1996ರ ಕಳ್ಳ ಬೆರಳಚ್ಚಿನ ಸುಳಿವಿಂದ ಸಿಕ್ಕಿಬಿದ್ದ!

7
50ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ 'ಕೆಜಿಎಫ್' ರಮೇಶ್

1996ರ ಕಳ್ಳ ಬೆರಳಚ್ಚಿನ ಸುಳಿವಿಂದ ಸಿಕ್ಕಿಬಿದ್ದ!

Published:
Updated:
Prajavani

ಬೆಂಗಳೂರು: 1996ನೇ ಇಸವಿಯಿಂದ ಕೋಲಾರ ಹಾಗೂ ಬೆಂಗಳೂರಿನ 50ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ರಮೇಶ್ ಅಲಿಯಾಸ್ ಕೆಜಿಎಫ್ (39) ಎಂಬಾತ, ಅಲ್ಮೆರಾದ ಬಾಗಿಲ ಮೇಲೆ ಮೂಡಿದ್ದ ಬೆರಳಚ್ಚಿನ ಸುಳಿವಿನಿಂದ ಕೆ.ಆರ್.‍ಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಕೆಜಿಎಫ್‌ನ ರಮೇಶ್, ಇತ್ತೀಚೆಗೆ ಕೆ.ಆರ್.ಪುರ ಠಾಣೆ ವ್ಯಾಪ್ತಿಯಲ್ಲೇ ಎಂಟು ಮನೆಗಳಲ್ಲಿ ಆಭರಣ ದೋಚಿದ್ದ. ಆತನಿಂದ ₹ 15 ಲಕ್ಷ ಮೌಲ್ಯದ 480 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದೇವೆ. ಕದ್ದ ಮಾಲು ಖರೀದಿಸಿದ್ದ ತಪ್ಪಿಗೆ ಕೋಲಾರದ ಆಭರಣ ವ್ಯಾಪಾರಿ ರಾಮ್‌ಕುಮಾರ್ ಎಂಬಾತನನ್ನೂ ಬಂಧಿಸಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಗುಂಡೇಟು ತಿಂದಿದ್ದ: ತನ್ನ 16ನೇ ವಯಸ್ಸಿನಲ್ಲೇ ಪಾತ್ರೆ ಹಾಗೂ ಕಬ್ಬಿಣದ ಚೂರುಗಳನ್ನು ಕದ್ದು ಗುಜರಿ ಅಂಗಡಿಗಳಿಗೆ ಮಾರುತ್ತಿದ್ದ ರಮೇಶ್, ಕ್ರಮೇಣ ಮನೆಗಳಿಗೇ ನುಗ್ಗಲು ಪ್ರಾರಂಭಿಸಿದ್ದ. ಮಧ್ಯಾಹ್ನದ ‍ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದ ಈತ, ರಾತ್ರಿ ಅವೇ ಮನೆಗಳ ಬೀಗ ಒಡೆದು ಕಳವು ಮಾಡುತ್ತಿದ್ದ.

2010ರಲ್ಲಿ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಿದ್ದ. ಆಗ ಆಡುಗೋಡಿ ಇನ್‌ಸ್ಪೆಕ್ಟರ್ ಕೈಗೆ ಗುಂಡು ಹೊಡೆದು ರಮೇಶ್‌ನನ್ನು ಬಂಧಿಸಿದ್ದರು. ಆರು ತಿಂಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ, ಕಾರು ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ. 2014ರಲ್ಲಿ ಮೊದಲ ಪತ್ನಿಯನ್ನು ತೊರೆದು ಎರಡನೇ ಮದುವೆಯಾದ ರಮೇಶ್, ಆ ನಂತರ ಮತ್ತೆ ಹಳೆ ಚಾಳಿ ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಳಿವು ಸಿಕ್ಕಿದ್ದು: ‘ರಮೇಶ್ ಕೆ.ಆರ್.ಪುರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೆ, ಆತನ ವೇಷಭೂಷಣ ಬದಲಾಗಿದ್ದರಿಂದ ಗುರುತಿಸಲು ಸಾಧ್ಯವಾಗಲಿಲ್ಲ. ಅಲ್ಮೆರಾದ ಬಾಗಿಲುಗಳ ಮೇಲೆ ಮೂಡಿದ್ದ ಬೆರಳಚ್ಚುಗಳನ್ನು ಸಂಗ್ರಹಿಸಿ, ಅದನ್ನು ಹಳೇ ಆರೋಪಿಗಳ ಬೆರಳಮುದ್ರೆಯೊಂದಿಗೆ ಹೋಲಿಕೆ ಮಾಡಿ ನೋಡಿದೆವು. ಆಗ ಆಡುಗೋಡಿ ಪೊಲೀಸರು 2010ರಲ್ಲಿ ಸಂಗ್ರಹಿಸಿದ್ದ ರಮೇಶ್‌ನ ಬೆರಳಮುದ್ರೆಗೆ ಹೋಲಿಕೆಯಾಯಿತು’ ಎಂದು ಪೊಲೀಸರು ವಿವರಿಸಿದರು.

‘ಆಭರಣ ಮಾರಿದ ಹಣದಲ್ಲಿ ಆರೋಪಿ ಮೋಜಿನ ಜೀವನ ನಡೆಸುತ್ತಿದ್ದ. ಸ್ನೇಹಿತರೊಂದಿಗೆ ಗೋವಾ, ಕೇರಳ ಹಾಗೂ ತಮಿಳುನಾಡು ಪ್ರವಾಸ ಹೋಗಿ ಖರ್ಚು ಮಾಡುತ್ತಿದ್ದ. ನ್ಯಾಯಾಧೀಶರು ರಮೇಶ್ ಹಾಗೂ ರಾಮ್‌ಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !