ಕೊಪ್ಪಳ: ಕೋಳಿ ಮೊಟ್ಟೆ ಖರೀದಿಗೆ ಟೆಂಡರ್ ರದ್ದು- ಡಿಸಿ ಆದೇಶ; ಚರ್ಚೆಗೆ ಗ್ರಾಸ

7
₹ 3 ಕೋಟಿ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಜಮಾ ಆಗಬೇಕಿದ್ದ ಹಣ

ಕೊಪ್ಪಳ: ಕೋಳಿ ಮೊಟ್ಟೆ ಖರೀದಿಗೆ ಟೆಂಡರ್ ರದ್ದು- ಡಿಸಿ ಆದೇಶ; ಚರ್ಚೆಗೆ ಗ್ರಾಸ

Published:
Updated:
Deccan Herald

ಕೊಪ್ಪಳ: ಅಪೌಷ್ಟಿಕ ಮತ್ತು ಗರ್ಭಿಣಿಯರು ಸೇರಿದಂತೆ 1,15,402 ಫಲಾನುಭವಿಗಳಿಗೆ ಮೊಟ್ಟೆ ಖರೀದಿಸಲು ₹ 3 ಕೋಟಿ ಮೊತ್ತದ ಟೆಂಡರ್ ಅನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಿದ್ದು, ಅಧಿಕಾರಿಗಳ ಕರ್ತವ್ಯ ಲೋಪ ಜಿಲ್ಲೆಯಲ್ಲಿ ಚರ್ಚೆ ಹುಟ್ಟು ಹಾಕಿದೆ.

ಸರ್ಕಾರದ ಆದೇಶ ಉಲ್ಲಂಘಿಸಿ ನೇರವಾಗಿ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ಹಣ ಜಮಾ ಮಾಡಬೇಕಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಟೆಂಡರ್ ಕರೆದಿದ್ದರು. ಅದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದು ಟೆಂಡರ್ ರದ್ದು ಪಡಿಸುವ ಆದೇಶ ಹೊರಡಿಸಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿರುವ ಅತಿ ಕಡಿಮೆ ತೂಕವುಳ್ಳ ತೀವ್ರತರ ಅಪೌಷ್ಟಿಕ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ, ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಣೆ ಸೇರಿದಂತೆ ಇತರ ಯೋಜನೆ ಜಾರಿಯಲ್ಲಿದ್ದು, ಇದರ ಅನುಷ್ಠಾನದಲ್ಲಿ ಇಲಾಖೆಯ ಅಧಿಕಾರಿಗಳು ಸರ್ಕಾರದ ಆದೇಶವನ್ನೇ ಉಲ್ಲಂಘಿಸಿರಿವುದು ಸ್ಪಷ್ಟವಾಗಿದೆ.

ಸರ್ಕಾರದ ಆದೇಶ ಹಾಗೂ ಸುತ್ತೋಲೆ, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, 4 ತಾಲ್ಲೂಕುಗಳ 5 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳ ಅಪೌಷ್ಟಿಕ ಮಕ್ಕಳಿಗೆ ಹಾಗೂ ಇತ್ತೀಚೆಗೆ ಜಾರಿಯಾಗಿರುವ ಮಾತೃಪೂರ್ಣ ಯೋಜನೆಯಡಿಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕೋಳಿ ಮೊಟ್ಟೆ ಸರಬರಾಜಿಗಾಗಿ ಸುಮಾರು ₹ 3 ಕೋಟಿ ಮೊತ್ತಕ್ಕೆ 12 ಜೂನ್ 7ರಂದು ಟೆಂಡರ್ ಕರೆದಿದ್ದಾರೆ.

ಅಂಗನವಾಡಿ ಮಕ್ಕಳು ತಿನ್ನುವ ಅನ್ನಕ್ಕೂ ಕೈಹಾಕಿದ್ದು, ಸರ್ಕಾರದ ಆದೇಶವನ್ನು ಪಾಲಿಸಬೇಕಾದವರು ಮೊಟ್ಟೆ ಖರೀದಿಗೆ ಮುಂದಾಗಿದ್ದಾರೆ. ಟೆಂಡರ್‌ದಾರಿಗೆ ಅನುಕೂಲವಾಗಲು ಟೆಂಡರ್‌ನಲ್ಲಿ ಭ್ರಷ್ಟಾಚಾರ ಎಸಗಲು ತಯಾರಿ ನಡೆದಿತ್ತು ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆಗಳು ಕೇಳಿಬಂದಿವೆ.

ಟೆಂಡರ್ ರದ್ದುಗೊಳಿಸಲು ಸರ್ಕಾರದ ಅದೇಶ: ಅಂಗನವಾಡಿ ಕೇಂದ್ರಗಳಿಗೆ ಅವಶ್ಯವಿರುವ ಕೋಳಿ ಮೊಟ್ಟೆ ಟೆಂಡರ್ ಮೂಲಕ ಖರೀದಿಸಲು ಪ್ರಧಾನ ಕಚೇರಿಯಿಂದ ಯಾವುದೇ ಸೂಚನೆ ನೀಡಿಲ್ಲ. ಆದರೂ ಟೆಂಡರ್ ಕರೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಟೆಂಡರ್ ಕರೆಯದಂತೆ ಸೂಚಿಸಿದ್ದು, ಈಗಾಗಲೇ ಟೆಂಡರ್ ಕರೆದಿದ್ದರೆ ತಕ್ಷಣ ರದ್ದುಪಡಿಸುವುಂತೆ ಆಗಸ್ಟ್ 8ರಂದು ಪತ್ರದಲ್ಲಿ ಸೂಚಿಸಿದ್ದು, ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾರ್ಯಾದೇಶ ನೀಡುವ ಹಂತದಲ್ಲಿದ್ದರೆ ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡುವವರೆಗೂ ಯಾವುದೇ ಪ್ರಕ್ರಿಯೆ ಮುಂದುವರೆಸದಂತೆ ತಿಳಿಸಲಾಗಿದೆ.

ಇಲಾಖೆಯ ಉಪನಿರ್ದೇಶಕ 'ಕೋಳಿ ಮೊಟ್ಟೆ ವಿತರಣೆಗೆ ಟೆಂಡರ್ ಕರೆಯುವ ನಿಯಮ ಇಲ್ಲ. ಆದರೂ ಇಲ್ಲಿ ಕರೆಯಲಾಗಿದೆ, ಈಗ ಇಲಾಖೆಯ ನಿಯಾಮನುಸಾರ ಜಿಲ್ಲಾಧಿಕಾರಿಗಳು ಟೆಂಡರ್ ಅನ್ನು ರದ್ದುಗೊಳಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ  ಈರಣ್ಣ ಪಂಚಾಲ ತಿಳಿಸಿದ್ದಾರೆ.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !