ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ಮೇಲೆ ಕೊಂಬೆ ಬಿದ್ದು ಬಾಲಕ ದುರ್ಮರಣ

ಬೆಂಗಳೂರು ನೋಡುವ ಆಸೆಯಲ್ಲಿ ಆಂಧ್ರದಿಂದ ಬಂದಿದ್ದ
Last Updated 26 ಮೇ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೂಲಿ ಮಾಡುತ್ತಿದ್ದ ಆಂಧ್ರಪ್ರದೇಶದ ದಂಪತಿ, ಬೆಂಗಳೂರು ತೋರಿಸಲೆಂದು 12 ವರ್ಷದ ಮಗನನ್ನು ಮೇ 23ರಂದು ರಾಜಧಾನಿಗೆ ಕರೆದುಕೊಂಡು ಬಂದಿದ್ದರು. ಆದರೆ, ಮರುದಿನ ಮಧ್ಯಾಹ್ನವೇ ಕೆಲಸದ ಸ್ಥಳದಲ್ಲಿ ತಲೆ ಮೇಲೆ ಮರದ ಕೊಂಬೆ ಬಿದ್ದು ದಂಪತಿಯ ಮಗ ಜೀವ ಕಳೆದುಕೊಂಡಿದ್ದಾನೆ!

ಎಂ.ಜಿ.ರಸ್ತೆಯ ‘ಫಾಲ್ಕನ್ ಟವರ್’ ಕಟ್ಟಡದ ಆವರಣದಲ್ಲಿ ಶುಕ್ರವಾರ ಈ ದುರಂತ ಸಂಭವಿಸಿದೆ. ಅನಂತಪುರ ಜಿಲ್ಲೆ ತೀಟಕಲ್ಲು ಗ್ರಾಮದ ರಾಜೇಶ್ ಹಾಗೂ ಮಹಾಲಕ್ಷ್ಮಿ ದಂಪತಿಯ ಮಗ ಮನೋಜ್ ಮೃತಪಟ್ಟವನು. ಗ್ರಾಮದ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಆತ, ಬೇಸಿಗೆ ರಜೆ ಇದ್ದುದರಿಂದ ಪೋಷಕರ ಜತೆ ಬಂದಿದ್ದ.

ಕೂಲಿ ಅರಸಿ 15 ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ದಂಪತಿ, ವಿಜಯನಗರ ಸಮೀಪದ ಪಟ್ಟೇಗಾರಪಾಳ್ಯದಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವಾಸವಿದ್ದರು. ‘ಫಾಲ್ಕನ್ ಟವರ್ ಕಂಪನಿ ಆವರಣದಲ್ಲಿ ಕೇಬಲ್ ಅಳವಡಿಕೆ ಕೆಲಸ ನಡೆಯುತ್ತಿತ್ತು. ಅದಕ್ಕಾಗಿ ನಾನು, ಪತ್ನಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾರ್ಮಿಕರು ಗುಂಡಿ ಅಗೆಯುತ್ತಿದ್ದೆವು. ಶುಕ್ರವಾರ ನಮ್ಮೊಟ್ಟಿಗೆ ಮಗನೂ ಬಂದಿದ್ದ. ಆತನನ್ನು ಮರದ ಕೆಳಗೆ ಆಟವಾಡಲು ಬಿಟ್ಟು, ನಾವು ಕೆಲಸದಲ್ಲಿ ತೊಡಗಿದ್ದೆವು’ ಎಂದು ರಾಜೇಶ್ ಘಟನೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದರು.

‘ಮಧ್ಯಾಹ್ನ 2.30ರ ಸುಮಾರಿಗೆ ಮರದ ಕೊಂಬೆ ಏಕಾಏಕಿ ಮುರಿದು ಬಿತ್ತು. ಮಗನೂ ಜೋರಾಗಿ ಚೀರಿಕೊಂಡ. ಗಾಬರಿಯಿಂದ ಸ್ಥಳಕ್ಕೆ ಓಡಿದರೆ ತಲೆಯಿಂದ ರಕ್ತ ಸೋರುತ್ತಿತ್ತು. ಎಡಗಾಲು ಅಪ್ಪಚ್ಚಿಯಾಗಿತ್ತು. ಪ್ರಜ್ಞೆ ಕಳೆದುಕೊಂಡಿದ್ದ ಮಗನನ್ನು ತಕ್ಷಣ ಹಾಸ್‌ಮ್ಯಾಟ್ ಆಸ್ಪತ್ರೆಗೆ ಕರೆದೊಯ್ದೆವು. 4.30ರ ಸುಮಾರಿಗೆ ಆತ ಕೊನೆಯುಸಿರೆಳೆದ’ ಎಂದು ಹೇಳಿದರು.

‘ಮಗ ಕರೆ ಮಾಡಿದಾಗಲೆಲ್ಲ ಲಾಲ್‌ಬಾಗ್, ಕಬ್ಬನ್‌ಪಾರ್ಕ್‌, ವಿಧಾನಸೌಧ ನೋಡಬೇಕು ಎನ್ನುತ್ತಿದ್ದ. ಮೆಟ್ರೊ ರೈಲಿನಲ್ಲೂ ಓಡಾಡಬೇಕು ಎನ್ನುತ್ತಿದ್ದ. ಅವುಗಳನ್ನು ತೋರಿಸಲೆಂದೇ ಇಲ್ಲಿಗೆ ಕರೆದುಕೊಂಡು ಬಂದಿದ್ದೆವು. ಆದರೆ, ಆತನ ಸಣ್ಣ ಆಸೆಗಳನ್ನು ಈಡೇರಿಸಲು ನಮ್ಮಿಂದ ಸಾಧ್ಯವಾಗಲಿಲ್ಲ’ ಎನ್ನುತ್ತ ರಾಜೇಶ್ ದುಃಖತಪ್ತರಾದರು.

ನನ್ನನ್ನು ಉಳಿಸಿ ತಾನು ಸತ್ತ: ‘ಕೊಂಬೆ ಮುರಿದು ಬೀಳುವ ಐದು ನಿಮಿಷಗಳ ಹಿಂದಷ್ಟೇ ಮಗನ ಹತ್ತಿರ ಹೋಗಿದ್ದೆ. ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿಗೆ ಕುಳಿತಿದ್ದ ನನ್ನನ್ನು, ‘ಅಮ್ಮ ಸಂಜೆ ಬೇಗ ಮನೆಗೆ ಹೋಗೋಣ. ಹೋಗಿ ಕೆಲಸ ಮುಗಿಸಿಬಿಡಿ’ ಎಂದಿದ್ದ. ಆತನ ಮಾತಿನಂತೆ ಕೆಲಸದ ಸ್ಥಳಕ್ಕೆ ಹೋದೆ. ಎರಡೇ ನಿಮಿಷಗಳಲ್ಲಿ ಕೊಂಬೆ ಮುರಿದು ಬಿತ್ತು. ಮಗ ನನ್ನನ್ನು ಉಳಿಸಿ, ಆತ ಪ್ರಾಣ ಬಿಟ್ಟ’ ಎಂದು ಮಹಾಲಕ್ಷ್ಮಿ ಕಣ್ಣೀರಿಟ್ಟರು.

‘ಎಂಜಿನಿಯರ್‌ಗಳ ನಿರ್ಲಕ್ಷ್ಯಕ್ಕೆ ಮಗ ಬಲಿ’

‘ಕಟ್ಟಡದ ಆವರಣದಲ್ಲಿ ಹಳೆ ಮರಗಳು ಹೆಚ್ಚಿದ್ದವು. ಹೀಗಾಗಿ, ಒಣಗಿರುವ ಕೊಂಬೆಗಳನ್ನು ತೆರವುಗೊಳಿಸುವಂತೆ ಸೈಟ್ ಎಂಜಿನಿಯರ್‌ಗಳಿಗೆ ಮನವಿ ಮಾಡಿದ್ದೆವು. ಆದರೆ, ಅವರು ಕಾರ್ಮಿಕರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವರ ನಿರ್ಲಕ್ಷ್ಯ ನನ್ನ ಮಗನನ್ನೇ ಬಲಿ ಪಡೆದಿದೆ. ಹೀಗಾಗಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ರಾಜೇಶ್ ಹಲಸೂರು ಠಾಣೆಗೆ ದೂರು ಕೊಟ್ಟಿದ್ದಾರೆ.

‘ದೂರಿನ ಅನ್ವಯ ಗುತ್ತಿಗೆದಾರ ಕರುಣಾಕರ್, ಮೇಸ್ತ್ರಿ ಕುಮಾರ್, ಸೈಟ್ ಎಂಜಿನಿಯರ್‌ಗಳಾದ ಶಮೀಮ್, ಪ್ರಫುಲ್ಲಾ ಕುಮಾರ್ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ನಿರ್ಲಕ್ಷದಿಂದ ಸಾವು (ಐಪಿಸಿ 304ಎ) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಸೋಮವಾರ ಅವರು ವಿಚಾರಣೆಗೆ ಬರಲಿದ್ದಾರೆ’ ಎಂದು ಹಲಸೂರು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT