ಟ್ಯಾನರಿ ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಸವಾಲು

ಬುಧವಾರ, ಜೂಲೈ 17, 2019
28 °C
ಟಿಡಿಆರ್‌ ಪಡೆದು ಭೂಮಿ ಬಿಟ್ಟುಕೊಡಲು ಒಪ್ಪದ ಭೂಮಾಲೀಕರು l ಅಧಿಕಾರಿಗಳಿಂದ ಮನವೊಲಿಕೆಗೆ ಯತ್ನ

ಟ್ಯಾನರಿ ರಸ್ತೆ ವಿಸ್ತರಣೆಗೆ ಭೂಸ್ವಾಧೀನ ಸವಾಲು

Published:
Updated:
Prajavani

ಬೆಂಗಳೂರು: ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಬಿಬಿಎಂಪಿ ಭಾರಿ ಪ್ರತಿರೋಧ ಎದುರಿಸಿದ್ದು, ಇದೀಗ ಟ್ಯಾನರಿ ರಸ್ತೆ ವಿಸ್ತರಣೆ ವಿಚಾರದಲ್ಲೂ ಅಂತಹದ್ದೇ ಸವಾಲು ಎದುರಾಗಿದೆ.

ಎಂ.ಎಂ.ರಸ್ತೆಯಿಂದ ಹೊರ ವರ್ತುಲ ರಸ್ತೆವರೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ರಸ್ತೆಯನ್ನು (ಟ್ಯಾನರಿ ರಸ್ತೆ) ಅಗಲಗೊಳಿಸುವುದಕ್ಕೆ ಬಿಬಿಎಂಪಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ. ಆದರೆ, ಈ ಕಾಮಗಾರಿ ನಡೆಸಲು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾಮಗಾರಿ ಬಾಕಿ ಉಳಿದಿದೆ.

ಸ್ಥಳೀಯ ಪಾಲಿಕೆ ಸದಸ್ಯರು, ಶಾಸಕರು ಮತ್ತು ಸ್ಥಳೀಯರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕಾಮಗಾರಿ ಸಲುವಾಗಿ ಬಿಟ್ಟುಕೊಡುವ ಭೂಮಿಗೆ ಪ್ರತಿಯಾಗಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪ್ರಮಾಣಪತ್ರ ನೀಡುವ ಕುರಿತು ಭೂಮಾಲೀಕರ ಮನವೊಲಿಸುವ ಪ್ರಯತ್ನ ನಡೆಸಿದೆ.

ಒಟ್ಟು 4.16 ಕಿ.ಮೀ.ಉದ್ದದ ರಸ್ತೆಯನ್ನು ₹ 30.92 ಕೋಟಿ ವೆಚ್ಚದಲ್ಲಿ ವಿಸ್ತರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 3,140 ಚದರ ಮೀಟರ್‌ ಜಮೀನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ. ರಸ್ತೆಯ ಎರಡೂ ಬದಿಯಲ್ಲಿರುವ 653 ಆಸ್ತಿಗಳನ್ನು ಇದಕ್ಕಾಗಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಬಿಬಿಎಂಪಿ ಬಳಿ ಇದೀಗ 14 ಸರ್ಕಾರಿ ಆಸ್ತಿ ಒಳಗೊಂಡಂತೆ 1,500 ಚದರ ಮೀಟರ್ ಜಮೀನು ಲಭ್ಯವಿದೆ. ಟಿಡಿಆರ್‌ ಮೂಲಕವೇ ಇವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈಗಿರುವ ರಸ್ತೆಯ ಅಗಲ 7ಮೀ.ನಿಂದ 15 ಮೀಟರ್‌ನಷ್ಟಿದೆ. 4.16 ಕಿ.ಮೀ.ಉದ್ದಕ್ಕೂ 24 ಮೀಟರ್‌ (80 ಅಡಿ) ರಸ್ತೆ ನಿರ್ಮಿಸುವ ಯೋಜನೆ ಇದೆ. ಎರಡೂ ಬದಿಯಲ್ಲೂ ತಲಾ 2.40 ಮೀಟರ್‌ ಅಗಲದ ಪಾದಚಾರಿ ಮಾರ್ಗವನ್ನೂ ನಿರ್ಮಿಸಬೇಕಿದೆ.

ಭೂಮಾಲೀಕರು ಟಿಡಿಆರ್‌ ಪಡೆದು ಜಮೀನು ಕೊಡಲು ಹಿಂದೇಟು ಹಾಕಿದ್ದಾರೆ. ಬದಲಿಗೆ, 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಮಾರುಕಟ್ಟೆ ಮೌಲ್ಯದಂತೆ ನಗದು ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

‘ಬಹಳ ಹಿಂದೆಯೇ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. 653 ಆಸ್ತಿಗಳನ್ನು ಸ್ವಾಧೀನಪಡಿಸಬೇಕಿರುವುದರಿಂದ ಕಾಮಗಾರಿ ಆರಂಭವಾಗಲು ಬಹಳ ಸಮಯ ಹಿಡಿಯಬಹುದು’ ಎಂದು ಬಿಬಿಎಂಪಿಯ ರಸ್ತೆ ಮೂಲಸೌಲಭ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಎಸ್‌.ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಾಧೀನಪಡಿಸಿಕೊಂಡ 14 ಆಸ್ತಿಗಳಲ್ಲಿ ಆವರಣ ಗೋಡೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ಆರಂಭಿಸಿದ್ದೇವೆ. ಖಾಸಗಿಯವರಿಂದ ಆಸ್ತಿ ಸ್ವಾಧೀನಪಡಿಸಿಕೊಂಡ ಬಳಿಕ ಅಲ್ಲಿ ನಾವು ಕೆಲಸ ಆರಂಭಿಸುತ್ತೇವೆ. ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ಬಳಿ ಯೋಜನೆಯ ಸಿದ್ಧತಾ ಕಾರ್ಯಗಳು ನಡೆದಿವೆ’ ಎಂದು ರಸ್ತೆ ವಿಸ್ತರಣೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜೆ.ಆರ್‌.ನಂದೀಶ್‌ ತಿಳಿಸಿದರು.

ಯೋಜನೆ ಪ್ರಕಾರ ಕಾಮಗಾರಿ ಪೂರ್ಣಗೊಂಡ ಬಳಿಕ ಟ್ಯಾನರಿ ರಸ್ತೆಯ ಎಂ.ಎಂ.ರಸ್ತೆ ಮತ್ತು ಅಂಬೇಡ್ಕರ್ ಕಾಲೇಜು ನಡುವಿನ ರಸ್ತೆಯಲ್ಲಿ ವಾಹನ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಅಂಕಿ ಅಂಶ

* 7–15 ಮೀಟರ್‌ ಈಗಿರುವ ರಸ್ತೆಯ ಅಗಲ

* 24 ಮೀಟರ್‌ ವಿಸ್ತರಣೆ ಕಾಮಗಾರಿ ಬಳಿಕ ರಸ್ತೆಯ ಅಗಲ

* ₹ 30.92 ಕೋಟಿ ಯೋಜನೆಯ ಅಂದಾಜು ವೆಚ್ಚ

* 653 ಸ್ವಾಧೀನಕ್ಕೆ ಗುರುತಿಸಲಾದ ಒಟ್ಟು ಆಸ್ತಿಗಳು

* 18 ತಿಂಗಳು ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿರುವ ಸಮಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !