ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ತಬ್ಬಿ ರೈಲಿನ ಮುಂದೆ ಬಿದ್ದ ತಾಯಿ: ಪತಿ ಬೈದಿದ್ದಕ್ಕೆ ಆತ್ಮಹತ್ಯೆ

ಪತಿ ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ
Last Updated 23 ಏಪ್ರಿಲ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಅಡುಗೆ ಮಾಡಲಿಲ್ಲವೆಂದು ಪತಿ ಬೈದಿದ್ದಕ್ಕೆ ಬೇಸರಗೊಂಡ ರೂಪಾ (27) ಎಂಬುವರು ತಮ್ಮ ಏಳು ವರ್ಷದ ಮಗ ಹಾರ್ದಿಕ್ ರಾವ್‌ನನ್ನು ಅಪ್ಪಿಕೊಂಡು ಚಲಿಸುತ್ತಿದ್ದ ರೈಲಿನ ಮುಂದೆ ಬಿದ್ದಿದ್ದಾರೆ!

ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ನಡೆದಿದ್ದು, ತಾಯಿ–ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರಿಬ್ಬರೂ ಹಳಿ ಮೇಲೆ ಬಂದಿದ್ದನ್ನು ಕಂಡ ಲೋಕೊ ಪೈಲಟ್ (ರೈಲು ಓಡಿಸುತ್ತಿದ್ದವರು) ಎಸ್.ಅಲೋಶಿಯಸ್, ‘ಆ ಕ್ಷಣಕ್ಕೇ ರೈಲನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಕುರುಬರಹಟ್ಟಿಯವರಾದ ರೂಪಾ, ಹಾಲು ವ್ಯಾಪಾರಿ ಆರ್.ಉಮೇಶ್ ಎಂಬುವರನ್ನು ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಕೆ.ಆರ್.ಪುರದ ಸರ್ಕಾರಿ ಶಾಲೆ ಬಳಿ ನೆಲೆಸಿದ್ದು, ಅವರ ಮಗ ಹಾರ್ದಿಕ್ ಅದೇ ಶಾಲೆಯಲ್ಲಿ 1ನೇ ತರಗತಿ ಓದುತ್ತಿದ್ದ.

ಅಡುಗೆ ವಿಚಾರಕ್ಕೆ ಜಗಳ: ‘ಕೆಲಸದ ನಿಮಿತ್ತ ಭಾನುವಾರ ಬೆಳಿಗ್ಗೆಯೇ ಹೊರಗೆ ಹೋಗಿದ್ದ ನಾನು,
ಸಂಜೆ 5 ಗಂಟೆಗೆ ಮನೆಗೆ ವಾಪಸಾಗಿದ್ದೆ. ತುಂಬ ಹಸಿವಾಗಿತ್ತು. ಆದರೆ, ರೂಪಾ ಅಡುಗೆ ಮಾಡಿರಲಿಲ್ಲ. ಇದರಿಂದ ಕೋಪದಲ್ಲಿ ಬೈದಿದ್ದೆ’ ಎಂದು ಉಮೇಶ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

‘ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಆ ನಂತರ ಅನ್ನ ಮಾಡಲು ಇಟ್ಟ ಆಕೆ, ‘ಅಂಗಡಿಗೆ ಹೋಗಿ ಮೊಸರು ತರುತ್ತೇನೆ. ಮೂರು ವಿಷಲ್ ಆದ ಮೇಲೆ ಸ್ಟೌ ಆಫ್ ಮಾಡಿ’ ಎಂದು ಹೇಳಿ ಮಗನನ್ನು ಕರೆದುಕೊಂಡು ಹೋದಳು. ಒಂದು ತಾಸು ಕಳೆದರೂ ಆಕೆ ಬಾರದಿದ್ದಾಗ ಕರೆ ಮಾಡಿದೆ. ಆದರೆ, ಮೊಬೈಲ್ ಕೋಣೆಯಲ್ಲೇ ರಿಂಗ್ ಆಗುತ್ತಿತ್ತು. ಹೀಗಾಗಿ, ನಾನೇ ಹುಡುಕಿಕೊಂಡು ಹೊರಗೆ ಹೋದೆ.’

‘ರಾತ್ರಿ 9 ಗಂಟೆ ಸುಮಾರಿಗೆ ಕರೆ ಮಾಡಿದ ಸ್ನೇಹಿತ, ‘ರೂಪಕ್ಕ ಹಾಗೂ ಹಾರ್ದಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲ್ವೆ ಹಳಿಗಳ ಮೇಲೆ ಅವರ ಶವಗಳು ಬಿದ್ದಿವೆ’ ಎಂದ. ಕೂಡಲೇ ಅಲ್ಲಿಗೆ ಓಡಿದೆ. ಅಷ್ಟರಲ್ಲಿ ಪೊಲೀಸರೂ ಬಂದಿದ್ದರು. ಸಣ್ಣ–ಪುಟ್ಟ ವಿಚಾರಕ್ಕೆ ಆಗಾಗ್ಗೆ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಮುಂಗೋಪಿ ಆಗಿದ್ದ ರೂಪಾ, ‘ಹೀಗೆ ಮಾಡಿದರೆ ಮಗನನ್ನು ಕೊಂದು ನಾನೂ ಸಾಯುತ್ತೇನೆ’ ಎಂದು ಬೆದರಿಸುತ್ತಿದ್ದಳು. ಈಗ ಹಾಗೆಯೇ ಮಾಡಿಕೊಂಡಿದ್ದಾಳೆ’ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT