ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧರಿಗೆ ಶಿಕ್ಷಕರ ಶ್ರದ್ಧಾಂಜಲಿ

ಚನ್ನಮ್ಮ ವೃತ್ತದಲ್ಲಿ ಮೊಂಬತ್ತಿ ಬೆಳಗಿ ಸೈನಿಕರ ಬಲಿದಾನ ನೆನೆದ ಸಾವಿರಾರು ಶಿಕ್ಷಕರು
Last Updated 20 ಫೆಬ್ರುವರಿ 2019, 14:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಸಾವಿರಾರು ಶಿಕ್ಷಕರು ಹುಬ್ಬಳ್ಳಿಯಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಲ್ಯಾಮಿಂಗ್ಟನ್ ಶಾಲೆಯ ಆವರಣದಿಂದ ಚನ್ನಮ್ಮ ವೃತ್ತದ ವರೆಗೆ ಮೆರವಣಿಗೆ ನಡೆಸಿದ ಶಿಕ್ಷಕರು ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿದರು. ಮೊಂಬತ್ತಿ ಬೆಳಗುವ ಮೂಲಕ ಮಡಿದ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.

ನಿವೃತ್ತ ವಿಂಗ್ ಕಮಾಂಡರ್ ಸಿ.ಎಸ್. ಹವಾಲ್ದಾರ್ ಮಾತನಾಡಿ, ‘ಪಾಕಿಸ್ತಾನದ ಮೇಲೆ ಮಾಡಿದ ಮೂರೂ ಯುದ್ಧಗಳಲ್ಲಿ ನಾವು ಗೆದ್ದಿದ್ದೇವೆ. ಆದರೆ ದೇಶದ ನಾಗರಿಕರೆಲ್ಲರೂ ಏಕೆ ಒಂದಾಗುತ್ತಿಲ್ಲ ಎಂಬ ಭಾವನೆ ಕಾಡುತ್ತಿದೆ. ಬೇರೆ ರಾಷ್ಟ್ರಗಳಲ್ಲಿ ರಾಷ್ಟ್ರಪ್ರೇಮ ಎಂಬುದು ಚರ್ಚೆಯ ವಿಷಯವೇ ಅಲ್ಲ. ನಮ್ಮಲ್ಲಿ ಮಾತ್ರ ಆ ಬಗ್ಗೆ ಚರ್ಚೆ ನಡೆಯುತ್ತದೆ. ಯೋಧರಿಗೆ ಯಾವುದೇ ಜಾತಿ, ಧರ್ಮ ಇಲ್ಲ. ನೀವು ಸಹ ಮಕ್ಕಳನ್ನು ಭಾರತೀಯರನ್ನಾಗಿ ರೂಪಿಸುವ ಕೆಲಸ ಮಾಡಿ’ ಎಂದರು.

‘ಶತ್ರುಗಳ ವಿರುದ್ಧ ಹೋರಾಡುವುದು ಸರಿ. ಆದರೆ ನಮ್ಮೊಳಗಿನ ಸಮಸ್ಯೆಗಳನ್ನು ಸಹ ಬಗೆಹರಿಸಿಕೊಳ್ಳಬೇಕು. ಕರ್ನಾಟಕ, ಪಶ್ಚಿಮ ಬಂಗಾಳ, ಜಮ್ಮು– ಕಾಶ್ಮೀರ ಎಲ್ಲವೂ ಸೇರಿಯೇ ಭಾರತವಾಗಿದೆ. ಕಾಶ್ಮೀರ ಬೇರೆ ಎಂಬ ಭಾವನೆ ಸಲ್ಲದು. ನಾವು ಅಲ್ಲಿಗೆ ಹೋಗಬೇಕು, ಅವರೂ ಸಹ ನಮ್ಮಲ್ಲಿಗೆ ಬರಬೇಕು’ ಎಂದು ಅವರು ಹೇಳಿದರು.

’ಶ್ರದ್ಧಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸುವ ಮೂಲಕ ಸೈನಿಕರ ಹಿಂದೆ ದೇಶದ ಜನರಿದ್ದಾರೆ ಎಂದು ತೋರಿಸಿದ್ದಾರೆ. ಇದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಸಿಕ್ಕ ನಂತರ ಸ್ವ ಇಚ್ಛೆಯಿಂದ ಭಾರತಕ್ಕೆ ಸೇರಿದ ಸಂಸ್ಥಾನಗಳಲ್ಲಿ ಕಾಶ್ಮೀರ ಸಹ ಒಂದು. ಆದರೆ ಈ ವಿಷಯ ಪಾಕಿಸ್ತಾನಕ್ಕೆ ಅರ್ಥವಾಗುತ್ತಿಲ್ಲ. ಪುಲ್ವಾಮ ದಾಳಿಗೆ ನಮ್ಮ ಸೈನಿಕರು ತಕ್ಕ ಉತ್ತರ ನೀಡುತ್ತಾರೆ, ಪ್ರತೀಕಾರ ತೀರಿಸಿಕೊಳ್ಳುತ್ತಾರೆ’ ಎಂದು ನಿವೃತ್ತ ಕರ್ನಲ್ ಆನಂದ ನಾಥೂ ಹೇಳಿದರು.

ನೇತೃತ್ವ ವಹಿಸಿದ್ದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಕ್ಕಳಿಗೆ ದೇಶ ಹಾಗೂ ಸೈನಿಕರ ಬಗ್ಗೆ ಮಾಹಿತಿ ನೀಡುವಂತೆ ನಿವೃತ್ತ ಸೈನಿಕರು ಸಲಹೆ ನೀಡಿದ್ದಾರೆ. ಅದನ್ನು ಜಾರಿ ಮಾಡುವ ಮೂಲಕ ಮಾದರಿ ಶಿಕ್ಷಣ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದು ಎಂದರು.

ಐಟಿಐ ಶಿಕ್ಷಕರ ಸಂಘದ ಸದಸ್ಯರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳಾದ ಜಿ.ಆರ್. ಭಟ್, ಎಸ್‌.ಎನ್. ಪಟ್ಟಣಶೆಟ್ಟಿ, ಬಿ.ಕೆ. ಮಳಗಿ, ಉದ್ದಾರ್, ಐಟಿಐ ಶಿಕ್ಷಕರ ಸಂಘದ ಆರ್‌.ಎನ್. ಕೋಟಿ, ಅರವಿಂದ ದಾನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT