ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾ.ಪಂ.ಅಧ್ಯಕ್ಷರು ವಾಸ ದೃಢೀಕರಣ ಪತ್ರ ಕೊಡಂಗಿಲ್ಲ’

ಮೈಸೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆ; ದಸರಾಗೆ ಸಿದ್ಧರಾಗಿ; ಉದ್ಯಾನ ನಿರ್ಮಿಸಿ
Last Updated 16 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಾಸ ದೃಢೀಕರಣ ಪತ್ರ ಕೊಡುತ್ತಿದ್ದಾರೆ. ಇದು ಕಾನೂನು ಬದ್ಧವಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಇಒ ಕೃಷ್ಣಕುಮಾರ್ ತಿಳಿಸಿದರು.

‘ಸಕಾಲ ಮೂಲಕವೇ ವಾಸ ದೃಢೀಕರಣ ಪತ್ರ ಪಡೆಯಬೇಕು. ನಿಯಮಾವಳಿ ಮೀರಿ ಪತ್ರ ವಿತರಿಸುತ್ತಿರುವ ಅಧ್ಯಕ್ಷರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು. ಇದನ್ನು ಮೀರಿದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ಹೇಳಿದರು.

‘ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಗ್ರಾಮ ಪಂಚಾಯಿತಿ ಆಡಳಿತ ಯಾವ ದಾಖಲೆ ಕೊಡಬಾರದು. ಕಂದಾಯ ಅಧಿಕಾರಿಗಳು ದೃಢೀಕರಿಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಸಬೇಕು’ ಎಂದು ಆದೇಶಿಸಿದರು.

ಉದ್ಯಾನ ನಿರ್ಮಿಸಿ: ‘ದಸರಾಗೆ ದಿನಗಣನೆ ಆರಂಭವಾಗಿದೆ. ಎಲ್ಲ ಸರ್ಕಾರಿ ಕಚೇರಿಗಳನ್ನು ಶೃಂಗರಿಸಿಕೊಂಡು, ನಿಮ್ಮ ಮನೆಯಲ್ಲಿನ ವಾತಾವರಣ ನಿರ್ಮಿಸಿಕೊಳ್ಳಿ’ ಎಂದು ಆಯಾ ಇಲಾಖೆಯ ಅಧಿಕಾರಿಗಳಿಗೆ ಇಒ ಸೂಚಿಸಿದರು.

‘ಮೈಸೂರು ತಾಲ್ಲೂಕಿನ 37 ಗ್ರಾಮ ಪಂಚಾಯಿತಿಗಳ ಪೈಕಿ 25ರಲ್ಲಿ ಸದಸ್ಯರು ಕೂರುವ ಸ್ಥಳವೂ ಯೋಗ್ಯವಾಗಿಲ್ಲ. ಹಳೆಯ ಕಟ್ಟಡಗಳಲ್ಲಿ ಗ್ರಾ.ಪಂ. ಆಡಳಿತ ನಡೆದಿದೆ. ಇವಕ್ಕೆ ಕಾಯಕಲ್ಪ ಕಲ್ಪಿಸಿ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಉದ್ಯಾನ ನಿರ್ಮಿಸಿ. ತಾಲ್ಲೂಕಿನ ವ್ಯಾಪ್ತಿಯಲ್ಲಿ 300 ಹೊಸ ಬಡಾವಣೆ ನಿರ್ಮಾಣಗೊಳ್ಳುತ್ತಿದ್ದು, 2020ರ ಮಾರ್ಚ್‌ ಅಂತ್ಯದೊಳಗೆ ಕನಿಷ್ಠ 150 ಬಡಾವಣೆಗಳಲ್ಲಿ ಉದ್ಯಾನ ನಿರ್ಮಿಸುವ ಜತೆ, ಸಸಿ ಬೆಳೆಸಬೇಕು’ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೃಷ್ಣಕುಮಾರ್ ಆದೇಶಿಸಿದರು.

ಅಧಿಕಾರಿಗಳ ಗೈರು: ಗರಂ

ಕೆಡಿಪಿ ಸಭೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಗೈರಾಗಿದ್ದಕ್ಕೆ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್‌.ಬಿ.ಮಂಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಶಂಕರ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಕೆಡಿಪಿ ಸಭೆಗೆ ಬಂದು ಸೂಕ್ತ ಮಾಹಿತಿ ನೀಡದಿದ್ದರೆ, ನಮ್ಮ ಸದಸ್ಯರಿಗೆ ಏನೆಂದು ಉತ್ತರಿಸಬೇಕು ಎಂದು ಉಪಾಧ್ಯಕ್ಷ ಮಂಜು ಅಧಿಕಾರಿ ವರ್ಗದ ವಿರುದ್ಧ ಗರಂ ಆದರು.

ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿ ಸಭೆಯಿಂದ ಹೋಗಲು ಅನುಮತಿ ಕೇಳಿದ್ದಕ್ಕೆ ಗರಂ ಆದ ಕಾಳಮ್ಮ, ನಿಮ್ಮ ಅವಧಿ ಬಂದಾಗ ಸೂಕ್ತ ಮಾಹಿತಿ ಕೊಟ್ಟು ಹೊರಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್‌ ಸಭೆಗೆ ಮಾಹಿತಿ ನೀಡುತ್ತಿದ್ದಾಗ ಉಪಾಧ್ಯಕ್ಷ ಮಂಜು, ರೈತರಿಗೆ ಮಾಹಿತಿಯೇ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ದಿನೇಶ್‌ ಉತ್ತರಿಸಿದರೂ ಸಮಾಧಾನಗೊಳ್ಳಲಿಲ್ಲ. ಕಾರ್ಯಕ್ರಮಕ್ಕೂ ಒಂದು ವಾರ ಮುಂಚೆ ನಮಗೆ ತಿಳಿಸಿ. ರೈತರನ್ನು ಹೇಗೆ ಸೇರಿಸುತ್ತೇವೆ ನೋಡಿ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT