ಬೆಂಗಳೂರು: ಟೆಕಿಯೊಬ್ಬರಿಗೆ ಮೂತ್ರಪಿಂಡ ಕಸಿ ಮಾಡಿಸಲು ಅಗತ್ಯ ಅನುಮತಿ ನೀಡುವ ಸಂಬಂಧ ಶೀಘ್ರವೇ ಕ್ರಮ ಜರುಗಿಸುವಂತೆ ರಾಜ್ಯ ಮಾನವ ಅಂಗಾಂಗ ಕಸಿ ಅನುಮತಿ ಸಮಿತಿ ಮುಖ್ಯಸ್ಥರಿಗೆ ಹೈಕೋರ್ಟ್ ನಿರ್ದೇಶಿಸಿದೆ.
‘ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಹಾಗೂ ಮಾನವ ಅಂಗಾಂಗ ಕಸಿ ಅನುಮತಿ ಸಮಿತಿ ಮುಖ್ಯಸ್ಥರಿಗೆ ನಿರ್ದೇಶಿಸಬೇಕು’ ಎಂದು ಕೋರಿ ವೈಟ್‌ಫೀಲ್ಡ್ ನಿವಾಸಿಯಾದ ಸಾಫ್ಟ್‌ವೇರ್ ಎಂಜಿನಿಯರ್ ಮೊಹಮದ್ ಝೈದ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತರು, ಸಮಿತಿಗೆ ಮುಖ್ಯಸ್ಥರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಪಿ. ಅನುಚೆಂಗಪ್ಪ ವಾದ ಮಂಡಿಸಿ, ‘ಅರ್ಜಿದಾರಿಗೆ ಮೂತ್ರಪಿಂಡ ದಾನ ಮಾಡಲು ವ್ಯಕ್ತಿಯೊಬ್ಬರು ಸಿದ್ಧರಿದ್ದಾರೆ. ಆದರೆ, ಪ್ರತಿವಾದಿ ಆಸ್ಪತ್ರೆಗಳು ಮೂತ್ರಪಿಂಡ ಕಸಿಗೆ ಒಪ್ಪುತ್ತಿಲ್ಲ. ಸಮಿತಿಯಿಂದ ಅನುಮತಿ ಹಾಗೂ ಕೋರ್ಟ್‌ನಿಂದ ಆದೇಶ ಪಡೆದು ತರುವಂತೆ ಸೂಚಿಸುತ್ತಿದ್ದಾರೆ’ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮೂತ್ರಪಿಂಡ ಕಸಿಗೆ ಅನುಮತಿ ನೀಡುವಂತೆ ಕೋರಿ ಅರ್ಜಿದಾರರು ಸಮಿತಿಗೆ ಅರ್ಜಿ ಸಲ್ಲಿಸಬೇಕು. ಇದನ್ನು ಸಮಿತಿ ಕೂಡಲೇ ಪರಿಗಣಿಸಿ ಅಗತ್ಯ ಕ್ರಮ ಜರುಗಿಸಬೇಕು’ ಎಂದು ಸೂಚಿಸಿತು.
ಪ್ರತಿವಾದಿ ಆಸ್ಪತ್ರೆಗಳಾದ ನಾರಾಯಣ ಹೃದಯಾಲಯ, ಸುಗುಣ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಕೊಲಿಂಬಿಯಾ ಏಷಿಯಾ, ಮಣಿಪಾಲ್ ಆಸ್ಪತ್ರೆಗಳಿಗೆ ತುರ್ತು ನೋಟಿಸ್ ಜಾರಿಗೆ ನ್ಯಾಯಪೀಠ ಆದೇಶಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.