ಕುಡಿತ ಬಿಡುವಂತೆ ತಾಯಿ ಬುದ್ಧಿವಾದ; ಮಗ ಆತ್ಮಹತ್ಯೆ

7

ಕುಡಿತ ಬಿಡುವಂತೆ ತಾಯಿ ಬುದ್ಧಿವಾದ; ಮಗ ಆತ್ಮಹತ್ಯೆ

Published:
Updated:

ಬೆಂಗಳೂರು: ಮದ್ಯ ಸೇವನೆ ಬಿಡುವಂತೆ ತಾಯಿ ಬುದ್ಧಿವಾದ ಹೇಳಿದ್ದಕ್ಕಾಗಿ ರಾಜು (23) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯದ ಸಣ್ಣಕ್ಕಿ ಬಯಲು ನಿವಾಸಿ ರಾಜು, ಪ್ಲಂಬಿಂಗ್ ಹಾಗೂ ಪೇಟಿಂಗ್ ಕೆಲಸ ಮಾಡುತ್ತಿದ್ದರು. ತಾಯಿ ಜತೆ ವಾಸವಿದ್ದರು. ತಂದೆ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. 

‘ತಾಯಿ, ಮನೆಗೆಲಸ ಮಾಡಿಕೊಂಡು ಮನೆ ನಡೆಸುತ್ತಿದ್ದರು. ಮದ್ಯವ್ಯಸನಿಯಾಗಿದ್ದ ರಾಜು, ನಿತ್ಯವೂ ಕುಡಿಯುತ್ತಿದ್ದರು. ಬೇಸರಗೊಂಡಿದ್ದ ತಾಯಿ, ಕುಡಿತ ಬಿಡುವಂತೆ ಬುದ್ಧಿವಾದ ಹೇಳಿದ್ದರು’ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದರು.

’ಶನಿವಾರ ಬೆಳಿಗ್ಗೆ ತಾಯಿ ಎಂದಿನಂತೆ ಮನೆಗೆಲಸಕ್ಕೆ ಹೋಗಿದ್ದರು. ರಾಜು ಮನೆಯಲ್ಲೇ ಇದ್ದರು. ಬೆಳಿಗ್ಗೆ 11.30 ಗಂಟೆ ಸುಮಾರಿಗೆ ತಾಯಿ ಮನೆಗೆ ವಾಪಸ್‌ ಬಂದಾಗ, ಬಾಗಿಲನ್ನು ಒಳಗಿನಿಂದ ಲಾಕ್‌ ಮಾಡಿದ್ದು ಗೊತ್ತಾಗಿತ್ತು. ಎಷ್ಟೇ ಬಡಿದರೂ ಮಗ ಬಾಗಿಲು ತೆರೆದಿರಲಿಲ್ಲ. ಆತಂಕಗೊಂಡ ತಾಯಿ ಸ್ಥಳೀಯರ ಸಹಾಯದಿಂದ ಬಾಗಿಲಿನ ಲಾಕ್‌ ಮುರಿದು ನೋಡಿದಾಗಲೇ, ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ’ ಎಂದು ವಿವರಿಸಿದರು. 

ಯಡಿಯೂರು ಕೆರೆಯಲ್ಲಿ ಶವ: ನವೆಂಬರ್ 26ರಂದು ನಾಪತ್ತೆಯಾಗಿದ್ದ ಜಯನಗರ 4ನೇ ಹಂತದ ನಿವಾಸಿ ಟಿ.ಎನ್.ಕೃಷ್ಣಸ್ವಾಮಿ ಅವರ ಶವ, ಯಡಿಯೂರು ಕೆರೆಯಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. 

ಕೃಷ್ಣಸ್ವಾಮಿ ಅವರು ಪತ್ನಿ ಗಾಯತ್ನಿ ಜೊತೆ ನೆಲೆಸಿದ್ದರು. ದಂಪತಿಯ ಮಕ್ಕಳಿಬ್ಬರು ಅಮೆರಿಕದಲ್ಲಿದ್ದಾರೆ. ವಾಯು ವಿಹಾರಕ್ಕೆಂದು ಮನೆಯಿಂದ ಹೋಗಿದ್ದ ಕೃಷ್ಣಸ್ವಾಮಿ ವಾಪಸ್ ಬಂದಿರಲಿಲ್ಲ. ಗಾಬರಿಗೊಂಡ ಪತ್ನಿ, ಜಯನಗರ ಠಾಣೆಗೆ ದೂರು ನೀಡಿದ್ದರು.

‘ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ಸದ್ಯಕ್ಕೆ ಕಾರಣ ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !