ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನಿಗೆ ಸಂದೇಶ ಕಳುಹಿಸಿ ಆತ್ಮಹತ್ಯೆ

ವರದಕ್ಷಿಣೆ ಕಿರುಕುಳ ಆರೋಪದಡಿ ಮಹಿಳೆಯ ಪತಿ ಬಂಧನ
Last Updated 19 ಏಪ್ರಿಲ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕೀಟನಾಶಕದ ಬಾಟಲಿಯ ಫೋಟೊವನ್ನು ವಾಟ್ಸ್‌ಆ್ಯಪ್‌ನಲ್ಲಿ ತಮ್ಮನಿಗೆ ಕಳುಹಿಸಿದ ಶ್ವೇತಾ ರಾವ್ (26) ಎಂಬುವರು, ‘ನಾನು ವಿಷ ಕುಡಿಯುತ್ತಿದ್ದೇನೆ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾಯತ್ರಿನಗರ 4ನೇ ಅಡ್ಡರಸ್ತೆಯಲ್ಲಿ ಏ.16ರ ಮಧ್ಯಾಹ್ನ ಈ ಘಟನೆ ನಡೆದಿದ್ದು, ವರದಕ್ಷಿಣೆಗೆ ಕಿರುಕುಳ ನೀಡಿದ ಆರೋಪದಡಿ ಸುಬ್ರಹ್ಮಣ್ಯನಗರ ಪೊಲೀಸರು ಮೃತರ ಪತಿ ರಾಕೇಶ್ ರಾವ್(29) ಅವರನ್ನು ಶುಕ್ರವಾರ ಬಂಧಿಸಿದ್ದಾರೆ.

‘ಬಾಣಂತನಕ್ಕೆ ಬಂದಿದ್ದಳು’: ‘ನನ್ನ ಅಕ್ಕ ಶ್ವೇತಾ, 2016ರ ನ.27ರಂದು ವಿಜಯನಗರ ಪೈಪ್‌ಲೈನ್ ರಸ್ತೆ ನಿವಾಸಿ ರಾಕೇಶ್ ಅವರನ್ನು ಪ್ರೇಮ ವಿವಾಹವಾದಳು. ಅವರಿಗೆ ಒಂದೂವರೆ ವರ್ಷದ ಪ್ರತೀಕ್ ಹಾಗೂ ಎಂಟು ತಿಂಗಳ ವೇದಾಂತ್ ಎಂಬ ಮಕ್ಕಳಿದ್ದಾರೆ. ಅಕ್ಕ ಬಾಣಂತನಕ್ಕೆಂದು 9 ತಿಂಗಳ ಹಿಂದೆ ನಮ್ಮ ಮನೆಗೆ ಬಂದಿದ್ದಳು’ ಎಂದು ಮೃತರ ತಮ್ಮ ಸಂಜಯ್ ರಾವ್ ದೂರಿನಲ್ಲಿ ವಿವರಿಸಿದ್ದಾರೆ.

‘ಈ ನಡುವೆ ರಾಕೇಶ್ ಹಾಗೂ ಅವರ ತಾಯಿ ಭಾನುಮತಿ ವರದಕ್ಷಿಣೆಗಾಗಿ ಪೀಡಿಸಲು ಶುರು ಮಾಡಿದ್ದರು. ‘ಮದುವೆ ಸಮಯದಲ್ಲಿ ನಿಮ್ಮ ಮನೆಯಿಂದ ಏನೂ ಕೊಟ್ಟಿಲ್ಲ. ಬಾಣಂತನ ಮುಗಿಸಿ ನೀನು ಬರಿಗೈಲಿ ಇಲ್ಲಿಗೆ ಬರುವುದು ಬೇಡ’ ಎಂದಿದ್ದರು. ಹೋದ ವಾರ ನಮ್ಮ ಮನೆಗೇ ಬಂದಿದ್ದ ಬಾವ, ವರದಕ್ಷಿಣೆ ವಿಚಾರವಾಗಿಯೇ ಜಗಳ ತೆಗೆದು ಅಕ್ಕನ ಕೆನ್ನೆಗೆ ಹೊಡೆದಿದ್ದರು.’

‘ಏ.16ರ ಬೆಳಿಗ್ಗೆ 10.30ರ ಸುಮಾರಿಗೆ ಜಯನಗರದ ‘ರಿಲಯನ್ಸ್ ಡಿಜಿಟಲ್ ಸ್ಟೋರ್‌’ಗೆ ತೆರಳಿದ್ದ ಅಕ್ಕ, 12.15ಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಕ್ರಿಮಿನಾಶಕದ ಬಾಟಲಿಯ ಫೋಟೊ ಕಳುಹಿಸಿದ್ದಳು. ‘ನನಗೆ ಬದುಕಲು ಆಗುತ್ತಿಲ್ಲ. ನನ್ನಿಂದ ಎಲ್ಲರೂ ನೋವು ತಿನ್ನುವಂತಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಸಂದೇಶ ಕಳುಹಿಸಿದ್ದಳು. ತಕ್ಷಣ ಕರೆ ಮಾಡಿ ಸಾಂತ್ವನದ ಮಾತುಗಳನ್ನು ಹೇಳಿದೆ. ಸ್ವಲ್ಪ ಸಮಯದಲ್ಲೇ ಅಕ್ಕನ ಮೊಬೈಲ್ ಸ್ವಿಚ್ಡ್‌ಆಫ್ ಆಯಿತು.’

‘ಬಳಿಕ ಅಕ್ಕನನ್ನು ಹುಡುಕಿದಾಗ ನಮ್ಮ ಮನೆಯಿಂದ ಸ್ವಲ್ಪ ದೂರದ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ತಕ್ಷಣ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಆಕೆ ಸಾವಿಗೆ ಕಾರಣರಾದ ರಾಕೇಶ್ ಹಾಗೂ ಭಾನುಮತಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT