ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲಲ್ಲಿ ಮುಳುಗುವ ರಸ್ತೆಗಳು: ಅಪಘಾತ ಹೆಚ್ಚಳ

ವಿದ್ಯುತ್ ದೀಪ ಅಳವಡಿಸಲು ಸಂಚಾರ ಪೊಲೀಸರ ಮನವಿ * ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಿದ ಪೊಲೀಸ್ ಇಲಾಖೆ
Last Updated 28 ಏಪ್ರಿಲ್ 2019, 20:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಹಲವು ರಸ್ತೆಗಳಲ್ಲಿ ವಿದ್ಯುತ್‌ ದೀಪಗಳ ಕೊರತೆ ಇದ್ದು, ರಾತ್ರಿಯಾಗುತ್ತಿದ್ದಂತೆ ಅವು ಕತ್ತಲಲ್ಲಿ ಮುಳುಗುತ್ತವೆ. ಇಂತಹ ರಸ್ತೆಗಳಲ್ಲಿ ರಾತ್ರಿವೇಳೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಗರಗಳಲ್ಲಿ ಇದುವರೆಗಿನ ಅಪಘಾತಗಳ ಬಗ್ಗೆ ಅಧ್ಯಯನ ನಡೆಸಿದ್ದ ಸಂಚಾರ ಪೊಲೀಸರು, ವಿದ್ಯುತ್ ದೀಪವಿಲ್ಲದ ಕತ್ತಲು ಆವರಿಸಿದ್ದ ರಸ್ತೆಗಳಲ್ಲೇ ಹೆಚ್ಚು ಅವಘಡಗಳು ಸಂಭವಿಸಿದ್ದನ್ನು ಪತ್ತೆ ಹಚ್ಚಿದ್ದಾರೆ.

ಕತ್ತಲಿನಲ್ಲಿ ಮುಳುಗುವ ರಸ್ತೆಗಳಠಾಣೆವಾರು ಪಟ್ಟಿ ಸಿದ್ಧಪಡಿಸಿರುವ ಪೊಲೀಸರು, ಹೆಚ್ಚುವರಿ ಪೊಲೀಸ್‌ ಕಮಿಷನರ್ (ಸಂಚಾರ) ಪಿ.ಹರಿಶೇಖರನ್‌ ಅವರಿಗೆ ವರದಿ ಸಲ್ಲಿಸಿದ್ದಾರೆ. ಅದನ್ನು ಆಧರಿಸಿ ಹರಿಶೇಖರನ್ ಅವರು ಇಂತಹ ರಸ್ತೆಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಂತೆ ಹಾಗೂ ಕೆಟ್ಟಿರುವ ವಿದ್ಯುತ್ ದೀಪಗಳನ್ನು ದುರಸ್ತಿ ಮಾಡಿಸುವಂತೆ ಬಿಬಿಎಂಪಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

‘ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಜನಸಂಖ್ಯೆ ಹಾಗೂ ವಾಹನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂಥ ನಗರದ ರಸ್ತೆಗಳಲ್ಲಿ ದಿನದ 24 ಗಂಟೆ ವಾಹನಗಳ ಸಂಚಾರವಿರುತ್ತದೆ. ಕೆಲ ರಸ್ತೆಗಳಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಿದ್ದರಿಂದ ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ‍್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಸಂಭವಿಸಿದ್ದ ಅಪಘಾತಗಳ ಬಗ್ಗೆ ಆಯಾ ಠಾಣೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದರು. ಕತ್ತಲು ಆವರಿಸಿದ್ದ ರಸ್ತೆಯಲ್ಲಿ ಮಂದ ಬೆಳಕಿನ ವಾಹನಗಳಿಂದ ಅಪಘಾತಗಳು ಸಂಭವಿಸುತ್ತಿದ್ದುದ್ದು ತಿಳಿಯಿತು. ಅಂಥ ರಸ್ತೆಗಳಲ್ಲಿ ಪರಿಶೀಲನೆ ನಡೆಸಿ, ಎಲ್ಲೆಲ್ಲಿ ವಿದ್ಯುತ್ ದೀಪಗಳ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡು ಪ್ರಸ್ತಾವ ಸಿದ್ಧಪಡಿಸಲಾಗಿದೆ’ ಎಂದರು.

ಪಾದಚಾರಿಗಳಿಗೇ ಹೆಚ್ಚು ಗಾಯ: ‘ಬೆಂಗಳೂರಿನಲ್ಲಿ ಜನರು ಹಗಲು ಹಾಗೂ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುತ್ತಾರೆ. ರಾತ್ರಿ ಕೆಲಸ ಮುಗಿಸಿದ ಅನೇಕರು ರಸ್ತೆಯಲ್ಲಿ ನಡೆದುಕೊಂಡು ಮನೆಗಳಿಗೆ ಹೋಗುತ್ತಾರೆ. ರಸ್ತೆಯಲ್ಲಿ ಕತ್ತಲು ಇರುವುದರಿಂದ ಸಂಭವಿಸುವ ಅಪಘಾತಗಳಿಂದ ಪಾದಚಾರಿಗಳಿಗೆ ಅಪಾಯ ಹೆಚ್ಚು’ ಎಂದು ಅವರು ಹೇಳಿದರು.

‘ಕತ್ತಲು ಹೆಚ್ಚು ಇರುವ ರಸ್ತೆಗಳಲ್ಲಿ ಯಾರಾದರೂ ವಾಹನಗಳನ್ನು ವೇಗವಾಗಿ ಚಲಾಯಿಸಿಕೊಂಡು ಹೋದರೆ, ಅಕ್ಕ– ಪಕ್ಕದಲ್ಲಿ ಸಾಗುವ ಪಾದಚಾರಿಗಳು ಕಾಣಿಸುವುದಿಲ್ಲ. ಬೇಗ ಮನೆ ಸೇರುವ ಧಾವಂತದಲ್ಲಿರುವ ಹಾಗೂ ರಸ್ತೆ ದಾಟಲು ಯತ್ನಿಸುವ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚು’ ಎಂದು ವಿವರಿಸಿದರು.

‘ಹಳೇ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಿಂದ ಮಣಿಪಾಲ್ ಆಸ್ಪತ್ರೆವರೆಗಿನ ರಸ್ತೆಯಲ್ಲಿ ವಿದ್ಯುತ್‌ ದೀಪಗಳ ಕೊರತೆ ಇದೆ. ರೋಗಿಗಳು, ಅವರ ಸಂಬಂಧಿಕರು ಹಾಗೂ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವವರು ಈ ರಸ್ತೆ ಬಳಸುತ್ತಾರೆ. ರಸ್ತೆಯಲ್ಲಿರುವ ಕತ್ತಲಿನಿಂದ ಇದುವರೆಗೂ ಐದಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೆಳಸೇತುವೆಯಲ್ಲೂ ಕತ್ತಲು: ‘ದೊಮ್ಮಲೂರು ಕೆಳಸೇತುವೆ ಸೇರಿದಂತೆ ನಗರದ ಹಲವು ಸೇತುವೆ ಬಳಿ ರಾತ್ರಿಯಾಗುತ್ತಿದ್ದಂತೆ ಕತ್ತಲು ಆವರಿಸಿಕೊಳ್ಳುತ್ತಿದೆ. ಅಲ್ಲೆಲ್ಲ ಒಂದೂ ವಿದ್ಯುತ್ ದೀಪವೂ ಇಲ್ಲ. ಅದರಿಂದ ಅಪಘಾತಗಳ ಜೊತೆಗೆ ಸುಲಿಗೆಯಂಥ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಬಿಬಿಎಂಪಿಯವರು ವಿದ್ಯುತ್ ದೀಪ ಅಳವಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅಪಘಾತಗಳ ಜೊತೆಗೆ ಅಪರಾಧ ಕೃತ್ಯಗಳಿಗೂ ಇದರಿಂದ ಕಡಿವಾಣ ಹಾಕಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಕತ್ತಲಲ್ಲಿ ಮುಳುಗುವ ಪ್ರಮುಖ ರಸ್ತೆಗಳು

* ಲಾಲ್‌ಬಾಗ್‌ನ ಮರಿಗೌಡ ರಸ್ತೆ

* ಆರ್‌ಆರ್‌ಎಂಆರ್‌ ರಸ್ತೆ

* ಬಿಟಿಸಿ ರಸ್ತೆ

* ಕಸ್ತೂರಬಾ ರಸ್ತೆ

* ಹಳೇ ವಿಮಾನ ನಿಲ್ದಾಣ ರಸ್ತೆಯ ನಿರ್ಗಮನ ದ್ವಾರದಿಂದ ಮಣಿಪಾಲ್ ಆಸ್ಪತ್ರೆ ರಸ್ತೆ

* ಡಿಕನ್ಸನ್ ರಸ್ತೆ

* ಸರ್ಜಾಪುರ ರಸ್ತೆಯ ಇಬ್ಬಲೂರು ಕಡೆಯಿಂದ ಕಾರ್ಮೆಲ್‌ರಾಮ್‌ ವೃತ್ತದವರೆಗಿನ ರಸ್ತೆ (ಬಿಬಿಎಂಪಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಉಲ್ಲೇಖಿಸಿರುವ ರಸ್ತೆಗಳು)

ಅಪರಾಧ ಚಟುವಟಿಕೆ ತಾಣ

‘ರಾಜಧಾನಿಯ ರಸ್ತೆಗಳಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮಾಡುವ ಜವಾಬ್ದಾರಿ ಬಿಬಿಎಂಪಿಯದ್ದು. ಆದರೆ, ಹಲವೆಡೆ ಇದುವರೆಗೂ ದೀಪ ಅಳವಡಿಸಿಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಯೊಬ್ಬರು ದೂರಿದರು.

‘ಕತ್ತಲು ಇರುವ ರಸ್ತೆಗಳು ಅಪರಾಧ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ರಸ್ತೆಯ ಅಕ್ಕ–ಪಕ್ಕದಲ್ಲಿ ಅವಿತುಕೊಂಡು ದುಷ್ಕರ್ಮಿಗಳು, ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇಂಥ ರಸ್ತೆಗಳಲ್ಲಿ ಓಡಾಡಲು ಜನ ಸಹ ಭಯಪಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT