ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ 24 ಕಿ.ಮೀ.ಗೊಂದು ಶೌಚಾಲಯ!

Last Updated 15 ಏಪ್ರಿಲ್ 2019, 16:38 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಿಂದ ಅಥವಾ ಕಚೇರಿಯಿಂದ ಹೊರಬಿದ್ದ ಮೇಲೆ ಶೌಚಾಲಯಕ್ಕೆ ಏನಾದರೂ ‘ಅರ್ಜೆಂಟ್‌’ ಆಗಿ ಹೋಗಬೇಕಾದರೆ ಜನ ಕಿಲೋಮೀಟರ್‌ಗಟ್ಟಲೆ ಅಲೆಯಬೇಕು. ಅದೂ ಅಡಿ–ಅಡಿಗೂ ‘ಸಾವಧಾನ’ ಎನ್ನುವ ಸಂಚಾರ ದಟ್ಟಣೆಯಲ್ಲಿ!

ಹೌದು, ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ತೀವ್ರವಾಗಿದ್ದು, ಸದ್ಯ ಸರಾಸರಿ 24 ಕಿ.ಮೀ.ಗೆ ಒಂದರಂತೆ ಈ ಸೌಲಭ್ಯ ಇದೆ. ಮೆಜೆಸ್ಟಿಕ್‌, ಕೆ.ಆರ್‌. ಮಾರುಕಟ್ಟೆಯಂತಹ ಕೇಂದ್ರ ವಾಣಿಜ್ಯ ಪ್ರದೇಶದ ಆಸುಪಾಸಿನ ರಸ್ತೆಗಳ ಸಂದಿ–ಗೊಂದಿಗಳಲ್ಲಿ ಜನ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದ್ದರೂ ಬಿಬಿಎಂಪಿ ತಾನೀಗ ಬಯಲು ಬಹಿರ್ದೆಸೆ ಮುಕ್ತ ಪ್ರದೇಶ ಎಂದು ಘೋಷಿಸಿಕೊಂಡಿದೆ.

ನೂರು ಜನ ಪುರುಷರಿಗೆ ಒಂದು ಮತ್ತು ನೂರು ಜನ ಮಹಿಳೆಯರಿಗೆ ಎರಡು ಶೌಚಾಲಯವಿರಬೇಕು ಎಂದು ಸ್ವಚ್ಛ ಸರ್ವೇಕ್ಷಣಾ ಮಿಷನ್‌ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆಪ್ರತಿ 7ಕಿ.ಮೀ.ಗೆ ಒಂದು ಸಾರ್ವಜನಿಕ ಶೌಚಾಲಯವಿರಬೇಕು ಎಂದು ಸೂಚಿಸಲಾಗಿದೆ. ಆ ನಿಯಮದಂತೆ ನಗರದಲ್ಲಿ 1,600 ಶೌಚಾಲಯಗಳು ಇರಬೇಕು. ಆದರೆ, ಬಿಬಿಎಂಪಿ ಜಾಲತಾಣದ ಮಾಹಿತಿಯಂತೆನಗರದಲ್ಲಿ ಸದ್ಯ 479 ಶೌಚಾಲಯಗಳು ಮಾತ್ರ ಇವೆ.

ಅಸ್ತಿತ್ವದಲ್ಲಿರುವ ಶೌಚಾಲಯಗಳೂ ಸುಸ್ಥಿತಿಯಲ್ಲಿಲ್ಲ. ಬಕೆಟ್‌ಗಳು ಮುರಿದು ಹೋಗಿವೆ. ಅಲ್ಲಿಯಕೆಲವು ಬಾಗಿಲುಗಳಿಗೆ ಲಾಕ್‌ಗಳಿಲ್ಲ. ಬಹುತೇಕ ಕಡೆಕಸದ ತೊಟ್ಟಿಗಳಿಲ್ಲ. ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಕೆಲವು ಶೌಚಾಲಯಗಳಲ್ಲಿ ವಿದ್ಯುತ್‌ ವ್ಯವಸ್ಥೆ ಇಲ್ಲ, ವಾಷ್‌ ಬೇಸಿನ್‌ ಕೂಡ ಕಾಣೆಯಾಗಿದೆ.

ಕೆಲವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿ ನಿರ್ವಹಣೆಗೆ ನೀಡಲಾಗಿದೆ. ಇನ್ನೂ ಕೆಲವನ್ನು ಬಿಬಿಎಂಪಿ ನಿರ್ವಹಣೆ ಮಾಡುತ್ತಿದೆ.

ಸಮಸ್ಯೆ ಎಲ್ಲೆಲ್ಲಿ?

ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಒಂದಾದ, ಕಲಾಸಿಪಾಳ್ಯದಲ್ಲಿಬಹುತೇಕ ಶೌಚಾಲಯಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕೆಲವು ಕಾರ್ಮಿಕರು ಅವುಗಳನ್ನು ನಿರ್ವಹಣೆ ಮಾಡುತ್ತಿದ್ದು, ಬಿಬಿಎಂಪಿ ಸಹಾಯವಿಲ್ಲದ ಕಾರಣ ಅವ್ಯವಸ್ಥೆಯ ಆಗರವಾಗಿವೆ.

ನಗರದ ಸಂಪಂಗಿರಾಮನಗರ, ಕೆ.ಆರ್‌.ಮಾರುಕಟ್ಟೆ, ಸುಧಾಮನಗರ, ವಿಲ್ಸನ್‌ ಗಾರ್ಡನ್‌, ಮೆಜೆಸ್ಟಿಕ್‌, ಶಾಂತಿನಗರ ಮತ್ತು ಇತರ ಪ್ರದೇಶಗಳಲ್ಲಿಯೂ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ.

ಶೌಚಾಲಯಗಳ ಸ್ವಚ್ಛತಾ ಕಾರ್ಯವನ್ನು ನೋಡಿಕೊಳ್ಳುವವರು ಗ್ರಾಹಕರಿಂದ ಸಂಗ್ರಹಿಸಿದ ಚಿಲ್ಲರೆ ಹಣದಿಂದ ವಿದ್ಯುತ್‌ ಹಾಗೂ ನೀರಿನ ಶುಲ್ಕವನ್ನು ಪಾವತಿಸಬೇಕು. ಅದರಲ್ಲಿಯೇ ಸ್ವಚ್ಛತಾ ಪರಿಕರಗಳನ್ನೂ ಖರೀದಿ ಮಾಡಬೇಕು. ತಮ್ಮ ಮೇಲಿನ ಹೊರೆಯನ್ನು ಅವರು ಸಾರ್ವಜನಿಕರ ಮೇಲೆ ವರ್ಗಾಯಿಸುವುದರಿಂದ ಶೌಚಾಲಯಗಳ ಬಳಕೆಗೆ ಹೆಚ್ಚಿನ ಶುಲ್ಕ ಭರಿಸಬೇಕಾಗಿದೆ.

ಸಂಪಂಗಿರಾಮನಗರ ಶೌಚಾಲಯಸ್ವಚ್ಛ ಮಾಡುವ ಮಹಿಳೆಯೊಬ್ಬರನ್ನುಮಾತಿಗೆಳೆದಾಗ,‘ಮೂತ್ರ ವಿಸರ್ಜನೆಗೆ ₹2 ತೆಗೆದುಕೊಳ್ಳುತ್ತೇವೆ. ಶೌಚಕ್ಕೆ ₹5 ತೆಗೆದುಕೊಳ್ಳುತ್ತೇವೆ. ದಿನಕ್ಕೆ ಹೆಚ್ಚೆಂದರೆ ₹500 ಸಂಗ್ರಹವಾಗುತ್ತದೆ. ಅದೇ ಹಣದಲ್ಲಿ ವಿದ್ಯುತ್‌ ಬಿಲ್‌ ಪಾವತಿಸಬೇಕು. ಸ್ವಚ್ಛತಾ ಪರಿಕರ ಖರೀದಿಸಬೇಕು. ಪಾಲಿಕೆಯವರಿಂದ ಒಂದು ರೂಪಾಯಿಯೂ ಸಿಗುವುದಿಲ್ಲ’ ಎಂದು ಅಳಲು ತೋಡಿಕೊಂಡರು.

‘ಕೆಲವರು ದುಡ್ಡು ಕೊಡುತ್ತಾರೆ. ಇನ್ನೂ ಕೆಲವರು ಮೂತ್ರ ವಿಸರ್ಜನೆಗೂ ದುಡ್ಡು ಕೊಡಬೇಕಾ’ ಎಂದು ದಬಾಯಿಸುತ್ತಾರೆ. ಹೌದೆಂದರೆ ನಮ್ಮ ಜೊತೆ ಜಗಳ ಕಾಯುತ್ತಾರೆ’ ಎಂದು ಅಲ್ಲಿದ್ದ ಮತ್ತೊಬ್ಬ ಮಹಿಳೆ ಧ್ವನಿಗೂಡಿಸಿದರು.

ವಿಲ್ಸನ್ ಗಾರ್ಡನ್‌ ಶೌಚಾಲಯವೊಂದರ ಕೆಲಸಗಾರರೊಬ್ಬರು,‘ಬರುವ ದುಡ್ಡು ಯಾವುದಕ್ಕೂ ಸಾಲುವುದಿಲ್ಲ. ಆದರೂ ಶೌಚಾಲಯ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇವೆ. ಪಾಲಿಕೆಯವರು ಅಷ್ಟೋ ಇಷ್ಟೋ ಹಣ ನೀಡಿದರೆ ಶೌಚಾಲಯವನ್ನು ಸುಸ್ಥಿಯಲ್ಲಿಡುತ್ತೇವೆ’ ಎಂದು ತಿಳಿಸಿದರು.

ದೂಳು ಹಿಡಿದ ಇ–ಶೌಚಾಲಯ: ನಗರೋತ್ಥಾನ ಯೋಜನೆಯಡಿ ನಗರದ ವಿವಿಧ ಭಾಗಗಳಲ್ಲಿ ಇ–ಶೌಚಾಲಯ ಸ್ಥಾಪಿಸಲಾಗಿದೆ. ಅವುಗಳಲ್ಲಿ ಕೆಲವು ಬಳಸುವವರಿಲ್ಲದೇ ನಿರ್ವಹಣೆಯೂ ಇಲ್ಲದೇ ತುಕ್ಕು ಹಿಡಿದು ನಿಂತಿವೆ.

ಜಯನಗರ, ಕಬ್ಬನ್‌ ಉದ್ಯಾನ, ಬಸವನಗುಡಿ, ಶಂಕರಮಠ, ಕಾಮಾಕ್ಷಿಪಾಳ್ಯ ಮತ್ತು ದೇವೇಗೌಡ ಪೆಟ್ರೊಲ್‌ ಬಂಕ್‌ ಬಳಿ ಇಡಲಾಗಿರುವ ಇ–ಶೌಚಾಲಯಗಳು ದೂಳು ಹಿಡಿದು ನಿಂತಿವೆ. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದ ಬಳಿ ಸ್ಥಾಪಿಸಲಾದ ಶೌಚಾಲಯ ಬಳಕೆಗೆ ಮುಕ್ತವಾಗಿಲ್ಲ. ಕಬ್ಬನ್‌ ಉದ್ಯಾನದಲ್ಲಿಯ ಶೌಚಾಲಯವೂ ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿದೆ.

ಬಸವನಗುಡಿ, ಜೆ.ಪಿ.ನಗರ, ಯಲಹಂಕಗಳಲ್ಲಿರುವ ಇ–ಶೌಚಾಲಯಗಳು ಸಮರ್ಪಕವಾಗಿ ಬಳಕೆಯಾಗುತ್ತಿವೆ. ಕೆಲವು ಕಡೆ ದುಷ್ಕರ್ಮಿಗಳುನಾಣ್ಯದ ಡಬ್ಬಿಯನ್ನೇ ಕಳವು ಮಾಡಿಕೊಂಡು ಹೋಗಿದ್ದಾರೆ. ಇನ್ನೂ ಹಲವೆಡೆ ಜನರು ಒಳಗೆ ಸಿಕ್ಕಿಹಾಕಿಕೊಂಡ ಪ್ರಕರಣಗಳು ಸಹ ನಡೆದಿವೆ.

ಶೌಚಾಲಯ ವ್ಯವಸ್ಥೆ ಏನು, ಎತ್ತ?

ಶೌಚಾಲಯ;ಪುರುಷರು;ಮಹಿಳೆಯರು

ಬಳಕೆಗೆ ಯೋಗ್ಯ;76%;70%

ಸಮರ್ಪಕ ಬೆಳಕು;59%;58%

ಬಳಕೆಯೋಗ್ಯ ಫ್ಲಷ್‌;10%;6%

ವಾಷ್‌ ಬೇಸಿನ್‌ ಸೌಲಭ್ಯ;63%;42%

ಸ್ವಚ್ಛ ನೆಲಹಾಸು;47%;47%

ಕಸದತೊಟ್ಟಿ ವ್ಯವಸ್ಥೆ;13%;12%


10 ವಾರ್ಡ್‌ಗಳಲ್ಲಿ ಶೌಚಾಲಯಗಳಿಲ್ಲ

ಶೇ 61 ಜನಕ್ಕೆ ಮಾತ್ರ ಶೌಚಾಲಯ ಸೌಲಭ್ಯ

76 ನಗರದ ಹೊರಭಾಗದ ವಾರ್ಡ್‌ಗಳಲ್ಲಿರುವ ಶೌಚಾಲಯಗಳು

403 ನಗರದ ಒಳಭಾಗದ ವಾರ್ಡ್‌ಗಳಲ್ಲಿರುವ ಶೌಚಾಲಯಗಳು


ಹೆಚ್ಚು ಶೌಚಾಲಯ ಹೊಂದಿದ ವಾರ್ಡ್‌

ಸುಧಾಮನಗರ;28

ಧರ್ಮರಾಯಸ್ವಾಮಿ ದೇವಸ್ಥಾನ;22


ಆಧಾರ; ಐಚೇಂಜ್‌ ಮೈ ಸಿಟಿ ಸಂಸ್ಥೆಯಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT