ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂ ಪಕ್ಷಗಳ ನಡುವೆ ಜಿದ್ದಾಜಿದ್ದಿ ಹೋರಾಟ

Last Updated 4 ಜೂನ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ದೀರ್ಘ ಕಾಲದಿಂದ ಬಿಜೆಪಿಯ ಹಿಡಿತದಲ್ಲೇ ಇರುವ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡವಾಗಿದೆ. ಕ್ಷೇತ್ರದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಸಮ್ಮಿಶ್ರ ಸರ್ಕಾರದಲ್ಲಿ ಮಿತ್ರ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರತ್ಯೇಕವಾಗಿಯೇ ಕಣಕ್ಕಿಳಿದು ಗೆಲುವನ್ನು ಕಸಿದುಕೊಳ್ಳಲು ಹಂಬಲಿಸುತ್ತಿವೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳ ವ್ಯಾಪ್ತಿ ಹೊಂದಿರುವ ನೈರುತ್ಯ ಶಿಕ್ಷಕರ ಕ್ಷೇತ್ರ ನಾಲ್ಕು ದಶಕಗಳಿಂದ ಬಿಜೆಪಿ ಹಿಡಿತದಲ್ಲಿದೆ. ನಿರಂತರ ಗೆಲುವು ದಾಖಲಿಸಿಕೊಂಡು ಬಂದಿರುವ ಬಿಜೆಪಿ ಎರಡು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿರುವ ಗಣೇಶ್ ಕಾರ್ಣಿಕ್ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದೆ. 2012ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 160 ಮತಗಳ ಅಂತರದಿಂದ ಸೋತಿದ್ದ ಕೆ.ಕೆ.ಮಂಜುನಾಥ್ ಕುಮಾರ್ ಕಾಂಗ್ರೆಸ್‌ ಅಭ್ಯರ್ಥಿ. ಒಮ್ಮೆ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎಸ್‌.ಎಲ್‌.ಭೋಜೇಗೌಡ ಅವರನ್ನು ಜೆಡಿಎಸ್‌ ಅಖಾಡಕ್ಕೆ ಇಳಿಸಿದೆ.

ಈ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಒಂಬತ್ತು ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೇ ದುಡಿದಿರುವ ಕೆಲವರು ಈ ಬಾರಿ ಚುನಾವಣಾ ಕಣದಲ್ಲಿದ್ದಾರೆ. ಇನ್ನು ಕೆಲವರಿಗೆ ಇದು ಎರಡನೇ ಚುನಾವಣೆ. ಉಪನ್ಯಾಸಕ, ಪತ್ರಕರ್ತರಾಗಿದ್ದ ಡಾ.ಅರುಣ್ ಹೊಸಕೊಪ್ಪ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ರಮೇಶ, ಮಂಗಳೂರಿನ ಶಿಕ್ಷಕ ಅಲೋಶಿಯಸ್‌ ಡಿಸೋಜ ಪಕ್ಷೇತರರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಉದ್ದನೆಯ ಪಟ್ಟಿ ಹಿಡಿದು ಮತದಾರರನ್ನು ಎಡತಾಕುತ್ತಿರುವ ಇವರೆಲ್ಲರೂ, ಗೆದ್ದರೆ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುವ ಭರವಸೆಯೊಂದಿಗೆ ಮತ ಯಾಚಿಸುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 20,481 ಮತದಾರರಿದ್ದಾರೆ. ಅರ್ಧಕ್ಕಿಂತಲೂ ಹೆಚ್ಚು ಮಂದಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿದ್ದಾರೆ. ಉಳಿದಂತೆ ಶಿವಮೊಗ್ಗ ಜಿಲ್ಲೆ ಮತದಾರರ ಸಂಖ್ಯೆಯಲ್ಲಿ ಪ್ರಾಬಲ್ಯ ಹೊಂದಿದೆ. ಮೂರೂ ಪಕ್ಷಗಳ ಅಭ್ಯರ್ಥಿಗಳು ವರ್ಷಗಳ ಕಾಲದಿಂದ ತಯಾರಿ ನಡೆಸಿ, ಮತದಾರರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈಗ ಕೊನೆಯ ಕ್ಷಣದಲ್ಲಿ ಮತದಾರರ ವಿಶ್ವಾಸ ಗಿಟ್ಟಿಸುವ ಪ್ರಯತ್ನ ಬಹು ಜೋರಾಗಿಯೇ ನಡೆಯುತ್ತಿದೆ.

ಬದಲಾದ ರಾಜಕೀಯ ಚಿತ್ರಣ: ನೈರುತ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 30 ವಿಧಾನಸಭಾ ಕ್ಷೇತ್ರಗಳಿವೆ. ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಳಲ್ಲಿ ಮಾತ್ರವೇ ಕಾಂಗ್ರೆಸ್‌ ಶಾಸಕರಿದ್ದಾರೆ. ಜೆಡಿಎಸ್‌ನ ಒಬ್ಬ ಶಾಸಕರೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿಲ್ಲ. ಇದರಿಂದಾಗಿ ರಾಜಕೀಯ ಚಿತ್ರಣ ಸಂಪೂರ್ಣ ಬದಲಾಗಿದೆ. ಇದು ಬಿಜೆಪಿಯ ಪಾಲಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಿರುವಂತೆ ಕಾಣುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ‘ಪೇಜ್‌ ಪ್ರಮುಖ’ರ ನೇಮಕಾತಿ ಪ್ರಯೋಗ ಮಾಡಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿರುವ ಬಿಜೆಪಿ ವಿಧಾನ ಪರಿಷತ್‌ ಚುನಾವಣೆಗೂ ಆ ಕಾರ್ಯತಂತ್ರದ ಬಳಕೆಯನ್ನು ವಿಸ್ತರಿಸಿದೆ. ಈ ಚುನಾವಣೆಯಲ್ಲೂ ಸ್ಥಳೀಯವಾಗಿ ಉಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ಮತದಾರರೊಂದಿಗೆ ನೇರ ಸಂಪರ್ಕದಲ್ಲಿದ್ದು, ಕೊನೆಯ ಕ್ಷಣದವರೆಗೂ ಅವರು ಇತರರತ್ತ ವಾಲದಂತೆ ತಡೆಯುವ ತಂತ್ರಗಾರಿಕೆಯನ್ನು ರೂಪಿಸಿಕೊಂಡಿದೆ.

ಬದಲಾವಣೆಯ ಬೇಡಿಕೆ: ಬಿಜೆಪಿ ಅಭ್ಯರ್ಥಿ ಗಣೇಶ್ ಕಾರ್ಣಿಕ್‌ ಎರಡು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಬದಲಾವಣೆಗೆ ಮತ ಚಲಾಯಿಸಿ ಎಂಬುದು ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಕುಮಾರ್‌ ಅವರ ಮನವಿ. ಕಾರ್ಣಿಕ್‌ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿಲ್ಲ ಎಂದು ಟೀಕಿಸುತ್ತಿರುವ ಅವರು, ‘ಶಿಕ್ಷಕರ ಕ್ಷೇತ್ರಕ್ಕೆ ಶಿಕ್ಷಕರನ್ನೇ ಆಯ್ಕೆ ಮಾಡಿದರೆ ನ್ಯಾಯ ದೊರಕುತ್ತದೆ’ ಎಂಬ ವಾದ ಮುಂದಿಡುತ್ತಿದ್ದಾರೆ.

ಎಸ್‌.ಎಲ್‌.ಭೋಜೇಗೌಡ ಹಿಂದೆ ಹಲವು ಚುನಾವಣೆಗಳನ್ನು ಎದುರಿಸಿದ್ದಾರೆ. ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲೂ ಕಣಕ್ಕಿಳಿದು ಸೋತಿದ್ದರು. ವೃತ್ತಿಯಲ್ಲಿ ವಕೀಲರಾಗಿರುವ ಅವರು ಜೆಡಿಎಸ್‌ ವರಿಷ್ಠರಿಗೆ ನಿಕಟವರ್ತಿ. ವರಿಷ್ಠರೊಂದಿಗಿನ ಆಪ್ತತೆಯನ್ನೇ ಚುನಾವಣಾ ಅಸ್ತ್ರವನ್ನಾಗಿ ಅವರು ಬಳಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಹೆಸರಿನಲ್ಲಿಯೇ ಪ್ರಚಾರ ನಡೆಸುತ್ತಿರುವ ಅವರು, ‘ಎಚ್‌ಡಿಕೆ ನಾಮಬಲ’ದಿಂದಲೇ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

ಇದು ಶಿಕ್ಷಕರ ಕ್ಷೇತ್ರದ ಚುನಾವಣೆ ಆಗಿದ್ದರೂ ಈ ಬಾರಿ ಶಿಕ್ಷಕರ ಸಮಸ್ಯೆಗಳು, ಬೇಡಿಕೆಗಳ ಹೊರತಾಗಿ ಹಲವು ವಿಚಾರಗಳು ಪ್ರಚಾರವನ್ನು ಆವರಿಸಿಕೊಂಡಿವೆ. ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿನ ಬೆಳವಣಿಗೆಗಳೂ ಈ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಿರುವುದು ನಿಚ್ಚಳ.

ಕಣದಲ್ಲಿರುವ ಅಭ್ಯರ್ಥಿಗಳು

* ಕ್ಯಾಪ್ಟನ್ ಗಣೇಶ್ ಕಾರ್ಣಿಕ್– ಬಿಜೆಪಿ

* ಎಸ್‌.ಎಲ್‌.ಭೋಜೇಗೌಡ– ಜೆಡಿಎಸ್‌

* ಕೆ.ಕೆ.ಮಂಜುನಾಥ್ ಕುಮಾರ್– ಕಾಂಗ್ರೆಸ್

ಪಕ್ಷೇತರರು

* ಡಾ.ಅರುಣ್ ಹೊಸಕೊಪ್ಪ

* ಅಲೋಶಿಯಸ್ ಡಿಸೋಜ

* ಕೆ.ಬಿ.ಚಂದ್ರೋಜಿ ರಾವ್

* ಡಿ.ಕೆ.ತುಳಸಪ್ಪ

* ಅಂಪಾರು ನಿತ್ಯಾನಂದ ಶೆಟ್ಟಿ

* ಪ್ರಭುಲಿಂಗ ಬಿ.ಆರ್.

* ಬಸವರಾಜಪ್ಪ ಕೆ.ಸಿ.

* ಎಂ.ರಮೇಶ

* ರಾಜೇಂದ್ರಕುಮಾರ್ ಕೆ.ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT