ಶನಿವಾರ, ಸೆಪ್ಟೆಂಬರ್ 19, 2020
23 °C
ಸರ್ಕಾರಿ ಪ್ರೌಢಶಾಲೆಗಳಿಗೆ ಒದಗಿಸಿದ ಪ್ರೊಜೆಕ್ಟರ್‌ಗಳ ಬಳಕೆ ತರಬೇತಿ ಕಾರ್ಯಾಗಾರ

ಪಠ್ಯ ಬೋಧನೆಯಲ್ಲಿ ಪ್ರೊಜೆಕ್ಟರ್‌ ಸದ್ಭಳಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪಾಠಗಳ ಸುಲಭ ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒದಗಿಸಿರುವ ಪ್ರೊಜೆಕ್ಟರ್‌ಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಬೆಂಗಳೂರು ದಕ್ಷಿಣ ಮತ್ತು ಟಾಟಾ ಪವರ್ ಸೋಲಾರ್ ಸಹಯೋಗದಲ್ಲಿ ಆಯೋಜಿಸಿದ್ದ ಪ್ರೊಜೆಕ್ಟರ್‌ ಬಳಕೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ 100 ಶಾಲೆಗಳಿಗೆ ಸ್ಮಾರ್ಟ್‌ ಕ್ಲಾಸ್‌ಗೆ ಪೂರಕವಾಗಿ ಪ್ರೊಜೆಕ್ಟರ್‌ ಮತ್ತು ಪರದೆಗಳನ್ನು ವಿತರಿಸಲಾಗಿದೆ. ಈ ಪ್ರೊಜೆಕ್ಟರ್‌ಗಳಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಸಂಬಂಧಿಸಿದ ಪಠ್ಯ ಮತ್ತು ಪಠ್ಯಪೂರಕ ಪಾಠಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಸ್ವಯಂ ಅಧ್ಯಯನಕ್ಕೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ 31ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 20ನೇ ಸ್ಥಾನಕ್ಕೆ ಏರಿರುವುದು ಶ್ಲಾಘನೀಯ. ಆ ಸ್ಥಾನವನ್ನು ಮತ್ತಷ್ಟು ಹೆಚ್ಚಿಸಲು ಪ್ರೊಜೆಕ್ಟರ್‌ಗಳು ಸಹಕಾರಿಯಾಗಲಿವೆ. ಇದಕ್ಕಾಗಿಯೇ ಪ್ರತಿ ಪ್ರೌಢಶಾಲೆಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಪ್ರೊಜೆಕ್ಟರ್‌ ಬಳಕೆ ಕುರಿತು ಶಿಕ್ಷಕರಿಗೆ ತರಬೇತಿ ನೀಡುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ಮಕ್ಕಳಿಗೆ ಒಳ್ಳೆಯ ರೀತಿಯಲ್ಲಿ ವಿಜ್ಞಾನ, ಗಣಿತ, ಇಂಗ್ಲಿಷ್ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸುಲಭವಾಗಿ ಅರ್ಥೈಸಬೇಕಾಗಿದೆ. ಹಾಗಾಗಿ, ಆ ನಿಟ್ಟಿನಲ್ಲಿ ಪ್ರೊಜೆಕ್ಟರ್‌ಗಳು ಪರಿಣಾಮಕಾರಿಯಾಗಿ ಪ್ರಯೋಜನಕ್ಕೆ ಬರಲಿವೆ. ಶಿಕ್ಷಕರು ಈ ಯೋಜನೆಯ ಉದ್ದೇಶ ಅರಿತು ಬೋಧನೆ ಮಾಡಬೇಕು’ ಎಂದು ಹೇಳಿದರು.

ಟಾಟಾ ಪವರ್ ಸೋಲಾರ್ ಮುಖ್ಯಸ್ಥ ಶ್ರೀನಾಥ್, ರೋಟರಿ ಜಿಲ್ಲಾ ಪ್ರತಿನಿಧಿ ಶ್ರೀನಿವಾಸ್ ಮೂರ್ತಿ, ಯೋಜನಾ ಮುಖ್ಯಸ್ಥ ಶ್ರೀಧರ್, ಚಿಂತಾಮಣಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನರೇಂದ್ರ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು