ಬತ್ತಿದ ಜಲಮೂಲಕ್ಕೆ ಮರುಜೀವದ ಯತ್ನ

ಭಾನುವಾರ, ಮಾರ್ಚ್ 24, 2019
27 °C
ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನ ಕಾಮಗಾರಿ * ಪ್ರತಿದಿನ 11 ಕೋಟಿ ಲೀಟರ್‌ ನೀರು ಪೂರೈಸುವ ಉದ್ದೇಶ

ಬತ್ತಿದ ಜಲಮೂಲಕ್ಕೆ ಮರುಜೀವದ ಯತ್ನ

Published:
Updated:

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ಪುನಶ್ಚೇತನ ಕಾಮಗಾರಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. 

ಅರ್ಕಾವತಿ - ಕುಮುದಾವತಿ ನದಿಗಳ ಸಂಗಮ ಸ್ಥಾನವಿದು. 1925ರಲ್ಲಿ ಹೆಸರಘಟ್ಟ ಕೆರೆಯಲ್ಲಿ ನೀರಿನ ಒರತೆ ಬತ್ತಲು ಆರಂಭವಾಗಿ‌ತ್ತು. ಹಾಗಾಗಿ 1930ರಲ್ಲಿ ಇಲ್ಲಿ ಜಲಾಶಯ ನಿರ್ಮಾಣ ಶುರುವಾಯಿತು. 1933ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಮಾರ್ಗದರ್ಶನದಲ್ಲಿ ಈ ಅಣೆಕಟ್ಟೆಯ ಕಾಮಗಾರಿ ಮುಕ್ತಾಯವಾಯಿತು. ತಿಪ್ಪಗೊಂಡನಹಳ್ಳಿಯ ಅಣೆಕಟ್ಟೆಯಿಂದ ನೀರನ್ನು ತಾವರೆಕೆರೆಗೆ ಪಂಪ್‌ ಮಾಡಿ ಅಲ್ಲಿಂದ 2ನೇ ಹಂತದ ಪಂಪ್‌ ಮೂಲಕ ಮಲ್ಲೇಶ್ವರದ ಜಲಾಗರಕ್ಕೆ ಪೂರೈಸಲಾಗುತ್ತಿತ್ತು. 

1970ರ ವೇಳೆಗೆ ಪ್ರತಿದಿನ 13.5 ಕೋಟಿ ಲೀಟರ್‌ ನೀರನ್ನು ಪೂರೈಸಲಾಗುತ್ತಿತ್ತು. ಕ್ರಮೇಣ ಈ ಕೆರೆಯ ನೀರಿನ ಹರಿವು ಬತ್ತಿರುವುದು, ಕಾವೇರಿ ಯೋಜನೆಯ ಅನುಷ್ಠಾನ, ಜಲಾಶಯದ ನೀರಿನ ಗುಣಮಟ್ಟ ಕುಸಿತ... ಇತ್ಯಾದಿ ಕಾರಣದಿಂದ 2012ರಲ್ಲಿ ಇಲ್ಲಿಂದ ನಗರಕ್ಕೆ ನೀರು ಪೂರೈಸುವುದನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. 

ಪುನಶ್ಚೇತನಕ್ಕೆ ಎತ್ತಿನಹೊಳೆ ನೀರು: ಎತ್ತಿನಹೊಳೆ ಯೋಜನೆಯಿಂದ ಬರುವ 0.8 ಟಿಎಂಸಿ ಅಡಿ ನೀರನ್ನು ಈ ಜಲಾಶಯಕ್ಕೆ ಮತ್ತು 1.70 ಟಿಎಂಸಿ ಅಡಿ ನೀರನ್ನು ಹೆಸರಘಟ್ಟ ಜಲಾಶಯಕ್ಕೆ ಪೂರೈಸುವ ಉದ್ದೇಶವಿದೆ. ಅದಕ್ಕೂ ಮುನ್ನ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪೂರ್ಣ ಪ್ರಮಾಣದಲ್ಲಿ ಶುದ್ಧೀಕರಿಸಿ ಕೊಳಚೆ ನೀರು ಸೇರದಂತೆ ಮಾಡುವ ಕಾಮಗಾರಿ ಪುನಶ್ಚೇತನ ಯೋಜನೆ ಅಡಿ ನಡೆಯುತ್ತಿದೆ. 

ಮೆಗಾ ಎಂಜಿನಿಯರಿಂಗ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದೆ. ಟಾಟಾ ಕನ್ಸಲ್ಟೆಂಟ್‌ ಎಂಜಿನಿಯರ್ಸ್‌ ಸಂಸ್ಥೆ ಇದರ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದೆ. ಕಾಮಗಾರಿ ನಡೆಸಿದ ಕಂಪನಿ 10 ವರ್ಷ ಕಾಲ ಯೋಜನೆಯ ನಿರ್ವಹಣೆಯನ್ನೂ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಯೋಜನೆಯಿಂದ ಬೆಂಗಳೂರಿಗೆ ಪ್ರತಿದಿನ 11 ಕೋಟಿ ಲೀಟರ್‌ ನೀರು ಪೂರೈಕೆಯಾಗಲಿದೆ. 

ಶಂಕುಸ್ಥಾಪನೆ ನೆರವೇರಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ‘ಇಲ್ಲಿ ಎರಡು ವರ್ಷಗಳ ಹಿಂದೆ ನೀರಿನ ಗುಣಮಟ್ಟ ಪರಿಶೀಲಿಸಿದ್ದೆ. ಅದು ಎಣ್ಣೆ ಜಿಡ್ಡಿನಂಥ ಅಂಶ ಹೊಂದಿದೆ. ಇಡೀ ನಗರಕ್ಕೆ ಪೂರೈಕೆಯಾಗುವ ನೀರಿನ ಮೂಲವನ್ನು ಶುದ್ಧೀಕರಿಸುವ ಯೋಚನೆ ಅಂದೇ ಬಂದಿತ್ತು. ಈ ಜಲಾಶಯದ ಗತವೈಭವವನ್ನು ಮರಳಿಸಬೇಕು. ನಗರಕ್ಕೆ ಬೇರೆ ಬೇರೆ ರೀತಿಯಲ್ಲಿ ನೀರು ಪೂರೈಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

ಸಂಸದ ಡಿ.ಕೆ. ಸುರೇಶ್‌, ‘ಜಲಾಶಯಕ್ಕೆ ತ್ಯಾಜ್ಯ ನೀರು ಸೇರದಂತೆ ತಡೆಯಬೇಕು. ಈ ಕಾಮಗಾರಿಗೆ ₹ 30 ಕೋಟಿಯಿಂದ ₹ 40 ಕೋಟಿ ಸಾಕು. ಕೆರೆಗೆ ನೀರು ಸೇರುವ ಕಡೆಗಳಲ್ಲೆಲ್ಲಾ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಅಳವಡಿಸಬೇಕು. ಇಲ್ಲವಾದರೆ ಜಲಾಶಯವನ್ನು ಪುನಶ್ಚೇತನಗೊಳಿಸಿಯೂ ಪ್ರಯೋಜನವಿಲ್ಲ’ ಎಂದರು. 

‘ಸುಮನಹಳ್ಳಿ ಜಂಕ್ಷನ್‌ನಿಂದ ನೈಸ್‌ ಜಂಕ್ಷನ್‌ವರೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸಬೇಕು. ಇದಕ್ಕೆ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರೂ ಅನುದಾನ ಒದಗಿಸಬಹುದು. ಈ ಮಾರ್ಗ ನಿರ್ಮಾಣವಾದಲ್ಲಿ ಹಾಸನಕ್ಕೆ ಇನ್ನಷ್ಟು ಬೇಗ ಹೋಗಬಹುದು’ ಎಂದು ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ. ರೇವಣ್ಣ ಅವರನ್ನು ಸೂಕ್ಷ್ಮವಾಗಿ ಕುಟುಕಿದರು.

 

ಮೊದಲ ಹಂತದ ಪುನಶ್ಚೇತನ ಕಾಮಗಾರಿಯ ನೋಟ ಹೀಗಿದೆ-

3.34 ಟಿಎಂಸಿ
ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ

0.8 ಟಿಎಂಸಿ
ಎತ್ತಿನಹೊಳೆಯಿಂದ ಬೆಂಗಳೂರಿನ ಬಳಕೆಗಾಗಿ ಜಲಾಶಯಕ್ಕೆ ಹರಿಯುವ ನೀರು

₹ 406 ಕೋಟಿ
ಪುನಶ್ಚೇತನಕ್ಕಾಗಿ ಅಂದಾಜಿಸಲಾದ ಮೊತ್ತ

ರೂ 285.95 ಕೋಟಿ
ಆಡಳಿತಾತ್ಮಕ ಅನುಮೋದನೆ ಪ್ರಕಾರ ಮೊದಲಹಂತದ ಕಾಮಗಾರಿ ವೆಚ್ಚ 

 

₹ 260.34 ಕೋಟಿ 

ಟೆಂಡರ್‌ ಕರೆದ ಮೊತ್ತ

₹ 143 ಕೋಟಿ
ಕೆಯುಐಡಿಎಫ್‌ಸಿ ಸಾಲ

₹ 71.5 ಕೋಟಿ 
ರಾಜ್ಯ ಸರ್ಕಾರದ ಅನುದಾನ

₹ 71.5 ಕೋಟಿ
ಜಲಮಂಡಳಿ ಭರಿಸುವ ವೆಚ್ಚ

ಏನೇನು ನಿರ್ಮಾಣವಾಗಲಿದೆ?

* 20 ಎಂಎಲ್ ಡಿ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ

* 11 ಕೋಟಿ ಲೀಟರ್‌ (ದಿನವೊಂದಕ್ಕೆ) ಸಾಮರ್ಥ್ಯದ ಉನ್ನತ ತಂತ್ರಜ್ಞಾನದ ನೀರು ಶುದ್ಧೀಕರಣ ಘಟಕ ಸ್ಥಾಪನೆ

* ತಿಪ್ಪಗೊಂಡನಹಳ್ಳಿ, ತಾವರೆಕೆರೆ ಪಂಪ್ ಹೌಸ್ ಪುನಶ್ಚೇತನ
* ಬೆಂಗಳೂರಿನವರೆಗೆ 22 ಕಿಲೋಮೀಟರ್ ಉದ್ದದ ಉಕ್ಕಿನ ಪೈಪ್ ಲೈನ್
* ಜಲಾಶಯದ ಹೂಳನ್ನು ಬಯೋ ರೆಮಿಡಿಯೇಷನ್ ವಿಧಾನದ ಮೂಲಕ ತೆಗೆಯುವುದು

30 ತಿಂಗಳು
ಕಾಮಗಾರಿ ಪೂರ್ಣಗೊಳ್ಳುವ ಅವಧಿ

10 ವರ್ಷ
ಕಾಮಗಾರಿ ನಡೆಸಿದ ಕಂಪನಿಯು ನಿರ್ವಹಣೆ ನಡೆಸಬೇಕು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !