ಬುಧವಾರ, ಆಗಸ್ಟ್ 21, 2019
28 °C

ಬೀದಿ ನಾಯಿ; ಸಂಘರ್ಷವೊ? ಸಾಮರಸ್ಯವೋ?

Published:
Updated:
Prajavani

ಬೆಂಗಳೂರು: ಬೀದಿನಾಯಿಗಳು ಕಚ್ಚಿ ಯಾರಾದರೂ ಗಾಯಗೊಂಡರೆ ಅಥವಾ ಸತ್ತರೆ ಸಾಕು, ಅಷ್ಟೂ ಬೀದಿನಾಯಿಗಳ ವಿರುದ್ಧ ಜನ ಮುಗಿಬೀಳುತ್ತಾರೆ. ‘ಬೀದಿ ನಾಯಿ ಹಾವಳಿ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂಬ ಕೂಗು ಎಬ್ಬಿಸುತ್ತಾರೆ.

ಈ ಕೂಗು ಅಷ್ಟಕ್ಕೇ ನಿಲ್ಲುವುದಿಲ್ಲ. ನಾಯಿಗಳನ್ನು ಗುಟ್ಟಾಗಿ ಬೇರೆ ಕಡೆ ಸಾಗಿಸುವ ಅಥವಾ ವಿಷ ಹಾಕಿ ಕೊಲ್ಲುವ, ಅವುಗಳನ್ನು ಹಿಂಸಿಸುವ ಕಾರ್ಯಗಳೂ ಅವ್ಯಾಹತವಾಗಿ ನಡೆಯುತ್ತವೆ. ಯಾವುದೋ ಒಂದು ಮೂಕಪ್ರಾಣಿ ಕಚ್ಚಿದ ಕಾರಣಕ್ಕೆ ಆ ಬೀದಿಯಲ್ಲಿರುವ ಅಷ್ಟೂ ನಾಯಿಗಳ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಜನ ಮುಂದಾಗುತ್ತಾರೆ. 

ಬಾಲ ಅಲ್ಲಾಡಿಸುತ್ತಾ ಮನುಷ್ಯರ ಮೇಲೆ ಪ್ರೀತಿ ತೋರಿಸುವ ನಾಯಿಗಳು ಕೆಲವೊಮ್ಮೆ ವ್ಯಗ್ರವಾಗುವುದೇಕೆ? ಬೀದಿನಾಯಿಗಳ ಜೊತೆ ಸಹಬಾಳ್ವೆ ಸಾಧ್ಯವಿಲ್ಲವೇ? ನಾಯಿಗಳನ್ನು ಕೊಲ್ಲುವುದು ಅಥವಾ ಅವುಗಳ ಜೊತೆ ಸಂಘರ್ಷಕ್ಕೆ ಇಳಿಯುವುದರಿಂದ ಸಮಸ್ಯೆ ಬಗೆಹರಿಯುತ್ತದೆಯೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದ ಹೊರತು ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ ಎನ್ನುತ್ತಾರೆ ಬೀದಿನಾಯಿಗಳ ಬಗ್ಗೆ ಅನುಕಂಪ ಹೊಂದಿರುವ ಪ್ರಾಣಿಪ್ರಿಯರು.

ನಾಯಿಗಳಿಗೂ ಬದುಕುವ ಹಕ್ಕಿದೆ. ಅದನ್ನು ಮನುಷ್ಯರಾದ ನಾವು ಗೌರವಿಸಬೇಕು. ಅವುಗಳು ಸಾವಿರಾರು ವರ್ಷಗಳಿಂದ ಮನುಷ್ಯನ ಜೊತೆ ಸಹಬಾಳ್ವೆ ನಡೆಸುತ್ತಾ ಬಂದಿವೆ. ಜನಜಂಗುಳಿ, ವಾಹನ ದಟ್ಟಣೆಯಂತಹ ನಗರೀಕರಣದ ದುಷ್ಪರಿಣಾಮದಿಂದ ಮನುಷ್ಯರು ಎದುರಿಸುವಂತಹದ್ದೇ ಆತಂಕಗಳನ್ನು ನಾಯಿಗಳೂ ಎದುರಿಸುತ್ತಿವೆ. ಅವುಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು ಹಾಗೂ ಅವುಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಬಾಳ್ವೆ ನಡೆಸುವುದೊಂದೇ ನಮಗಿರುವ ದಾರಿ ಎನ್ನುತ್ತಾರೆ ಅವರು.

ಬೀದಿನಾಯಿ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲವೇಕೆ?

ಬಿಬಿಎಂಪಿ ಪ್ರತಿ ವರ್ಷವೂ ಬಜೆಟ್‌ನಲ್ಲಿ ಹೆಚ್ಚೂ ಕಡಿಮೆ ₹ 3 ಕೋಟಿಯನ್ನು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್‌ ನಿಯಂತ್ರಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುತ್ತಿದೆ. ಆದರೂ ನಾಯಿಗಳ ಸಂತಾನ ನಿಯಂತ್ರಣಕ್ಕೆ ಬರುತ್ತಿಲ್ಲವೇಕೆ ಎಂಬುದು ಯಕ್ಷ ಪ್ರಶ್ನೆ. ಇದಕ್ಕೆ ಕಾರಣಗಳೂ ಇವೆ ಎನ್ನುತ್ತಾರೆ ಪಾಲಿಕೆಯ ಪಶುಸಂಗೋಪನಾ ಇಲಾಖೆಯು ಜಂಟಿ ನಿರ್ದೇಶಕ ಡಾ.ಎಸ್‌.ಶಶಿಕುಮಾರ್‌.

‘ನಾಯಿಗಳು ಸಾಮಾನ್ಯವಾಗಿ ಹುಟ್ಟಿದ 10 ತಿಂಗಳಿಗೆ ಸಂತಾನೋತ್ಪತ್ತಿಯ ಸಾಮರ್ಥ್ಯ ಪಡೆಯುತ್ತವೆ. ಗರ್ಭಧಾರಣೆಯಾಗಿ ಮರಿ ಹಾಕುವ ನಡುವಿನ ಅವಧಿ ಕೇವಲ 64 ದಿನ. ಅವುಗಳು ವರ್ಷದಲ್ಲಿ ಎರಡು ಬಾರಿ ಬೆದೆಗೆ ಬರುತ್ತವೆ. ಬೀದಿನಾಯಿಗಳ ಒಂದು ಜೋಡಿಯಿಂದ ಕೇವಲ ಆರೇ ವರ್ಷಗಳಲ್ಲಿ 60 ಸಾವಿರ ನಾಯಿಗಳು ಹುಟ್ಟಬಲ್ಲವು. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ನಾಯಿಗಳನ್ನು ಹಿಡಿಯುವಾಗ ಒಂದು ಜೋಡಿ ತಪ್ಪಿಸಿಕೊಂಡರೂ ವರ್ಷದಲ್ಲಿ ಅವುಗಳ ಸಂಖ್ಯೆ ಬಹಳ ಪಟ್ಟು ಹೆಚ್ಚಳ ಕಾಣುತ್ತದೆ’ ಎಂದು ಅವರು ವಿವರಿಸಿದರು.

ಹದ್ದುಬಸ್ತಿನಲ್ಲಿಡುವುದು ಹೇಗೆ?

‘ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು (ಎಬಿಸಿ) ನಿರಂತರವಾಗಿ ಹಾಗೂ ವ್ಯಾಪಕವಾಗಿ ನಡೆಸಿದರೆ ಮಾತ್ರ ಬೀದಿನಾಯಿಗಳ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿ ಇಡಬಹುದು. ನಿರಂತರತೆ ಕಾಯ್ದುಕೊಳ್ಳದೇ ಹೋದರೆ ಅವುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತದೆ’ ಎನ್ನುತ್ತಾರೆ ಪಶುಸಂಗೋಪನಾ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಡಾ. ಪರ್ವೇಜ್‌ ಅಹ್ಮದ್‌ ಪಿರಾನ.

‘ಬೀದಿನಾಯಿಗಳ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಬೇಕಾದರೆ ಎಬಿಸಿ ಕಾರ್ಯಕ್ರಮವನ್ನಷ್ಟೇ ಅನುಷ್ಠಾನಗೊಳಿಸಿದರೆ ಸಾಲದು. ಅದು ವ್ಯಾಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯ ಯಾವುದೇ ಸ್ಥಳದಿಂದ ಕರೆ ಬಂದರೂ ತಕ್ಷಣ ಸ್ಥಳಕ್ಕೆ ಹೋಗಿ ನಾಯಿ ಹಿಡಿದು ಅವುಗಳಿಗೆ ಶಸ್ತ್ರಚಿಕಿತ್ಸೆ ನೀಡುವಂತಹ ವ್ಯವಸ್ಥೆ ರೂಪಿಸಬೇಕು. ಪ್ರಾಣಿಪ್ರಿಯರ ಸಂಘಟನೆಗಳು, ಬೀದಿನಾಯಿಗಳಿಗೆ ಊಟ ಹಾಕುವವರ ಬೆಂಬಲವನ್ನು ಪಡೆದು ಇದಕ್ಕಾಗಿ ಸಮಗ್ರ ಕಾರ್ಯಕ್ರಮ ರೂಪಿಸಬೇಕು’ ಎಂದರು.

‘ನಾಯಿಗಳು ಜನರನ್ನು ಅಟ್ಟಿಸಿಕೊಂಡು ಬಂದಾಗ, ನಾಯಿ ಕಚ್ಚಿ ಮಕ್ಕಳು ಸತ್ತಾಗ ಜನ ಆಕ್ರೋಶಗೊಳ್ಳುವುದು ಸಹಜ. ಅಂತಹವರಿಗೆ ವಾಸ್ತವ ತಿಳಿಹೇಳಬೇಕು. ವಿಶೇಷವಾಗಿ, ನಾಯಿಗಳ ದಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುವ ಕಡೆ ನೆಲೆಸಿರುವ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ನಾಯಿಗಳ ಜೊತೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ತಿಳಿವಳಿಕೆ ಮೂಡಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ನಾಯಿಗಳನ್ನು ಹಿಡಿಯುವುದು ಸುಲಭದ ಕೆಲಸವಲ್ಲ. ನಾಯಿಗಳು ಸೂಕ್ಷ್ಮಗ್ರಾಹಿಗಳು. ನಾಯಿ ಹಿಡಿಯುವವರ ತಂಡ ಬಂದ ತಕ್ಷಣವೇ ಅವು ಮೋರಿ ಕೆಳಗೆ ಹಾಗೂ ಸಂದು ಗೊಂದಿನಲ್ಲಿ ನುಸುಳಿ ಅಡಗಿಕೊಳ್ಳುತ್ತವೆ. ಗಂಟೆಗಟ್ಟಲೆ ಕಾದರೂ ಅವು ಹೊರಗೆ ಬರುವುದೇ ಇಲ್ಲ. ಇದರಲ್ಲಿ ಪರಿಣತಿ ಹೊಂದಿರುವವನ್ನು ಬಳಸಬೇಕು. ಅವರನ್ನೂ ಗೌರವದಿಂದ ನಡೆಸಿಕೊಳ್ಳಬೇಕು. ಎಬಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುವವರೆಗೆ ಸಕಾಲದಲ್ಲಿ ಹಣ ಪಾವತಿ ಆಗುವಂತೆ ನೋಡಿಕೊಳ್ಳಬೇಕು’ ಎಂದರು.

ಬೀದಿ ನಾಯಿಗಳು ಕಚ್ಚುವುದೇಕೆ?

ನಾಯಿಗಳು ಪ್ರಮುಖವಾಗಿ ಮೂರು ಕಾರಣಗಳಿಂದಾಗಿ ಕಚ್ಚುತ್ತವೆ ಎನ್ನುತ್ತಾರೆ ಬೀದಿನಾಯಿಗಳ ಸಂತಾನ ನಿಯಂತ್ರಣದಲ್ಲಿ ಸಾಕಷ್ಟು ಕೆಲಸ ಮಾಡಿರುವ ಡಾ. ಪರ್ವೇಜ್‌ ಅಹ್ಮದ್‌ ಪಿರಾನ.

ಪ್ರಚೋದನೆ: ಮಕ್ಕಳಿಗೆ ನಾಯಿಗಳು ಕಚ್ಚುವ ಶೇ 90ರಷ್ಟು ಪ್ರಕರಣಗಳು ಪ್ರಚೋದನೆಯಿಂದಾಗಿ ಆಗುವಂತಹವು. ಮಲಗಿರುವ ಅಥವಾ ತನ್ನ ಪಾಡಿಗೆ ತಾನಿರುವ ನಾಯಿಗೆ ಕಲ್ಲೆಸೆಯುವುದು, ಹೊಡೆಯುವುದು ಮುಂತಾದ ಕೀಟಲೆ ಮಾಡಿದರೆ ಅವು ಸಿಟ್ಟಿನಿಂದ ಕಚ್ಚುವುದುಂಟು.

ಪ್ರಾಂತ್ಯದೊಳಗೆ ಪ್ರವೇಶ: ಯಾರಾದರೂ ಅಪರಿಚಿತರು ನಾಯಿಯ ಪ್ರಾಂತ್ಯದೊಳಗೆ ಪ್ರವೇಶಿಸಿದರೆ ಭಯಹುಟ್ಟಿಸುವ ಸಲುವಾಗಿ ಅವು ದಾಳಿ ನಡೆಸುತ್ತವೆ. ಏಕಾಏಕಿ ಬೊಗಳುತ್ತಾ ಬರುವ ನಾಯಿಗಳೆಲ್ಲಾ ಕಚ್ಚುತ್ತವೆ ಎಂದರ್ಥವಲ್ಲ.

ಅವು ಆಹಾರ ತಿನ್ನುವಾಗ ಯಾರಾದರೂ ಹತ್ತಿರ ಹೋದರೆ, ಸಿಟ್ಟಿನಿಂದ ಕಚ್ಚುವ ಸಾಧ್ಯತೆಗಳಿರುತ್ತವೆ.

ಈ ಮೂರು ಕಾರಣಗಳಲ್ಲದೆಯೂ ನಾಯಿಗಳು ವ್ಯಗ್ರವಾಗುವುದುಂಟು. ಅದನ್ನು ಈ ರೀತಿ ಗುರುತಿಸಬಹುದು.

* ನಾಯಿಗಳ ಸಂತಾನೋತ್ಪಾದನಾ ಅವಧಿಯಲ್ಲಿ ಒಂದು ಹೆಣ್ಣು ನಾಯಿಯನ್ನು ಕೂಡಲು ಹಲವಾರು ಗಂಡುನಾಯಿಗಳು ಪೈಪೋಟಿ ನಡೆಸುತ್ತವೆ. ಇಂತಹ ಸಂದರ್ಭದಲ್ಲಿ ಅವು ಸಹಜವಾಗಿಯೇ ವ್ಯಗ್ರವಾಗಿರುತ್ತವೆ. ಆಗ ಅವುಗಳ ಸಮೀಪ ಹೋದವರನ್ನು ಕಚ್ಚುವ ಸಾಧ್ಯತೆ ಇರುತ್ತದೆ.

* ಮರಿಗಳನ್ನು ಹಾಕಿರುವ ಹೆಣ್ಣು ನಾಯಿಯಲ್ಲಿ ತಾಯಿಯ ಕಾಳಜಿ ಸಹಜವಾಗಿ ಇರುತ್ತದೆ. ಮರಿಗಳ ಬಳಿಗೆ ಯಾರಾದರೂ ಅಪರಿಚಿತರು ಹೋದರೆ ಅವರಿಗೆ ಆ ಬೀದಿ ನಾಯಿ ಕಚ್ಚುವ ಸಾಧ್ಯತೆ ಜಾಸ್ತಿ.

* ರೇಬಿಸ್‌ ಬಂದ ನಾಯಿಗಳು ಸಹಜವಾಗಿಯೇ ವ್ಯಗ್ರವಾಗಿರುತ್ತವೆ. ಒಂದು ಸ್ಥಳದಲ್ಲಿ ಅರೆ ಗಳಿಗೆಯೂ ನಿಲ್ಲದೇ ಓಡಾಡುವ ಅವು ಸಿಕ್ಕ ಸಿಕ್ಕವರನ್ನು ಕಚ್ಚುವ ಸಾಧ್ಯತೆ ಹೆಚ್ಚು.‌

* ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಲುವಾಗಿ ಹಿಡಿಯುವ ನಾಯಿಗಳನ್ನು ಅದೇ ಜಾಗದಲ್ಲಿ ಬಿಡದೇ ಬೇರೆಲ್ಲೋ ಬಿಟ್ಟರೆ ಅವು ದಿಕ್ಕುತಪ್ಪಿದಂತಾಗುತ್ತವೆ. ಅಂತಹ ಸಂದರ್ಭದಲ್ಲೂ ಅವು ಅಪರಿಚಿತರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.

ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವೇನು?
ಎರಡು ವರ್ಷಗಳ ಹಿಂದೆ (2016–17ರಲ್ಲಿ) ನಗರದಲ್ಲಿ ಎಬಿಸಿ ಕಾರ್ಯಕ್ರಮದಲ್ಲಿ ಸರಿಯಾಗಿ ನಡೆಯಲೇ ಇಲ್ಲ. ನಗರದಾದ್ಯಂತ ನಾಯಿಗಳ ಸಂಖ್ಯೆ ಹೆಚ್ಚಳವಾಗಲು ಇದು ಕೂಡಾ ಕಾರಣ.

ಭಾರತೀಯ ಪಾಲಿಕೆ ಪ್ರಾಣಿ ಕಲ್ಯಾಣ ಮಂಡಳಿಯಿಂದ (ಎಡಬ್ಲ್ಯುಬಿಐ) ಮಾನ್ಯತೆ ಪಡೆಯದ ಸಂಸ್ಥೆಗಳಿಗೂ ಪಾಲಿಕೆ ಎಬಿಸಿ ಕಾರ್ಯಕ್ರಮ ಅನುಷ್ಠಾನದ ಗುತ್ತಿಗೆ ನೀಡಿತ್ತು. ‘ಅವರು ಎಡಬ್ಲ್ಯುಬಿಐ ಮಾನದಂಡ ಅನುಸರಿಸುತ್ತಿಲ್ಲ. ಅವರು ನಡೆಸುವ ಶಸ್ತ್ರಚಿಕಿತ್ಸೆಗಳೂ ವೈಫಲ್ಯ ಕಾಣುತ್ತಿವೆ. ನಾಯಿಗಳನ್ನು ಹಿಡಿಯುವಾಗ ಅವುಗಳ ಜೊತೆ ಕ್ರೂರವಾಗಿ ನಡೆದುಕೊಳ್ಳುತ್ತಾರೆ’ ಎಂಬ ದೂರುಗಳು ಬಂದಿದ್ದವು. ಹಾಗಾಗಿ ಕೆಲವು ಗುತ್ತಿಗೆಗಳನ್ನು ಪಾಲಿಕೆ ರದ್ದುಪಡಿಸಿತ್ತು.

ಪಾಲಿಕೆ ಈಗ ಮತ್ತೆ ಎಂಟೂ ವಲಯಗಳಲ್ಲಿ ಎಬಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಟೆಂಡರ್‌ ಕರೆದಿದ್ದು, ಅದು ಅಂತಿಮ ಹಂತದಲ್ಲಿದೆ. ಇನ್ನಾದರೂ ಈ ಕಾರ್ಯಕ್ರಮ ಸಮರ್ಪಕವಾಗಿ ಜಾರಿಯಾಗುತ್ತದೋ ಕಾದು ನೋಡಬೇಕಿದೆ.

**

**

* 1.85 ಲಕ್ಷ - 2012ರ ಗಣತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ನಾಯಿಗಳು
* 4 ಲಕ್ಷ - ಈಗ ಇರಬಹುದಾದ ನಾಯಿಗಳ ಅಂದಾಜು ಸಂಖ್ಯೆ
* 600 - ಪ್ರತಿ ವಲಯದಲ್ಲಿ ತಿಂಗಳಲ್ಲಿ ನಡೆಯುವ ಸರಾಸರಿ ಎಬಿಸಿ ಶಸ್ತ್ರಚಿಕಿತ್ಸೆಗಳು

Post Comments (+)