ಸೋಮವಾರ, ಅಕ್ಟೋಬರ್ 21, 2019
23 °C

'ತಂಬಾಕುಮುಕ್ತ ತಾಲ್ಲೂಕಿನೆಡೆಗೆ ಒಂದು ಹೆಜ್ಜೆ' ಜಾಗೃತಿ ಜಾಥಾ

Published:
Updated:

ಯಲಹಂಕ: ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ‘ತಂಬಾಕುಮುಕ್ತ ತಾಲ್ಲೂಕಿನೆಡೆಗೆ ಒಂದು ಹೆಜ್ಜೆ’ ಜಾಗೃತಿ ಜಾಥಾ ಮತ್ತು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

ತಹಶೀಲ್ದಾರ್ ಕಛೇರಿಯಿಂದ ಆರಂಭವಾದ ಜಾಗೃತಿ ಜಾಥಾ, ಪೊಲೀಸ್ ಠಾಣೆ ವೃತ್ತದ ಮೂಲಕ ಸಂತೆವೃತ್ತದವರೆಗೆ ಸಾಗಿತು. ನಂತರ ಅಧಿಕಾರಿಗಳು ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದರು. ಮುಂದಿನ ದಿನಗಳಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

‘ಕೆಲವು ಅಂಗಡಿಗಳ ಮೇಲೆ ಕಾರ್ಯಾಚರಣೆ ನಡೆಸಿ, ₹70 ಸಾವಿರ ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟ ಅಂಗಡಿ ಮಾಲೀಕರಿಗೆ ₹65 ಸಾವಿರ ದಂಡ ವಿಧಿಸಲಾಗಿದೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ’ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ತಾಲ್ಲೂಕಿನಲ್ಲಿ ತಂಬಾಕು ಉತ್ಪನ್ನಗಳನ್ನು ನಿಷೇಧಗೊಳಿಸಿರುವುದರಿಂದ ಅಂಗಡಿ ಮಾಲೀಕರು ಮಾರಾಟ ಮಾಡಬಾರದು. ಅಂತಹ ಪ್ರಕರಣಗಳು ಕಂಡುಬಂದರೆ ಮಾಲೀಕರ ಮೇಲೆ ಕ್ರಿಮಿನಲ್ ದೂರು ದಾಖಲಿಸಲಾಗುವುದು. ಈ ಭಾಗದಲ್ಲಿ ಸಾಕಷ್ಟು ಕಾಲೇಜುಗಳಿದ್ದು, ಮುಂದಿನ ಹಂತದಲ್ಲಿ ಎಲ್ಲ ಕಾಲೇಜುಗಳ ಸುತ್ತಮುತ್ತಲಿನ ಅಂಗಡಿಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಇದಕ್ಕೂ ಮುನ್ನ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ‘ವಿದ್ಯಾರ್ಥಿಗಳು ಮತ್ತು ಸಮಾಜಕ್ಕೆ ಮಾರಕವಾಗಿರುವ ತಂಬಾಕು ಉತ್ಪನ್ನಗಳನ್ನು ಹಾಗೂ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಬಳಕೆಮಾಡುವ ಅಂಗಡಿ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

Post Comments (+)