಪಿಗೆ ಇದೆಯೇ’ ಎಂದು ಪ್ರಶ್ನಿಸಿದರು.

ಮರ ಸ್ಥಳಾಂತರ 

ಈ ಯೋಜನೆ ಭಾರಿ ಪ್ರಮಾಣದಲ್ಲಿ ಹಸಿರು ನಾಶಕ್ಕೆ ಕಾರಣವಾಗುತ್ತದೆ ಎಂದು ಜನ ಆತಂಕ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ, ‘ಈ ಕಾಮಗಾರಿ ನಡೆಸಬೇಕಾದ ಸ್ಥಳದಲ್ಲಿ 812 ಮರಗಳಿವೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಸಣ್ಣ ಪುಟ್ಟ ಮರಗಳೂ ಸೇರಿವೆ. ಇವುಗಳಲ್ಲಿ ಕೆಲವನ್ನು ಸ್ಥಳಾಂತರ ಮಾಡುತ್ತೇವೆ. ಅನಿವಾರ್ಯವಾದರೆ ಮಾತ್ರ ಮರಗಳನ್ನು ಕಡಿಯುತ್ತೇವೆ’ ಎಂದರು.

‘ನಗರದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ನಗರದಲ್ಲಿ 1 ಕೋಟಿ ಸಸಿಗಳನ್ನು ನೆಟ್ಟು ಬೆಳೆಸುವುದಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಜಾಗ ಲಭ್ಯವಿರುವ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸುತ್ತಿದ್ದೇವೆ. ಮಳೆಗಾಲದಲ್ಲಿ ಶಾಲಾ ಕಾಲೇಜುಗಳು ಹಾಗೂ ಕಚೇರಿಗಳ ಬಳಿ ಹಸಿರು ಬೆಳೆಸಲು ಸಸಿ ಒದಗಿಸುತ್ತೇವೆ. ಸಾರ್ವಜನಿಕರು ತಮ್ಮ ಜಾಗದಲ್ಲಿ ಬೆಳೆಸುವುದಕ್ಕೂ ಸಸಿಗಳನ್ನು ನೀಡುತ್ತೇವೆ. ಇದರಿಂದ ನಗರದ ಹಸಿರು ವಲಯ ಹೆಚ್ಚಳವಾಗಲಿದೆ’ ಎಂದು ತಿಳಿಸಿದರು.

‘ಎರಡು ವರ್ಷಗಳಲ್ಲಿ ₹ 60 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಬೆಳೆಸಲಾಗಿದೆ’ ಎಂದರು.

ಉಕ್ಕಿನ ಸೇತುವೆ ಖಾತೆ ನೀಡಿಲ್ಲ: ರೇವಣ್ಣ

‘ನನಗೆ ಉಕ್ಕಿನ ಸೇತುವೆ ಖಾತೆ ನೀಡಿಲ್ಲ. ರಸ್ತೆ ಮಾಡುವ ಖಾತೆ ನೀಡಿದ್ದಾರೆ. ರಸ್ತೆ ಬಗ್ಗೆ ಕೇಳಿದರೆ ಏನೋ ಹೇಳಬಹುದು’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

‘ಈ ವಿಚಾರದ ಬಗ್ಗೆ ಸಂಬಂಧಪಟ್ಟ ಸಚಿವರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಜತೆಗೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುತ್ತಾರೆ’ ಎಂದರು.

ತರಾತುರಿಯಲ್ಲಿ ಸೇತುವೆ ನಿರ್ಮಾಣ ಮಾಡ್ತಿದ್ದಾರೆ ಎಂದು ಈ ಹಿಂದೆ ಆರೋಪ ವ್ಯಕ್ತವಾಗಿತ್ತು. ಈಗ ಎಲ್ಲ ಸಿದ್ದತೆ ಮಾಡಿಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಿರಬೇಕು’ ಎಂದರು.

ಜನ ಏನು ಹೇಳುತ್ತಾರೆ....

ಯೋಜನೆ ವೆಚ್ಚ ಜನರಿಗಾಗಿ ಬಳಸಿ

ಮೇಲ್ಸೇತುವೆ ಯೋಜನೆ ನಗರ ಅಭಿವೃದ್ಧಿಯತ್ತ ಸಾಗಲು ಪರಿಣಾಮಕಾರಿ ಆಗುವುದಿಲ್ಲ. ಬದಲಿಗೆ ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಯೋಜನೆಯ ವೆಚ್ಚವನ್ನು ರಸ್ತೆಗಳ ದುರಸ್ತಿಗೆ, ಬಡವರ ಮತ್ತು ಹಿಂದುಳಿದ ಜನರ ಕಲ್ಯಾಣಕ್ಕೆ ಮೀಸಲಿಟ್ಟರೆ ಪ್ರಯೋಜನ ಆಗಲಿದೆ.

ಪ್ರವೀಣ್, ಯಲಚೇನಹಳ್ಳಿ

***

ಗುಂಡಿ ಇರುವ ರಸ್ತೆ ದುರಸ್ತಿಗೊಳಿಸಿ

ಸಂಚಾರ ದಟ್ಟಣೆಯ ನಿವಾರಣೆಗಾಗಿ ಸಂಪೂರ್ಣ ಗುಂಡಿಗಳಿಂದ ಇರುವ ರಸ್ತೆಗಳನ್ನು ಸರಿಪಡಿಸಲಿ. ಯೋಜನೆಯನ್ನು ಕೈಬಿಟ್ಟು ಬಡವರಿಗೆ ಪರಿಹಾರ ನೀಡಿದರೆ ಅವರ ಬಾಳು ಸಮೃದ್ಧಿಯಾಗಲಿದೆ.

ಶ್ರೀನಿವಾಸ, ಕೆಂಗೇರಿ

***

ಹಳ್ಳಿಗಳ ಉದ್ಧಾರಕ್ಕೆ ಶ್ರಮಿಸಿ

ಉಕ್ಕಿನ ಸೇತುವೆ ಯೋಜನೆಯಿಂದ ಹಣ‌ ಪೋಲು ಮಾಡಿ ಜೇಬು ತುಂಬಿಸಿಕೊಳ್ಳುವುದರ ಬದಲಿಗೆ ಹಳ್ಳಿಗಳ ಉದ್ಧಾರಕ್ಕೆ ಶ್ರಮಿಸಿ. ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇಲ್ಲದಿದ್ದಾಗ ಇದನ್ನು ವಿರೋಧಿಸಿದ್ದರು. ಅಧಿಕಾರಕ್ಕೇರಿಯೂ ಸುಮ್ಮನಿದ್ದರೆ ಅವರು ಜನರ ನಂಬಿಕೆ ಕಳೆದುಕೊಳ್ಳುವುದು ಖಚಿತ.

ಮಂಜುನಾಥ ಬೆಳ್ಳಿಗೆರೆ, ಬೆಂಗಳೂರು

***

ಮರ ಅಳಿದು ಮಾಲಿನ್ಯ ಹೆಚ್ಚಾಗಲಿದೆ

ಈ ಯೋಜನೆಯಿಂದ ಸಂಚಾರ ದಟ್ಟಣೆ ನಿವಾರಿಸಲು ಸಾಧ್ಯವಿಲ್ಲ. ಇದರಿಂದ ನೂರಾರು ಮರಗಳನ್ನು ಕಳೆದುಕೊಳ್ಳಲಿದ್ದೇವೆ. ಉಕ್ಕಿನ ಸೇತುವೆಯಿಂದ ಮಾಲಿನ್ಯ ಹೆಚ್ಚಾಗುತ್ತದೆಯೇ ಹೊರತು ಪರಿಹಾರ ಸಿಗುವುದಿಲ್ಲ.

ಶಿವಾನಿ ಎಸ್‌.ನಾಯ್ಡು, ವಿದ್ಯಾರಣ್ಯಪುರ

***

ಮಾರಣಹೋಮ ಸಲ್ಲದು

ಸೇತುವೆ ನೆಪದಲ್ಲಿ ನೂರಾರು ಮರಗಳ ಮಾರಣಹೋಮ ಸಲ್ಲದು. ಸಂಚಾರ ದಟ್ಟಣೆಯ ಪರಿಹಾರಕ್ಕೆ ತಜ್ಞರ ಅಭಿಪ್ರಾಯದಂತೆ ನಡೆದುಕೊಳ್ಳಲಿ. ವಾಹನ ನಿಲುಗಡೆ, ಪಾದಚಾರಿ ಮಾರ್ಗವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿ

ಎನ್.ಕೃಷ್ಣಪ್ಪ, ಮಹಾಲಕ್ಷ್ಮಿ ಲೇಔಟ್

***

ಸೇತುವೆಯೇ ಪರಿಹಾರವಲ್ಲ

ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆಯೊಂದೇ ಪರಿಹಾರವಲ್ಲ. ಮೆಟ್ರೊ ಸಂಪರ್ಕ ಕಲ್ಪಿಸುವುದರಿಂದಲೂ ದಟ್ಟಣೆ ಸಮಸ್ಯೆ ಬಗೆಹರಿಸಬಹುದು. ₹ 1,800 ಕೋಟಿಯ ಅರ್ಧದಷ್ಟು ಹಣವನ್ನು ಪರಿಸರ ಉಳಿವಿಗೆ ಉಪಯೋಗಿಸಿದರೆ ನಗರಕ್ಕೆ ಆಮ್ಲಜನಕವಾದರೂ ಸಿಗುತ್ತದೆ.

ವಿಜಯ್ ಹಾರೋಗೆರೆ, ‌ಅಬ್ಬಿಗೆರೆ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !