ಮೌಲ್ಯಮಾಪನ ಕರ್ತವ್ಯದಿಂದ ತಪ್ಪಿಸಿಕೊಳ್ಳಬೇಡಿ: ಸುಮಂಗಲಾ

7
ಹೆಸರು ನೋಂದಾಯಿಸಿಕೊಳ್ಳದ ಶಿಕ್ಷಕರ ಮಾಹಿತಿ ಇದೆ: ಪರೋಕ್ಷವಾಗಿ ಎಚ್ಚರಿಕೆ ನೀಡಿದ ನಿರ್ದೇಶಕಿ

ಮೌಲ್ಯಮಾಪನ ಕರ್ತವ್ಯದಿಂದ ತಪ್ಪಿಸಿಕೊಳ್ಳಬೇಡಿ: ಸುಮಂಗಲಾ

Published:
Updated:
Prajavani

ಹುಬ್ಬಳ್ಳಿ: ಮೌಲ್ಯಮಾಪನ ಕರ್ತವ್ಯಕ್ಕೆ ಹೆಸರು ನೋಂದಣಿ ಮಾಡಿಕೊಳ್ಳದ ಶಿಕ್ಷಕರ ಮಾಹಿತಿ ಇದೆ ಎಂದು ಹೇಳಿದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ (ಪರೀಕ್ಷೆ) ವಿ. ಸುಮಂಗಲಾ, ವಿನಾಕಾರಣ ತಪ್ಪಿಸಿಕೊಳ್ಳಲು ಯತ್ನಿಸುವ ಶಿಕ್ಷಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಶಹರ ಘಟಕ, ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಶಾಂತಿನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಯಲ್ಲಿ ಶನಿವಾರ ಏರ್ಪಡಿಸಿದ್ದ ‘ಮಕ್ಕಳಲ್ಲಿ ಪರೀಕ್ಷಾ ಭೀತಿ ನಿವಾರಣೆಯಲ್ಲಿ ಶಿಕ್ಷಕರ ಪಾತ್ರ’ ವಿಷಯ ಕುರಿತ ಮಾಹಿತಿ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೀಕ್ಷೆಯ ನಂತರ ಶೀಘ್ರಗತಿಯಲ್ಲಿ ಮೌಲ್ಯಮಾಪನ ಮಾಡಿ ಫಲಿತಾಂಶ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ‘ಆನ್‌ಲೈನ್ ಮಾರ್ಕ್ ಕೋಟಿಂಗ್’ ವಿಧಾನ ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಶಿಕ್ಷಕರ ಸಹಕಾರ ಅಗತ್ಯ. ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯ. 74 ಸಾವಿರ ಶಿಕ್ಷಕರು ಈಗಾಗಲೇ ಇದಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅನುದಾನಿತ, ಅನುದಾನರಹಿತ ಶಾಲೆಗಳ ಶಿಕ್ಷಕರೂ ಸೇರಿದಂತೆ ಕೆಲವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿಲ್ಲ. ಅಂತಹವರ (ಬ್ಲಾಕ್‌ಶೀಪ್) ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಇದರಿಂದ ವಿಮುಖರಾಗಬೇಡಿ. ನಿಮ್ಮದೇ ಕೈಕಾಲು ಮುರಿದ್ದರೆ ಮಾತ್ರ ವಿನಾಯಿತಿ ಎಂದು ಖಡಕ್ ಆಗಿ ಹೇಳಿದರು.

ಮೌಲ್ಯಮಾಪನ ಮಾಡಿದ ದಿನವೇ ಶಿಕ್ಷಕರ ಖಾತೆಗೆ ನೇರವಾಗಿ ಭತ್ಯೆ ಸಂದಾಯ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೂ ಸಹ ಹಿಂದೇಟು ಹಾಕುವುದು ಸರಿಯಲ್ಲ. ನಿಮ್ಮ ಮೇಲೆ ಅಪಾರ ಭರವಸೆ ಇಟ್ಟುಕೊಂಡಿರುವ ಸಮಾಜ– ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಅದಕ್ಕೆ ಚ್ಯುತಿ ತರಬಾರದು. ಐದು ದಿನಗಳ ಕಾಲ ಮೌಲ್ಯಮಾಪನ ಕರ್ತವ್ಯ ನಿರ್ವಹಿಸಿ. ವಿನಾಯಿತಿ ಕೇಳಬೇಡಿ, ಯಾರಿದಂದಲೂ ಫೋನ್ ಮಾಡಿಸಬೇಡಿ ಎಂದರು.

ಮೌಲ್ಯಮಾಪನದಲ್ಲಿ ಆಗುವ ಲೋಪದೋಷಗಳಿಗೆ ಕಡಿವಾಣ ಹಾಕಲು ಆನ್‌ಲೈನ್ ಮಾರ್ಕ್ ಕೋಟಿಂಗ್ ಪದ್ಧತಿ ಜಾರಿ ಮಾಡಲಾಗಿದೆ. ಮೂರು ಹಂತದಲ್ಲಿ ಇದು ಪರಿಶೀಲನೆಗೆ ಒಳಪಡುವುದರಿಂದ ಈ ವ್ಯವಸ್ಥೆಯಲ್ಲಿ ತಪ್ಪುಗಳಾಗುವ ಸಾಧ್ಯತೆ ತೀರಾ ಕಡಿಮೆ. ಬೇಗ ಫಲಿತಾಂಶ ನೀಡಲು ಸಹ ಸಾಧ್ಯವಾಗುತ್ತದೆ. ಪೂರಕ ಪರೀಕ್ಷೆಯಲ್ಲಿ ಹೊಸ ಪದ್ಧತಿಯ ಯಶಸ್ವಿ ಪ್ರಯೋಗ ಮಾಡಲಾಗಿದೆ. 2.6 ಲಕ್ಷ ಉತ್ತರ ಪತ್ರಿಕೆಗಳಲ್ಲಿ ಕೇವಲ 13ರಲ್ಲಿ ಮಾತ್ರ ಲೋಪಗಳಿತ್ತು. ಈ ಬಾರಿ ಎಲ್ಲ 220 ಕೇಂದ್ರಗಳಲ್ಲಿ ಹೊಸ ಪದ್ಧತಿ ಜಾರಿಗೆ ಬರಲಿದೆ ಎಂದರು.

ಮನೋವೈದ್ಯ ಡಾ. ಆದಿತ್ಯ ಪಾಂಡುರಂಗಿ ಮಕ್ಕಳಲ್ಲಿ ಪರೀಕ್ಷೆಯ ಭಯ ಕುರಿತು ಮಾತನಾಡಿದರು. ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಹ ನಿರ್ದೇಶಕಿ ಗಿರಿಜಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ಹುಡೇದ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !