ಬಿಬಿಎಂಪಿ ಕಮಿಷನರ್‌ ವಿರುದ್ಧ ದೂರು ದಾಖಲು

7
ಅನಧಿಕೃತ ಕಟ್ಟಡದ ವಿರುದ್ಧ ಕ್ರಮ ಕೈಗೊಳ್ಳದ ಆರೋಪ

ಬಿಬಿಎಂಪಿ ಕಮಿಷನರ್‌ ವಿರುದ್ಧ ದೂರು ದಾಖಲು

Published:
Updated:

ಬೆಂಗಳೂರು: ಬಿಬಿಎಂಪಿ ನಕ್ಷೆ ಉಲ್ಲಂಘಿಸಿ ಅಕ್ರಮವಾಗಿ ಕಟ್ಟಡ ಕಟ್ಟಲು ಅವಕಾಶ ನೀಡಿದ ಬಿಬಿಎಂಪಿ ಕಮಿಷನರ್‌ ಮತ್ತು ಅವರ ಸಿಬ್ಬಂದಿ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಆದೇಶಿಸಿದ್ದಾರೆ.

ನಗರದ ನಿಸರ್ಗ ಗಾರ್ಡನ್‌ನ ಗಿಡದಕೋನೆನಹಳ್ಳಿಯ ವಾರ್ಡ್‌ 72ರ ನಿವೇಶನ ಸಂಖ್ಯೆ 135ಎ ರಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ಅಕ್ರಮವಾಗಿ ಕಟ್ಟಡಲಾಗಿದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ಬಿಟ್ಟಿಲ್ಲ. ಪಾದಚಾರಿ ಮಾರ್ಗ ಅತಿಕ್ರಮಣ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು.

ಲೋಕಾಯುಕ್ತರ ಆದೇಶದ ಮೇಲೆ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಅತಿಕ್ರಮಣ ಆಗಿರುವುದು ನಿಜ. ಅತಿಕ್ರಮಣ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಕ್ರಮ ಕೈಗೊಂಡಿರುವುದರಿಂದ ಪ್ರಕರಣ ಮುಕ್ತಾಯಗೊಳಿಸಬಹುದು ಎಂದು ವರದಿ ನೀಡಿದ್ದರು.

ಆದರೆ, ಈ ವರದಿಯನ್ನು ತಿರಸ್ಕರಿಸಿದ ಲೋಕಾಯುಕ್ತರು, ಸಹಾಯಕ ರಿಜಿಸ್ಟ್ರಾರ್‌ (ಕಾನೂನು ಅಭಿಪ್ರಾಯ–4) ಅವರಿಂದ ಮತ್ತೊಂದು ವರದಿ ಕೇಳಿದ್ದರು.

ಸಹಾಯಕ ರಿಜಿಸ್ಟ್ರಾರ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದ್ದರು. ಅದರಂತೆ ಬಿಬಿಎಂಪಿ ಕಮಿಷನರ್‌, ಬಿಬಿಎಂಪಿ ವಾರ್ಡ್‌ 72ರ ಕಾರ್ಯನಿರ್ವಾಹಕ ಎಂಜಿನಿಯರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದ್ದು ಎಂಟು ವಾರದೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಪ್ರಶ್ನಿತ ನಿವೇಶನದಲ್ಲಿ ಮಂಜೂರಾತಿ ಪಡೆದ ನಕ್ಷೆ ಉಲ್ಲಂಘಿಸಿ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.   

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !