ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5ಕ್ಕೆ ತಮಿಳುನಾಡು ಬಂದ್‌

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಚೆನ್ನೈ: ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಎಂದು ಒತ್ತಾಯಿಸಿ ಡಿಎಂಕೆ ಈ ತಿಂಗಳ 5ರಂದು ತಮಿಳುನಾಡು ಬಂದ್‌ಗೆ ಕರೆನೀಡಿದೆ.

ಸಮಾನ ಮನಸ್ಕ ವಿರೋಧ ಪಕ್ಷಗಳ ಮುಖಂಡರ ಜತೆ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್‌ ಭಾನುವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿ ಸಂಘಟನೆಗಳಿಂದ ಸಹಕಾರವನ್ನು ಕೋರಲಾಗಿದ್ದು ಬಂದ್‌ ನಡೆಸಲು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

ಕಾಂಗ್ರೆಸ್‌ನ ತಮಿಳುನಾಡು ಘಟಕದ ಅಧ್ಯಕ್ಷ ಸು.ತಿರುನವುಕ್ಕರಸಾರ್‌, ವಿ.ಸಿ.ಕೆ ಮುಖ್ಯಸ್ಥ ತಿರುಮವಲವನ್‌, ಸಿಪಿಎಂ ಹಾಗೂ ಸಿಪಿಐ ರಾಜ್ಯ ಕಾರ್ಯದರ್ಶಿಗಳಾದ ಕೆ. ಬಾಲಕೃಷ್ಣನ್‌, ಆರ್.ಮುಥಾರಸನ್‌ ಸೇರಿದಂತೆ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಬಂದ್‌ ನಡೆಯಲಿದ್ದು, ಈ ವೇಳೆ ‘ಕಾವೇರಿ ಹಕ್ಕು ರಕ್ಷಿಸಿ ಯಾತ್ರೆ’ ನಡೆಸಲಾಗುವುದು ಎಂದು ಸ್ಟಾಲಿನ್‌ ತಿಳಿಸಿದರು.

ಕಪ್ಪುಬಾವುಟ ಪ್ರದರ್ಶನ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ತಮಿಳುನಾಡಿಗೆ ಭೇಟಿ ನೀಡುವ ವೇಳೆ ಪಕ್ಷದ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶನ ಮಾಡಲಿದ್ದಾರೆ ಎಂದ ಸ್ಟಾಲಿನ್‌, ನಿರ್ವಹಣಾ ಮಂಡಳಿ ರಚಿಸಲು ಕೇಂದ್ರ ವಿಳಂಬ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು.

ಗಡುವು ಅಂತ್ಯ: ನದಿ ವಿವಾದ ಕುರಿತು ಫೆ.16ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಆರು ವಾರಗಳಲ್ಲಿ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿತ್ತು. ಕೋರ್ಟ್‌ ನೀಡಿದ್ದ ಗಡುವು ಮಾರ್ಚ್‌ 29ಕ್ಕೆ ಮುಗಿದಿದೆ.

**

ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಬೆಂಬಲಿಸಿದರೆ ಎನ್‌ಡಿಎ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿನ ಅವಿಶ್ವಾಸ ಗೊತ್ತುವಳಿ ಮಂಡನೆಗೆ ತಾವು ಸಿದ್ಧ ಎಂದು ಎಐಎಡಿಎಂಕೆಯ ಹಿರಿಯ ಮುಖಂಡ ಎಂ. ತಂಬಿದೊರೈ ಹೇಳಿದ್ದಾರೆ.

‘ಇದಕ್ಕೆ ಬೆಂಬಲ ನೀಡುವುದಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೇಳಿಕೆ ನೀಡಬೇಕಿದೆ. ಅವರೆಲ್ಲರೂ ನಮಗೆ ಬೆಂಬಲ ನೀಡಿದರೆ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡನೆ ಸಾಧ್ಯವಾಗಲಿದೆ’ ಎಂದು ಪತ್ರಕರ್ತರಿಗೆ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT