ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನಗರ ರೈಲು ಸಂಚಾರ ಷರತ್ತುಗಳ ಸಡಿಲಿಕೆ

ಸಂಪುಟದಿಂದಲೂ ಸಿಕ್ಕಿತು ಅನುಮೋದನೆ
Last Updated 2 ಜುಲೈ 2019, 10:04 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆ ಇಲಾಖೆಯು ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಮುಂಚೆ ಹಾಕಲಾಗಿದ್ದ ಹಲವು ಷರತ್ತುಗಳನ್ನು ಸಡಿಲಿಸಲಾಗಿದೆ.

ಕೇಂದ್ರ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಳೆದ ವಾರ ನಡೆಸಿದ ಸಭೆಯಲ್ಲಿಯೋಜನೆಯ ಅನುಷ್ಠಾನದಲ್ಲಿ ಎದುರಾಗಿರುವ ಎಲ್ಲ ಅಡೆತಡೆಗಳನ್ನು ನಿವಾರಿಸಲು ಸಮ್ಮತಿಸಿದ್ದರು. ಅದರ ಬೆನ್ನಹಿಂದೆಯೇ ಈಗ ಸಂಪುಟದ ಈ ನಿರ್ಧಾರ ಹೊರಬಿದ್ದಿದೆ.

ಭಾರತೀಯ ರೈಲು ತಾಂತ್ರಿಕ ಮತ್ತು ಆರ್ಥಿಕ ಸೇವಾ ಸಂಸ್ಥೆ (ರೈಟ್ಸ್‌) ಕಳೆದ ಡಿಸೆಂಬರ್‌ನಲ್ಲಿಯೇ ಕಾರ್ಯಸಾಧ್ಯತಾ ವರದಿ ಸಲ್ಲಿಸಿತ್ತು. 161 ಕಿಲೋಮೀಟರ್‌ ಉದ್ದದ ಈ ಯೋಜನೆಗಾಗಿ ₹ 6 ಸಾವಿರ ಕೋಟಿ ಮೌಲ್ಯದ ಜಮೀನನ್ನು ರೈಲ್ವೆ ಇಲಾಖೆ ಉಚಿತವಾಗಿ ಒದಗಿಸಲಿದೆ.ಯೋಜನೆಗೆ ಒಟ್ಟು ₹ 29 ಸಾವಿರ ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜು ಮಾಡಲಾಗಿತ್ತು. ರೈಲ್ವೆ ಇಲಾಖೆ ಈಗ ಭೂಮಿಯನ್ನು ಉಚಿತವಾಗಿ ಕೊಡುತ್ತಿರುವುದರಿಂದ ₹ 6 ಸಾವಿರ ಕೋಟಿಯಷ್ಟು ವೆಚ್ಚ ಕಡಿಮೆಯಾಗಲಿದೆ.

ಉಪನಗರ ರೈಲು ಯೋಜನೆಯನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾ ಲಯದ ನಡುವೆ ಆಗಿರುವ ಒಪ್ಪಂದದ ಪ್ರಕಾರ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುತ್ತದೆ. ಮುಂದೆ ತುಮಕೂರು, ಇತರ ಪಟ್ಟಣಗಳು ಹಾಗೂ ವಿಸ್ತರಿತ ಕಾರಿಡಾರ್‌ಗಳಿಗೆ ಉಪನಗರ ರೈಲನ್ನು ಈಗ ಇರುವ ಮಾರ್ಗದಲ್ಲಿ ಓಡಿಸುವ ಬಗ್ಗೆ ವಿಶೇಷ ಉದ್ದೇಶದ ಘಟಕವು ಯೋಜನೆ ರೂಪಿಸಬೇಕು ಎಂದು ಸಂಪುಟ ಕೈಗೊಂಡ ನಿರ್ಣಯದಲ್ಲಿ ತಿಳಿಸಲಾಗಿದೆ.

ರೈಲ್ವೆ ಭೂಮಿಯ ಫ್ಲೋರ್‌ ಸ್ಪೇಸ್‌ ಸೂಚ್ಯಂಕವನ್ನು (ಎಫ್‌ಎಸ್‌ಐ) ಐದಕ್ಕೆ ಹೆಚ್ಚಿಸಲು ಅನುಮತಿ ಕೊಡಬೇಕು. ಇದರಿಂದ ಸಂಗ್ರಹವಾಗುವ ನಿಧಿಯನ್ನು ರಾಜ್ಯದ ರೈಲ್ವೆ ಯೋಜನೆಗಳಿಗೆ ಬಳಸಲು ಅವಕಾಶ ಅವಕಾಶ ಕಲ್ಪಿಸಬೇಕು. ಬಳಕೆಯಾಗದ ಎಫ್‌ಎಸ್‌ಐಯನ್ನು ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ರೂಪದಲ್ಲಿ ಮಾರಾಟಕ್ಕೆ ಅವಕಾಶ ನೀಡಬೇಕು. ಆ ಮೊತ್ತವನ್ನು ಇಡೀ ಯೋಜನೆಗೆ ನೀಡುವ ರೈಲ್ವೆ ಇಲಾಖೆಯ ಪಾಲು ಬಂಡವಾಳದ ಹಣ ಎಂದು ಪರಿಗಣಿಸಬೇಕು. ಈ ಹಿಂದೆ ಕೈಬಿಡಲಾದ ₹ 1,745 ಕೋಟಿ ಮೊತ್ತದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ವಿವರಿಸಲಾಗಿದೆ.

ಘಟಕಗಳ ಸ್ಥಳ ನಿಗದಿ, ಕಾಸ್ಟಿಂಗ್‌ ಯಾರ್ಡ್‌ ಎಲ್ಲವೂ ರೈಲ್ವೆ ಇಲಾಖೆ ಮತ್ತು ವಿಶೇಷ ಉದ್ದೇಶದ ಘಟಕ ಜತೆಯಾಗಿ ಚರ್ಚಿಸಿ ನಿರ್ಧರಿಸಬೇಕು. ಖಾಸಗಿ ಭೂಮಿಯ ಸ್ವಾಧೀನ ಅತ್ಯಂತ ಕಡಿಮೆ ಆಗಬೇಕು. ಸ್ವಾಧೀನವಾದ ಭೂಮಿಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT