ಸಮುದ್ರ ಸುತ್ತಿ ಬಂದ ‘ತಾರಿಣಿ’ಯರು

ಮಂಗಳವಾರ, ಮಾರ್ಚ್ 26, 2019
31 °C
ಮಹಿಳಾ ಲೆಫ್ಟಿನೆಂಟ್ ಕಮಾಂಡರ್‌ಗಳ ಸಾಧನೆ , 40 ಸಾವಿರ ಕಿ.ಮೀ. ಪ್ರಯಾಣ , 254 ದಿನ ನೀರಿನಲ್ಲಿ ತೇಲಿದರು

ಸಮುದ್ರ ಸುತ್ತಿ ಬಂದ ‘ತಾರಿಣಿ’ಯರು

Published:
Updated:
Prajavani

ಬೆಂಗಳೂರು:‌ ಬೆಚ್ಚಿ ಬೀಳಿಸುವ ಸಮುದ್ರ ಅಲೆಗಳ ಆರ್ಭಟ. ಅಷ್ಟದಿಕ್ಕುಗಳಲ್ಲೂ ನೀರು, ಚಿತ್ರ– ವಿಚಿತ್ರ ಜಲಚರಗಳ ದರ್ಶನ. ಮೈ  ಹೆಪ್ಪುಗಟ್ಟಿಸುವ ತಾಪಮಾನ. ದಡವೇ ಕಾಣದ ಮಾರ್ಗದಲ್ಲಿ 254 ದಿನಗಳ ಸುದೀರ್ಘ ಸಮುದ್ರಯಾನ. ವಾಪಸ್‌ ಭೂಮಿ ನೋಡುತ್ತೇವೆಯೇ ಎಂಬ ಅನುಮಾನ...

ಭಾರತದ ನೌಕಾದಳದ ‘ತಾರಿಣಿ’ ಹಡಗಿನಲ್ಲಿ ಸಮುದ್ರಯಾನ ಮಾಡಿ ಬಂದಿರುವ ಮಹಿಳಾ ಲೆಫ್ಟಿನೆಂಟ್ ಕಮಾಂಡರ್‌ಗಳಾದ ಉತ್ತರಾಖಂಡದ ವರ್ತಿಕಾ ಜೋಷಿ, ಹಿಮಾಚಲ ಪ್ರದೇಶದ ಪ್ರತಿಭಾ ಜಮ್ವಾಲ್, ಹೈದರಾಬಾದ್‌ನ ಐಶ್ವರ್ಯ ಬಡ್ಡಪತಿ, ವಿಶಾಖಪಟ್ಟಣದ ಪಿ. ಸ್ವಾತಿ, ಮಣಿಪುರದ ಎಸ್‌.ವಿಜಯಾ ದೇವಿ ಹಾಗೂ ಡೆಹ್ರಾಡೂನ್‌ನ ಪಾಯಲ್ ಗುಪ್ತಾ ಅವರ ಪ್ರಯಾಣದ ಅನುಭವವಿದು. 

ದೇಶದ ಇತಿಹಾಸದಲ್ಲೇ ಮಹಿಳಾ ಲೆಫ್ಟಿನೆಂಟ್ ಕಮಾಂಡರ್‌ಗಳು, ಮೊದಲ ಬಾರಿಗೆ ಸ್ವತಂತ್ರವಾಗಿ ಹಡಗಿನಲ್ಲಿ ಸಮುದ್ರ ಸುತ್ತಿ ಬಂದಿದ್ದಾರೆ. ಏಷ್ಯಾದಲ್ಲೇ ಮೊದಲ ಪ್ರಯತ್ನ ಇದಾಗಿದ್ದು, ಆರೂ ಮಂದಿ ಮಹಿಳೆಯರು ಇದೀಗ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ.

ಪ್ರಯಾಣದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ‘ತಾರಿಣಿ’ ಸಾಕ್ಷ್ಯಚಿತ್ರ ಸಿದ್ಧಪಡಿಸಲಾಗಿದೆ. ಅದರ ಪ್ರಚಾರಾರ್ಥ ಬೆಂಗಳೂರಿನ ಮೌಂಟ್‌ ಕಾರ್ಮೆಲ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಲೆಫ್ಟಿನೆಂಟ್ ಕಮಾಂಡರ್‌ಗಳು ಸಮುದ್ರಯಾನದ ಅನುಭವ ಹಂಚಿಕೊಂಡರು.

‘ನಾವು ಬದುಕಿ ಬಂದಿದ್ದೇ ಪವಾಡ. ಅದಕ್ಕಾಗಿ ಆ ದೇವರಿಗೆ ನಮಸ್ಕರಿಸುತ್ತೇನೆ’ ಎನ್ನುತ್ತಲೇ ಮಾತು ಆರಂಭಿಸಿದ ತಂಡದ ನಾಯಕಿ ವರ್ತಿಕಾ ಜೋಷಿ, ‘ಸಾವಿನ ಜೊತೆಗಿನ ಹೋರಾಟ ನಮ್ಮದಾಗಿತ್ತು. ಒಂದೊಂದು ನಿಮಿಷಕ್ಕೂ ಒಂದೊಂದು ಸವಾಲು. ಪ್ರಯಾಣ ಮುಗಿಸಿ ವಾಪಸ್‌ ಭೂಮಿ ಮೇಲೆ ಕಾಲಿಟ್ಟಾಗ ಮರುಜನ್ಮ ಬಂದಂತಾಯಿತು’ ಎಂದು ಹೇಳಿದರು.

‘ಆರು ಮಂದಿಯೂ ಬೇರೆ ಬೇರೆ ರಾಜ್ಯಗಳಿಂದ ಬಂದವರು. ನೌಕಾದಳದಲ್ಲೇ ಕುಟುಂಬದ ಸದಸ್ಯರಂತಾದೆವು. ನೌಕಾದಳಕ್ಕೆ ಮಹಿಳೆಯರು ಹೆಚ್ಚು ಸೇರುವುದಿಲ್ಲವೆಂಬ ಮಾತಿದೆ. ಅದು ಈಗ ಸುಳ್ಳಾಗಿದೆ. ‘ತಾರಿಣಿ’ ಯಾತ್ರೆ ಮಾಡುವ ಮೂಲಕ, ಮಹಿಳೆಯರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲವೆಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ’ ಎಂದು ಹೆಮ್ಮೆಯಿಂದ ತಿಳಿಸಿದರು.

‘ಹವಾಮಾನ ನಾವು ಅಂದುಕೊಂಡಂತೆ ಇರಲಿಲ್ಲ. ಸಾಕಷ್ಟು ತೊಂದರೆ ಉಂಟಾಯಿತು. ಕೆಲ ಆ್ಯಪ್‌ ಬಳಸಿಕೊಂಡು ಹವಾಮಾನದ ಬಗ್ಗೆ ತಿಳಿದುಕೊಳ್ಳುತ್ತಿದ್ದೆವು. ನಮ್ಮ ಹಡಗಿನ ಜಾಗ ಚಿಕ್ಕದು. ಆರು ಮಂದಿ ಎರಡು ಸರದಿಯಲ್ಲಿ ಹಡಗು ನಿರ್ವಹಣೆ ಮಾಡುತ್ತಿದ್ದೆವು. ಅವಘಡಗಳು ಸಂಭವಿಸುವ ಮುನ್ಸೂಚನೆ ಸಿಕ್ಕಾಗ ಒಟ್ಟಿಗೆ ಕೆಲಸ ಮಾಡಿದೆವು’ ಎಂದು ಅನುಭವ ಹಂಚಿಕೊಂಡರು.

‘ಹಡಗಿನಲ್ಲಿ 600 ಲೀಟರ್ ಕುಡಿಯುವ ನೀರು ಶೇಖರಿಸಲು ಮಾತ್ರ ಜಾಗವಿತ್ತು. ದಿನಸಿ ಹಾಗೂ ಇತರೆ ವಸ್ತುಗಳ ಸಂಗ್ರಹವೂ ಅಷ್ಟಕಷ್ಟೆ. ಹಸಿವು, ದಣಿವು, ಆಯಾಸ... ಎಲ್ಲವನ್ನೂ ಸಹಿಸಿಕೊಂಡು ಸಮುದ್ರಯಾನ ಪೂರ್ಣಗೊಳಿಸಿದೆವು ಎಂಬ ಹೆಮ್ಮೆ ನಮಗಿದೆ’ ಎಂದು ವರ್ತಿಕಾ ವಿವರಿಸಿದರು.

‘ಲಿಂಗ ತಾರತಮ್ಯ ಸಾಧನೆಗೆ ಅಡ್ಡಿಯಾಗುವುದಿಲ್ಲ. ನಮಗೆ ಸಮುದ್ರಯಾನದ ಗುರಿ ನಿಚ್ಚಳವಾಗಿತ್ತು. ನೌಕಾದಳಕ್ಕೆ ಸೇರಿದ ಮೇಲೆ ಗಂಡು–ಹೆಣ್ಣು ಎಂಬ ತಾರತಮ್ಯ ಇಲ್ಲ. ಎಲ್ಲರೂ ಎಲ್ಲ ಕೆಲಸ ಮಾಡಬೇಕು. ಇಂದು ನೌಕಾದಳದಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದು ಖುಷಿ ಸಂಗತಿ’ ಎಂದು ಅವರು ಖುಷಿಪಟ್ಟರು. 

3 ವರ್ಷಗಳ ಕಠಿಣ ತರಬೇತಿ: ತಂಡದ ಮತ್ತೊಬ್ಬ ಲೆಫ್ಟಿನೆಂಟ್ ಕಮಾಂಡರ್ ಪಿ.ಸ್ವಾತಿ, ‘ನ್ಯಾಷನಲ್ ಜಿಯಾಗ್ರಫಿ ವಾಹಿನಿಯವರು ನೌಕಾದಳದ ಮುಖ್ಯಸ್ಥರನ್ನು ಭೇಟಿಯಾಗಿ ‘ತಾರಿಣಿ’ ಪ್ರಯಾಣದ ಬಗ್ಗೆ ಪ್ರಸ್ತಾಪಿಸಿದ್ದರು. ಅದಕ್ಕೆ ಒಪ್ಪಿದ್ದ ಮುಖ್ಯಸ್ಥರು, ನಮ್ಮನ್ನು ಆಯ್ಕೆ ಮಾಡಿ 3 ವರ್ಷಗಳ ಸುದೀರ್ಘ ತರಬೇತಿ ನೀಡಿ ಪ್ರಯಾಣಕ್ಕೆ ಸಿದ್ಧಗೊಳಿಸಿದ್ದರು’ ಎಂದು ಹೇಳಿದರು.

‘ಕ್ಯಾಪ್ಟನ್ ದಿಲೀಪ್ ದೋಂಡೆ ಅವರು 2014ರಿಂದ 2017ರವರೆಗೆ ನಮಗೆ ತರಬೇತಿ ನೀಡಿದ್ದರು. ಬದುಕಿ ಬರುವುದು ಖಚಿತವಿಲ್ಲವೆಂದು ಹೇಳಿದ್ದರು. ನಾವೆಲ್ಲರೂ ಮಾನಸಿಕವಾಗಿ ಸಿದ್ಧರಾಗಿ ಪ್ರಯಾಣಕ್ಕೆ ಅಣಿಯಾಗಿದ್ದೆವು’ ಎಂದು ಅವರು ಸ್ಮರಿಸಿದರು.

ಗೋವಾದಿಂದ ಹೊರಟಿದ್ದ ಹಡಗು: ಇನ್ನೊಬ್ಬ ಸದಸ್ಯೆ ಐಶ್ವರ್ಯ ಬಡ್ಡಪತಿ, ‘ನಾವಿಕ ಸಾಗರ ಪರಿಕ್ರಮ’ ಹೆಸರಿನಲ್ಲಿ ಈ ಸಮುದ್ರಯಾನದ ರೂಪುರೇಷೆ ಸಿದ್ಧಪಡಿಸಲಾಯಿತು. 2017ರ ಸೆ. 10ರಂದು ಗೋವಾದಿಂದ ಶುರುವಾದ ನಮ್ಮ ಪ್ರಯಾಣ 2018ರ ಮೇ 21ರಂದು ಮುಕ್ತಾಯವಾಯಿತು. ನಮ್ಮ ಯಾನದಲ್ಲಿ ನಾಲ್ಕು ಖಂಡಗಳು, ಮೂರು ಸಮುದ್ರಗಳ ಮೂಲಕ 21,600 ನಾಟಿಕಲ್ ಮೈಲ್‌ಗಳನ್ನು (40,003 ಕಿ.ಮೀ) ಪೂರೈಸಿದ್ದೇವೆ’ ಎಂದು ತಿಳಿಸಿದರು.

‘ಸಮುದ್ರಯಾನದ ಚಿತ್ರೀಕರಣವನ್ನು ನಾವೇ ಮಾಡಿದ್ದೇವೆ. ಕೆಲ ಸಂದರ್ಭದಲ್ಲಿ ವಾಹಿನಿಯವರು ಹೆಲಿಕಾಪ್ಟರ್‌ಗಳಲ್ಲಿ ಬಂದು ಶೂಟಿಂಗ್ ಮಾಡಿಕೊಂಡು ಹೋದರು. ಸಾಕ್ಷ್ಯಚಿತ್ರ ಅತ್ಯದ್ಭುತವಾಗಿ ಮೂಡಿಬಂದಿದೆ. ಅಂತರರಾಷ್ಟ್ರೀಯ ಮಹಿಳಾ ದಿನದಂದೇ ಅದು ಪ್ರದರ್ಶನಗೊಳ್ಳಲಿದೆ’ ಎಂದು ಹೇಳಿದರು. 

ನೌಕಾದಳ ಸೇರಲು ಏನು ಮಾಡಬೇಕು?

‘ನನಗೂ ನಿಮ್ಮಂತೆ ನೌಕಾದಳಕ್ಕೆ ಸೇರುವ ಆಸೆ ಇದೆ. ಹೇಗೆ ಸೇರುವುದು’ ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಎಸ್‌.ವಿಜಯಾ ದೇವಿ, ‘ನೌಕಾದಳದಲ್ಲಿ ಲಾಜಿಸ್ಟಿಕ್, ಶಿಕ್ಷಣ ಹಾಗೂ ತಾಂತ್ರಿಕ ಎಂಬ ಮೂರು ವಿಭಾಗಗಳಿವೆ. ಎಂಜಿನಿಯರಿಂಗ್, ಭಾಷಾ ವಿಷಯಗಳಲ್ಲಿ ಪದವಿ ಹಾಗೂ ತತ್ಸಮಾನ ವಿದ್ಯಾರ್ಹತೆಯುಳ್ಳವರು ನೌಕಾದಳ ಸೇರಬಹುದು’ ಎಂದರು.

‘ನೌಕಾದಳದ ಜಾಲತಾಣದಲ್ಲಿ ಹುದ್ದೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ನಿಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು’ ಎಂದರು.

ಹಡಗಿನಲ್ಲಿ ಜಗಳ ಮಾಡಲಿಲ್ಲವೇ?

‘ಮಹಿಳೆಯರು ಎಂದರೆ, ಒಬ್ಬರಿಗೊಬ್ಬರು ಜಗಳಾಡುತ್ತಲೇ ಇರುತ್ತಾರೆ ಎಂಬ ಮಾತಿದೆ. ನೀವೇನಾದರೂ ಹಡಗಿನಲ್ಲಿ ಜಗಳವಾಡಿದ್ದೀರಾ?’ ಎಂಬ ವಿದ್ಯಾರ್ಥಿನಿ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಐಶ್ವರ್ಯ ಬಡ್ಡಪತಿ, ‘ಜಗಳಾನಾ? ಮನೆ– ಕಚೇರಿಯಲ್ಲಿ ಜಗಳ ಆಡಿದರೆ, ಕೋಪ ಮಾಡಿಕೊಂಡು ಹೊರಗೆ ಹೋಗಬಹುದು. ಅದು ಸಮುದ್ರ. ಅಲ್ಲಿ ಜಗಳವಾಡಿದರೆ ಮುಗಿದೇ ಹೋಯಿತು’ ಎಂದರು.

‘ನಮ್ಮ–ನಿಮ್ಮ ಕುಟುಂಬದಲ್ಲಿ ಜಗಳ ಸಾಮಾನ್ಯ. ಆದರೂ ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ಇರುತ್ತೇವೆ. ಒಬ್ಬರ ಮುಖವನ್ನು ಇನ್ನೊಬ್ಬರು ನಿತ್ಯ ನೋಡಲೇ ಬೇಕು. ಹಡಗು ಸಹ ನಮಗೆ ಮನೆಯಂತೆ. ಸಣ್ಣ ಪುಟ್ಟದ್ದಕ್ಕೆಲ್ಲ ದೊಡ್ಡ ಜಗಳ ಮಾಡಿಲ್ಲ’ ಎಂದು ಹೇಳಿದರು.

ಹೆಣ್ಣು ಹುಟ್ಟಿದ್ದಕ್ಕೆ ಬೇಜಾರಾಗಿದ್ದರು

ಬಾಲ್ಯವನ್ನು ನೆನಪಿಸಿಕೊಂಡ ಲೆಫ್ಟಿನೆಂಟ್ ಕಮಾಂಡರ್ ಪಿ.ಸ್ವಾತಿ, ‘ನಮ್ಮ ತಂದೆ–ತಾಯಿಗೆ ನಾನು ಮೂರನೇ ಮಗಳು. ನನಗಿಂತ ಹಿರಿಯರಾದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಬೇಕು ಎಂಬುದು ಅವರ ಆಸೆಯಾಗಿತ್ತು. ನಾನು ಹುಟ್ಟಿದಾಗ, ಅವರೆಲ್ಲ ಬೇಜಾರಾಗಿದ್ದರು’ ಎಂದರು.

‘ಈಗ ನನ್ನ ಸಾಧನೆ ನೋಡಿ ತಂದೆ–ತಾಯಿ ಹೆಮ್ಮೆಪಡುತ್ತಿದ್ದಾರೆ. ನನ್ನನ್ನೇ ಗಂಡು ಮಗನಂತೆ ಕಾಣುತ್ತಿದ್ದಾರೆ. ಇಂದಿನ ಮಹಿಳೆಯರು, ಯಾವುದೇ ಕೆಲಸವಿರಲಿ ಹಾಗೂ ಸ್ಥಳವಿರಲಿ ಧೈರ್ಯದಿಂದ ಮುನ್ನುಗ್ಗಬೇಕು. ಯಶಸ್ಸು ತಾನಾಗಿಯೇ ಬರುತ್ತದೆ’ ಎಂದು ಹೇಳಿದರು.

‘ತಾರಿಣಿ’ ಸಾಕ್ಷ್ಯಚಿತ್ರ ಪ್ರಸಾರ

ವಾಹಿನಿ: ನ್ಯಾಷನಲ್‌ ಜಿಯಾಗ್ರಫಿ, ಯಾವಾಗ: ಮಾರ್ಚ್‌ 8,
ಸಮಯ: ರಾತ್ರಿ 9 ಗಂಟೆ

Tags: 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !