ಮನೆಗೆ ನುಸುಳುವ ‘ಸೊಳ್ಳೆ’ ಪೊಲೀಸ್ ಬಲೆಗೆ!

7
ಸೂಜಿ–ದಾರ ಮಾರುವವರಂತೆ ಹೋಗಿ ಕಳ್ಳತನ ಮಾಡುತ್ತಿದ್ದ ದಂಪತಿ

ಮನೆಗೆ ನುಸುಳುವ ‘ಸೊಳ್ಳೆ’ ಪೊಲೀಸ್ ಬಲೆಗೆ!

Published:
Updated:
Prajavani

ಬೆಂಗಳೂರು: ಸೂಜಿ–ದಾರ ಮಾರುವವನ ಸೋಗಿನಲ್ಲಿ ಹೋಗಿ ಬೀಗ ಹಾಕಿರುವ ಮನೆಗಳ ಬಾಗಿಲು ಮುರಿದು ನಗ–ನಾಣ್ಯ ದೋಚುತ್ತಿದ್ದ ಗಂಗಣ್ಣ ಅಲಿಯಾಸ್ ಸೊಳ್ಳೆ ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ರಾಯದುರ್ಗದ ಗಂಗಣ್ಣ, ಪತ್ನಿ ಜಯಮ್ಮ ಜತೆ ಹೆಗ್ಗನಹಳ್ಳಿಯ ಕರೀಂಸಾಬ್‌ ಲೇಔಟ್‌ನಲ್ಲಿ ನೆಲೆಸಿದ್ದಾನೆ. ಈತನನ್ನು ಬಂಧಿಸಿ ₹ 15 ಲಕ್ಷ ಮೌಲ್ಯದ 505 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿಯೂ ಪಾತ್ರಧಾರಿ: ಸೂಜಿ–ದಾರ ಹಿಡಿದುಕೊಂಡು ಗಂಗಣ್ಣ ಒಂದು ದಾರಿಯಲ್ಲಿ ಹೋದರೆ, ಜಯಮ್ಮ ಇನ್ನೊಂದು ದಾರಿಯಲ್ಲಿ ಸಾಗುತ್ತಾಳೆ. ಮನೆ ಅಂಗಳದಲ್ಲಿ ಕಸ ಬಿದ್ದಿದ್ದರೆ, 2–3 ದಿನಗಳಿಂದ ಒಂದೇ ರಂಗೋಲಿ ಇದ್ದರೆ, ದಿನಪತ್ರಿಕೆಗಳು ಹಾಗೇ ಬಿದ್ದಿದ್ದರೆ ಆ ಮನೆಯಲ್ಲಿ ಯಾರೂ ಇಲ್ಲವೆಂಬ ನಿರ್ಧಾರಕ್ಕೆ ಬಂದು ಕಳ್ಳತನ ಮಾಡಲು ಸಂಚು ರೂಪಿಸುತ್ತಾರೆ.

ಇಬ್ಬರೂ ಒಂದು ಕಡೆ ಸೇರಿ, ತಾವು ಗುರುತಿಸಿರುವ ಮನೆಗಳ ಪಟ್ಟಿ ಮಾಡಿಕೊಳ್ಳುತ್ತಾರೆ. ನಂತರ ಮಧ್ಯಾಹ್ನ 2.30 ರಿಂದ 4 ಗಂಟೆ ನಡುವೆ ಆ ಮನೆಗಳ ಹತ್ತಿರ ಹೋಗುವ ಗಂಗಣ್ಣ, ಭುಜದಿಂದಲೇ ಗುದ್ದಿ ಬಾಗಿಲು ಮುರಿಯುತ್ತಾನೆ. ನಂತರ ನಗ–ನಾಣ್ಯ ದೋಚುವ ಆತ, ಸಿ.ಸಿ ಟಿ.ವಿ ಕ್ಯಾಮೆರಾಗಳಿದ್ದರೆ ಜಖಂಗೊಳಿಸಿ ಆಚೆ ಬರುತ್ತಾನೆ ಎಂದು ಪೊಲೀಸರು ಹೇಳಿದರು.

ಕದ್ದ ಚಿನ್ನವನ್ನು ಮನೆಯಲ್ಲೇ ಇಟ್ಟುಕೊಳ್ಳುವ ದಂಪತಿ, ತಮಗೆ ಖರ್ಚಿಗೆ ಹಣ ಬೇಕಾದಾಗ ಒಂದೊಂದೇ ಆಭರಣವನ್ನು ಪರಿಚಿತರಿಗೆ ಮಾರಾಟ ಮಾಡುತ್ತಾರೆ. ಇವರ ವಿರುದ್ಧ ರಾಜಗೋಪಾಲನಗರ, ಬ್ಯಾಡರಹಳ್ಳಿ, ಕಾಮಾಕ್ಷಿಪಾಳ್ಯ, ಸುಬ್ರಹ್ಮಣ್ಯನಗರ, ಯಲಹಂಕ, ಮಹಾಲಕ್ಷ್ಮಿಲೇಔಟ್ ಹಾಗೂ ಬಸವೇಶ್ವರನಗರ ಠಾಣೆಗಳ ವ್ಯಾಪ್ತಿಯಲ್ಲಿ 40 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ರಾಯದುರ್ಗದಲ್ಲಿ ಸೆರೆ: 2018ರ ನವೆಂಬರ್‌ನಲ್ಲಿ ಗಂಗಣ್ಣನನ್ನು ಕಾಮಾಕ್ಷಿಪಾಳ್ಯ ಪೊಲೀಸರೇ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಆತ, 15 ದಿನಗಳಲ್ಲೇ ಮತ್ತೆ ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಿ ಪತ್ನಿ ಜತೆ ರಾಯದುರ್ಗ ಸೇರಿದ್ದ. ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಪೊಲೀಸರ ತಂಡ ಗಂಗಣ್ಣನನ್ನು ರಾಯದುರ್ಗದಲ್ಲೇ ಸೆರೆ ಹಿಡಿದು ನಗರಕ್ಕೆ ಕರೆತಂದಿದೆ. ಜಯಮ್ಮ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಆಕೆ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಗಂಗಣ್ಣ ತುಂಬ ತೆಳ್ಳಗಿದ್ದ ಎಂಬ ಕಾರಣಕ್ಕೆ ಆತನ ಸ್ನೇಹಿತರು ‘ಸೊಳ್ಳೆ’ ಎಂದು ಅಡ್ಡ ಹೆಸರಿನಿಂದ ಕರೆಯುತ್ತಿದ್ದರು. ಪೊಲೀಸರು ‘ಅಲಿಯಾಸ್‌’ಗೆ ಅದೇ ಪದನಾಮ ಮುಂದುವರಿಸಿದರು. ಗಂಗಣ್ಣ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪೊಲೀಸರು ಅತನ ಪತ್ನಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

20 ಬೈಕ್ ಕದ್ದ ವಿದ್ಯಾರ್ಥಿ ಸೆರೆ

ಕದ್ದ ಬೈಕ್‌ಗಳಲ್ಲಿ ಸುತ್ತಾಡಿ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಡಿಪ್ಲೊಮಾ ವಿದ್ಯಾರ್ಥಿ ಅಬ್ದುಲ್ ವಾಹಿದ್ ಹಾಗೂ ಆತನ ಸ್ನೇಹಿತ ಅಬ್ರಾರ್ ಎಂಬಾತನನ್ನು ಬಂಧಿಸಿರುವ ಯಶವಂತಪುರ ಪೊಲೀಸರು, ಮೂರು ಬುಲೆಟ್‌ ಬೈಕ್‌ಗಳು ಸೇರಿದಂತೆ 20 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಇಬ್ಬರೂ ಆಂಧ್ರಪ್ರದೇಶದವರಾಗಿದ್ದು, ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಯಶವಂತಪುರದಲ್ಲಿ ನೆಲೆಸಿದ್ದರು. ಅಬ್ರಾರ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರೆ, ಅಬ್ದುಲ್ ಆರ್.ಟಿ.ನಗರದ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೋಜಿನ ಜೀವನ ನಡೆಸುವ ಉದ್ದೇಶದಿಂದ ಅಡ್ಡದಾರಿ ತುಳಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿ ವೇಳೆ ನಗರ ಸುತ್ತುತ್ತಿದ್ದ ಇವರು, ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕಳವು ಮಾಡುತ್ತಿದ್ದರು. ನಂತರ ಅವೇ ಬೈಕ್‌ಗಳನ್ನು ಸರಗಳವು ಕೃತ್ಯಕ್ಕೂ ಬಳಸುತ್ತಿದ್ದರು. ಇತ್ತೀಚೆಗೆ ಮತ್ತೀಕೆರೆಯ ಗೀತಾ ಎಂಬುವರಿಂದ ಸರ ಕಿತ್ತುಕೊಂಡು ಹೋಗಿದ್ದರು.

ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಆರೋಪಿಗಳ ಚಹರೆ ಸ್ಪಷ್ಟವಾಗಿ ಸೆರೆಯಾಗಿತ್ತು. ಆ ಚಹರೆಯನ್ನು ಸ್ಥಳೀಯರಿಗೆ ತೋರಿಸುತ್ತಾ ಹೋದಾಗ, ಆಟೊ ಚಾಲಕರೊಬ್ಬರು ಅಬ್ರಾರ್‌ನನ್ನು ಗುರುತಿಸಿದರು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊ‍ಪ್ಪಿಕೊಂಡ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !