ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: ಅವಕಾಶ ನೂರಾರು, ಹಾಜರಿದ್ದವರು ಸಾವಿರಾರು

ಮೈಸೂರು, ಬೆಂಗಳೂರು ಕೌನ್ಸೆಲಿಂಗ್‌ ಕೇಂದ್ರಗಳಲ್ಲಿ ಅಸಮಾಧಾನ
Last Updated 9 ಆಗಸ್ಟ್ 2019, 19:23 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ವರ್ಗಾವಣೆಗೆ ಅವಕಾಶ ಇರುವುದು ನಾನ್ನೂರೋ, ಐನೂರೋ ಮಂದಿಗೆ, ಆದರೆ ಸಾವಿರಾರು ಮಂದಿಯನ್ನು ಕರೆಸಿಕೊಂಡು ಸತಾಯಿಸುತ್ತಿರುವುದಕ್ಕೆ ಮೈಸೂರು ಮತ್ತು ಬೆಂಗಳೂರು ಕೌನ್ಸೆಲಿಂಗ್‌ ಕೇಂದ್ರಗಳಲ್ಲಿಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗುರುವಾರ ಮೊದಲ 500 ಮಂದಿಗೆ ಕೌನ್ಸೆಲಿಂಗ್‌ ಇತ್ತು. ಶುಕ್ರವಾರ 501ರಿಂದ ಆರಂಭಗೊಂಡು 4 ಸಾವಿರಕ್ಕೂ ಅಧಿಕ ಮಂದಿಯನ್ನು ಕರೆಸಿಕೊಂಡಿದ್ದಾರೆ. ಬಾರದೆ ಇದ್ದರೆ ಗೈರು ಎಂಬ ಷರಾ ಬರೆಯುವುದಾಗಿ ಎಚ್ಚರಿಸಿದ್ದಾರೆ. ಒಟ್ಟಾರೆ 550ರಿಂದ 600 ಮಂದಿಗಷ್ಟೇ ವರ್ಗಾವಣೆ ಅವಕಾಶ ಇರುವುದು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಗೋಳು ನೋಡಿಕೊಂಡು ಅಧಿಕಾರಿಗಳು ಸಂತೋಷ ಪಡುತ್ತಾರೋ ಏನೋ ಗೊತ್ತಿಲ್ಲ’ ಎಂದು ಬೆಂಗಳೂರಿನ ಶಿಕ್ಷಕರ ಸದನಕ್ಕೆ ಕೌನ್ಸೆಲಿಂಗ್‌ಗೆ ಬಂದಿದ್ದ ಮಡಿಕೇರಿಯ ಪ್ರೌಢಶಾಲಾ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಕೌನ್ಸೆಲಿಂಗ್‌ ಪಟ್ಟಿಯಲ್ಲಿ ಅವರ ಕ್ರಮ ಸಂಖ್ಯೆ 2 ಸಾವಿರದಾಚೆ ಇತ್ತು. ತಮಗೆ ಅವಕಾಶ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಅವರು ಸುಮ್ಮನೆ ಅಲ್ಲಿ ನಿಂತಿದ್ದರು.

ಮೈಸೂರಿನಲ್ಲೂ ಇದೇ ರೀತಿ ನಡೆದಿದ್ದು, ಬುಧವಾರ ಕೇವಲ 400ರಷ್ಟು ಮಂದಿಗೆ ವರ್ಗಾವಣೆ ಅವಕಾಶ ಸಿಕ್ಕಿತ್ತು. ಆದರೆ ಮೂರು ಸಾವಿರಕ್ಕೂ ಅಧಿಕ ಮಂದಿ ದೂರದ ಊರುಗಳಿಂದ ಬಂದು ಅಲ್ಲಿ ಸೇರಿದ್ದರು. ‘ಒಟ್ಟಾರೆ ಅರ್ಜಿಗಳ ಪೈಕಿ ಶೇಕಡಾವಾರು ಪ್ರಮಾಣ ಆಯ್ಕೆಯೇ ಅವೈಜ್ಞಾನಿಕ. ಹುದ್ದೆಗಳು ಖಾಲಿ ಇರುವಾಗ ಆಯಾ ಸ್ಥಳದ ಆಕಾಂಕ್ಷಿಗಳನ್ನು ವರ್ಗಾಯಿಸಲೇನು ಅಡ್ಡಿ’ ಎಂದು ಹಲವು ಶಿಕ್ಷಕರು ದೂರಿದರು.

ಹಳ್ಳಿಗಾದರೂ ಕೊಡಿ ಶಿವಾ: ಮೈಸೂರಿನ ವಿಭಾಗೀಯ ಕಚೇರಿಗೆ ಹಾಗೂ ಬೆಂಗಳೂರಿಗೆಬಂದಿದ್ದ ಬಹುತೇಕ ಶಿಕ್ಷಕರು ನಗರ ಪ್ರದೇಶದ ಶಾಲೆಗಳಿಗೇ ವರ್ಗಾವಣೆ ಕೇಳಿದವರು ಅಲ್ಲ. ಹಲವರಿಗೆ ತಮ್ಮ ಜಿಲ್ಲೆ, ಸಮೀಪದ ತಾಲ್ಲೂಕು, ಪತಿ–ಪತ್ನಿ, ಕುಟುಂಬಕ್ಕೆ ಸಮೀಪದಲ್ಲಿರುವ ಪ್ರದೇಶಕ್ಕೆ ಕೋರಿ ಬಂದಿದ್ದರು. ಅವರಿಗೆ ಇದೀಗ ತೀವ್ರ ನಿರಾಸೆಯಾಗಿದೆ. ಮುಂದಿನ ವರ್ಷ ಹೇಗೂ ಕಡ್ಡಾಯ ವರ್ಗಾವಣೆ ಆಗುತ್ತದೆ. ಹಾಗಾಗಿ ಈ ಬಾರಿಯೇ ‘ಸುರಕ್ಷಿತ’ ಸ್ಥಳ ನೋಡಿಕೊಳ್ಳೋಣ ಎಂದು ಅರ್ಜಿ ಹಾಕಿದ ನಗರ ‍ಪ್ರದೇಶದವರೂ ಕಾಣಿಸಿಕೊಂಡರು.

‘ಸುಮಾರು 8 ವರ್ಷ ಬೇರೆ ಬೇರೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕೆಲಸ ಮಾಡಿ ನಗರ ಪ್ರದೇಶದ ಶಾಲೆಗೆ ಬಂದವರಿಗೆ ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷೆಯ ರೂಪದಲ್ಲೇ ಬಂದಂತಿದೆ. ಎಲ್ಲ ಕಡೆ ಕೆಲಸ ಮಾಡಿ ಕೊನೆಗೆ ಕುಟುಂಬದೊಂದಿಗೆ ಒಂದೆಡೆ ನೆಲೆ ನಿಲ್ಲುವ ಹಂತದಲ್ಲಿ ಮತ್ತೆ ಕಡ್ಡಾಯ ವರ್ಗಾವಣೆ ಮಾಡುವುದು ಶಿಕ್ಷಣ ಇಲಾಖೆಯ ವಿಕೃತಿಯೇ ಸರಿ. ಹಾಗಿದ್ದರೆ ಇಷ್ಟು ವರ್ಷ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಬೆಲೆಯೇ ಇಲ್ಲವೇ’ ಎಂದು ಕೆಲವು ಶಿಕ್ಷಕರು ಪ್ರಶ್ನಿಸಿದರು.

ಆದ್ಯತಾಪಟ್ಟಿ ಎಂಬ ನಾಟಕ

‘ಆದ್ಯತಾಪಟ್ಟಿಯಲ್ಲಿ ಪತಿ–ಪತ್ನಿ ಪ್ರಕರಣ ಇದೆ. ಅದರಲ್ಲೂ ಪತಿ– ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿರಬೇಕು. ಹಾಗಿದ್ದರೆ ಖಾಸಗಿ ಸಂಸ್ಥೆಗಳಲ್ಲಿದ್ದವರನ್ನು ಸರ್ಕಾರಿ ಉದ್ಯೋಗಿ ಮದುವೆಯಾಗಲೇಬಾರದು ಎಂದು ಹೇಳಿದಂತಿದೆ ವರ್ಗಾವಣೆ ನೀತಿ. ವಿಚ್ಛೇದಿತಮಹಿಳೆಗೆ ಆದ್ಯತೆಯಿದೆ. ವರ್ಗಾವಣೆ ಕಾರಣಕ್ಕಾಗಿ ವಿಚ್ಛೇದನ ಕೊಡಬೇಕೇ? ಪರಿಸ್ಥಿತಿ ಹೀಗೇ ಮುಂದುವರಿದರೆ ನಾವು ವಿಚ್ಛೇದಿತರಾಗುವ ದಿನಗಳು ದೂರವಿಲ್ಲ’ ಎಂದು ಹೊಸಕೋಟೆಯ ಶಿಕ್ಷಕಿಯೊಬ್ಬರು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT