ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನಾಯಕಿ ‘ಸರ್ವಮಂಗಳಾ’

Last Updated 7 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ: ಐತಿಹಾಸಿಕ, ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳ ಮೂಲಕ ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದವರು ಪಟ್ಟಣದ ಕೆ.ಸರ್ವಮಂಗಳಾ.

ವೃತ್ತಿರಂಗಭೂಮಿ ಕಲಾವಿದೆಯದ ಅವರು ರಂಗಭೂಮಿಯನ್ನೇ ಸರ್ವಸ್ವ ಮಾಡಿಕೊಂಡು ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿಯೂ ಬಹುತೇಕ ನಾಟಕಗಳಲ್ಲಿ ‘ರಂಗನಾಯಕಿ’ಯಾಗಿ ಪಾತ್ರಕ್ಕೆ ಜೀವತುಂಬಿರುವುದು ವಿಶೇಷ.

ಬಡತನದ ಕಾರಣಕ್ಕೆ 6ನೇ ತರಗತಿಗೆ ಶಾಲೆಗೆ ಶರಣು ಹೇಳಿದ ಅವರು, ಅಕ್ಕ ಸಾವಿತ್ರಮ್ಮ ಅವರ ಪಾತ್ರವನ್ನು ನೋಡುತ್ತಾ ಬಣ್ಣ ಹಚ್ಚಿದರು. 16ನೇ ವಯಸ್ಸಿಗೆ ‘ನೀತಿಗೆ ಎಲ್ಲಿದೆ ಜಾತಿ’ ಮೊದಲ ನಾಟಕದಲ್ಲಿಯೇ ನಾಯಕಿಯ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದು ಇನ್ನೂ ಅವರ ನೆನಪಿನಲ್ಲಿದೆ. ನಾಯಕಿ ಹಾಗೂ ಹಾಸ್ಯ ಪಾತ್ರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿರುವ ಅವರಿಗೆ ಈಗ 48 ವರ್ಷ ವಯಸ್ಸು. ಆದರೂ ರಂಗಭೂಮಿಯ ತುಡಿತ ಕಡಿಮೆಯಾಗಿಲ್ಲ, ಉತ್ಸಾಹವೂ ಕುಗ್ಗಿಲ್ಲ.

ಲಲಿತ ಕಲಾರಂಗದ ಸದಸ್ಯೆಯಾಗಿರುವ ಅವರು ಕಲಾರಂಗದ ‘ಬೆಳ್ಳಕ್ಕಿ ಹಿಂಡಿ ಬೆದರ್ಯಾವೊ’ ನಾಟಕದ ಚನ್ನಿಯ ಪಾತ್ರದಿಂದ ಹೆಚ್ಚು ಹೆಸರು ಮಾಡಿದರು. ‘ಶೀಲಾವತಿ’ಯಲ್ಲಿ ಶೀಲಾವತಿಯಾಗಿ, ರಕ್ತರಾತ್ರಿ, ಸಂಗ್ಯಾ–ಬಾಳ್ಯ, ಹೇಮರೆಡ್ಡಿ ಮಲ್ಲಮ್ಮ, ಅವ್ವಣ್ಣೆವ್ವ ನಾಟಕದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು.

ಒಪ್ಪತ್ತೇಶ್ವರ ಮಹಾತ್ಮೆ, ಕೊಟ್ಟೂರೇಶ್ವರ ಮಹಾತ್ಮೆ, ವಿರುಪಣ್ಣ ತಾತನ ಮಹಾತ್ಮೆ, ಮೊಳಿಗೆ ಮಹರಾಯ, ವಿಶ್ವಬಂಧು ಬಸವಣ್ಣ, ಸಾಕ್ಷಿಕಲ್ಲು, ಅಣ್ಣತಂಗಿ, ಮಲಮಗ, ರೈತನ ಮಗಳು, ಕಿವುಡ ಮಾಡಿದ ಕಿತಾಪತಿ ಸೇರಿದಂತೆ ನೂರಾರು ನಾಟಕಗಳಲ್ಲಿ ಅಭಿನಯಿಸಿರುವ ಅವರಿಗೆ ಯಾವುದೇ ಪುರಸ್ಕಾರ ದೊರಕಿಲ್ಲ.

‘ಜೀವನ ನಿರ್ವಹಣೆಗಾಗಿ ಬಣ್ಣದ ಬದುಕಿಗೆ ಕಾಲಿಟ್ಟೆ. ಮೂರು ದಶಕದಿಂದ ವೃತ್ತಿರಂಗಭೂಮಿ ಕಲಾವಿದೆಯಾದರೂ ಬಿಡುವಿನ ದಿನಗಳಲ್ಲಿ ಕೂಲಿ ಮಾಡುತ್ತೇನೆ. ರಂಗಭೂಮಿಯಲ್ಲಿ ಕಷ್ಟಸುಖದ ಜತೆಗೆ ಮಗ, ಮಗಳ ಓದುಬರಹ, ಮದುವೆ ಸೇರಿ ಎಲ್ಲವನ್ನೂ ಕಂಡಿದ್ದೇನೆ. ಆದರೆ, ನಿಂತ ನೀರಾಗಬಾರದು ಎನ್ನುವಂತೆ ಬೀದಿನಾಟಕಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎನ್ನುತ್ತಾರೆ ಸರ್ವಮಂಗಳಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT