ಆತ್ಮಹತ್ಯೆಗೆ ಪ್ರೇರಣೆ: ಐವರ ಬಂಧನ

ಬುಧವಾರ, ಜೂನ್ 26, 2019
28 °C
ತಾಯಿ– ಮಗನ ಸಾವು ಪ್ರಕರಣ l ನಾಲ್ಕು ಪ್ರತ್ಯೇಕ ಎಫ್‌ಐಆರ್‌ ದಾಖಲು

ಆತ್ಮಹತ್ಯೆಗೆ ಪ್ರೇರಣೆ: ಐವರ ಬಂಧನ

Published:
Updated:
Prajavani

ಬೆಂಗಳೂರು: ಎಚ್‌ಎಎಲ್‌ ಬಳಿಯ ವಿಭೂತಿಪುರದಲ್ಲಿ ತಾಯಿ– ಮಗನ ಸಾವಿನ ಸಂಬಂಧ ನಾಲ್ಕು ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಹಣಕಾಸು ವಿಚಾರವಾಗಿ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಐವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

‘ಭಾನುವಾರ ನಸುಕಿನಲ್ಲಿ ಗೀತಾಬಾಯಿ ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ 12 ವರ್ಷದ ಮಗನನ್ನು ತಂದೆ ಸುರೇಶ್‌ ಬಾಬುನೇ ನೇಣು ಹಾಕಿ ಕೊಂದಿದ್ದ. ಆ ದೃಶ್ಯವನ್ನು 17 ವರ್ಷದ ಮಗಳು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ಅದನ್ನು ಆಧರಿಸಿ ಸುರೇಶ್‌ನನ್ನು ಭಾನುವಾರ ಸಂಜೆಯೇ ಸೆರೆಹಿಡಿಯಲಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್‌ ತಿಳಿಸಿದರು.

‘ಹಣಕಾಸಿನ ವ್ಯವಹಾರ ಸಂಬಂಧ ಕೆಲ ಸ್ಥಳೀಯರು ಮನೆ ಎದುರು ಬಂದು ಗಲಾಟೆ ಮಾಡುತ್ತಿದ್ದರು. ನಿರಂತರ ಕಿರುಕುಳ ನೀಡಿ ಜೀವ ಬೆದರಿಕೆ ಹಾಕುತ್ತಿದ್ದರು. ಅದರಿಂದ ನೊಂದು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದೆವು’ ಎಂದು ಆರೋಪಿ ಸುರೇಶ್‌ ಹೇಳಿಕೆ ನೀಡಿದ್ದಾರೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಂಡು ವಿಭೂತಿಪುರದ ನಿವಾಸಿಗಳಾದ ಎಸ್‌.ಸುಧಾ, ಡೈಸಿ, ಪ್ರಭಾವತಿ, ಮಂಜು ಹಾಗೂ ರಾಮ್‌ ಬಹದ್ದೂರ್ ಎಂಬುವ ರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ: ‘ಸುರೇಶ್‌ ಬಾಬು ಹಾಗೂ ಗೀತಾಬಾಯಿ, ಚೀಟಿ ವ್ಯವಹಾರ ಮಾಡಿದ್ದರು. ಅದರಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಂಬಂಧ ಎಸ್‌. ಸುಧಾ ಹಾಗೂ ಆಕೆಯ ಸ್ನೇಹಿತೆಯರಾದ ಡೈಸಿ, ಪ್ರಭಾವತಿ ನಿತ್ಯವೂ ದಂಪತಿಯ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡುತ್ತಿದ್ದರು’ ಎಂದು ಡಿಸಿಪಿ ಅಬ್ದುಲ್ ಹೇಳಿದರು.

‘ಸ್ವಲ್ಪ ಕಾಲಾವಕಾಶ ಕೊಟ್ಟರೆ ಹಣ ವಾಪಸ್ ಕೊಡುವುದಾಗಿ ದಂಪತಿ ಕೋರುತ್ತಿದ್ದರು. ಅದಕ್ಕೆ ಸ್ಪಂದಿಸದ ಆರೋಪಿಗಳು, ಕಿರುಕುಳ ನೀಡುವುದನ್ನು ಮುಂದುವರಿಸಿದ್ದರು. ಆರೋಪಿ ಮಂಜು, ದಂಪತಿಗೆ ಸಾಲ ಕೊಟ್ಟಿದ್ದ. ಅದರ ಬಡ್ಡಿ ನೀಡುವಂತೆ ಪೀಡಿಸುತ್ತಿದ್ದ.’

‘ಇನ್ನೊಬ್ಬ ಆರೋಪಿ ರಾಮ್ ಬಹದ್ದೂರ್, ನೇಪಾಳದವ. ನಿತ್ಯವೂ ಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದ ಆತ, ‘ನಾನು ಕೊಟ್ಟಿರುವ ₹ 2 ಲಕ್ಷ ಸಾಲ ವಾಪಸ್ ಕೊಡಿ’ ಎಂದು ಕೂಗಾಡುತ್ತಿದ್ದ. ಪರಿಶೀಲನೆ ನಡೆಸಿದಾಗ ಆತ ಕೊಟ್ಟಿದ್ದ ಹಣಕ್ಕೆ ಯಾವುದೇ ದಾಖಲೆ ಸಿಕ್ಕಿಲ್ಲ. ಆತ ಹಣ ಕೊಟ್ಟಿರುವುದಾಗಿ ಸುಳ್ಳು ಹೇಳಿ ದಂಪತಿಗೆ ಬೆದರಿಸುತ್ತಿದ್ದ ಎಂಬುದು ಗೊತ್ತಾಗಿದೆ. ಇವರೆಲ್ಲರ ಕಿರುಕುಳ ಹೆಚ್ಚಾಗಿದ್ದರಿಂದಲೇ ಇಬ್ಬರು ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ದಂಪತಿ ತೀರ್ಮಾನಿಸಿದ್ದರೆಂಬುದು ತನಿಖೆಯಿಂದ ತಿಳಿದು
ಬಂದಿದೆ’ ಎಂದು ವಿವರಿಸಿದರು.

‘ಮನೆಯಲ್ಲಿ ಮರಣ ಪತ್ರ ಸಿಕ್ಕಿದೆ. ‘ಎಸ್‌.ಸುಧಾ, ಡೈಸಿ, ಪ್ರಭಾವತಿ, ಮಂಜು, ರಾಮ್ ಬಹದ್ದೂರ್ ಹಾಗೂ ಮತ್ತಿಬ್ಬರು ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ. ನಮಗೆ ಸಾವೇ ಗತಿಯೆಂದು ತೀರ್ಮಾನಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂಬುದಾಗಿ ಪತ್ರದಲ್ಲಿ ಬರೆಯಲಾಗಿದೆ ಡಿಸಿಪಿ ಮಾಹಿತಿ ನೀಡಿದರು. 

ಆಘಾತಕ್ಕೆ ಒಳಗಾದ ತಂದೆ–ಮಗಳು: ‘ಇಬ್ಬರ ಸಾವನ್ನು ಕಣ್ಣಾರೆ ನೋಡಿರುವ ಸುರೇಶ್ ಹಾಗೂ ಅವರ ಮಗಳು, ಆಘಾತಕ್ಕೆ ಒಳಗಾಗಿದ್ದಾರೆ. ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬುದಾಗಿ ಹೇಳುತ್ತಿದ್ದಾರೆ. ಅವ ರಿಗೆ ಪ್ರತ್ಯೇಕ ವಸತಿ ಕಲ್ಪಿಸಿ ಆಪ್ತ ಸಮಾ
ಲೋಚನೆ ಮಾಡಿಸಲಾಗುತ್ತಿದೆ’ ಎಂದು ಡಿಸಿಪಿ ಹೇಳಿದರು.

ವರದಿಗಾರನ ವಿರುದ್ಧ ಎಫ್‌ಐಆರ್‌

‘ಆರೋಪಿ ಸುರೇಶ್, ಮಗನನ್ನು ನೇಣು ಹಾಕುತ್ತಿದ್ದ ದೃಶ್ಯವನ್ನು ಮಗಳೇ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ಆ ದೃಶ್ಯವನ್ನು ಕದ್ದು ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟ ಆರೋಪದಡಿ ಸುದ್ದಿ ವಾಹಿನಿಯೊಂದರ ವರದಿಗಾರನ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಡಿಸಿಪಿ ಅಬ್ದುಲ್ ಅಹದ್ ಹೇಳಿದರು. ‘ಸುದ್ದಿ ಮಾಡಲು ಹೋಗಿದ್ದ ವರದಿಗಾರ, ತಾಯಿ–ಮಗನ ಫೋಟೊ ಬೇಕೆಂದು ಮಗಳ ಬಳಿ ಇದ್ದ ಮೊಬೈಲ್‌ ಪಡೆದುಕೊಂಡಿದ್ದ. ಅದರಲ್ಲಿದ್ದ ವಿಡಿಯೊ ನೋಡಿದ್ದ ಆತ, ಯಾರ ಗಮನಕ್ಕೂ ಬಾರದಂತೆ ತನ್ನ ಮೊಬೈಲ್‌ಗೆ ಕಳುಹಿಸಿಕೊಂಡಿದ್ದ. ನಂತರ, ವಾಟ್ಸ್‌ಆ್ಯಪ್‌ನಲ್ಲಿ ಹರಿಬಿಟ್ಟಿದ್ದ’ ಎಂದು ತಿಳಿಸಿದರು. ‘ಆ ವಿಡಿಯೊ ನೋಡಿದ ತಂದೆ– ಮಗಳಿಗೆ ಸಾಕಷ್ಟು ನೋವಾಗಿದೆ. ಆಕಸ್ಮಾತ್ ಆ ವಿಡಿಯೊ ವೈರಲ್ ಆದರೆ ಸಮಾಜದ ಮೇಲೂ ಕೆಟ್ಟ ಪರಿಣಾಮ ಬೀರಲಿದೆ’ ಎಂದರು.

‘ಮಕ್ಕಳನ್ನು ಸಾಯಿಸಬೇಡಿ’

‘ದೊಡ್ಡವರು ತಮ್ಮ ತಪ್ಪಿಗೆ ಮಕ್ಕಳಿಗೆ ಶಿಕ್ಷೆ ಕೊಡಬಾರದು. ಕಷ್ಟ ಬಂತು ಎಂಬ ಕಾರಣಕ್ಕೆ ಏನೂ ಅರಿಯದ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ದಯವಿಟ್ಟು ಮಕ್ಕಳನ್ನು ಸಾಯಿಸಬೇಡಿ. ನಿಮಗೆ ಸಾಕಲು ಆಗದಿದ್ದರೆ ಸರ್ಕಾರಕ್ಕೆ ಕೊಡಿ’ ಎಂದು ಡಿಸಿಪಿ ಅಬ್ದುಲ್ ಅಹದ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಈ ಹಿಂದೆಯೂ ಇಂಥ ಘಟನೆಗಳನ್ನು ನೋಡಿದ್ದೇನೆ. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಅದನ್ನು ಬಿಟ್ಟು ಸಾಯಿಸುವ ಬಗ್ಗೆ ಅಲ್ಲ’ ಎಂದು ಕಿವಿಮಾತು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 3

  Sad
 • 1

  Frustrated
 • 2

  Angry

Comments:

0 comments

Write the first review for this !