ಸಸಿ ನೆಡುವ ನಿಯಮ ಸಡಿಲಿಕೆ ಹುನ್ನಾರ

ಬುಧವಾರ, ಏಪ್ರಿಲ್ 24, 2019
27 °C
ಕಟ್ಟಡ ಯೋಜನೆಗೆ ಮಂಜೂರಾತಿ ಪಡೆಯುವಾಗ ಗಿಡ ಬೆಳೆಸುವುದಿನ್ನು ಕಡ್ಡಾಯವಲ್ಲ

ಸಸಿ ನೆಡುವ ನಿಯಮ ಸಡಿಲಿಕೆ ಹುನ್ನಾರ

Published:
Updated:

ಬೆಂಗಳೂರು: ನಗರದ ವ್ಯಾಪ್ತಿಯಲ್ಲಿರುವ ನಿವೇಶನಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ನಿಯಮ ಸಡಿಲಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ. ಈಗಿನ ನಿಯಮಗಳ ಪ್ರಕಾರ ಕಟ್ಟಡದ ಯೋಜನೆಗೆ ಮಂಜೂರಾತಿ ನೀಡು ವಾಗಲೇ ಗಿಡ ಬೆಳೆಸಿರಬೇಕು ಎಂಬ ಷರತ್ತು ಇದೆ. ಅದನ್ನು ಸ್ವಾಧೀನಾನುಭವ ಪತ್ರ ಪಡೆಯುವಾಗ ಗಿಡ ಬೆಳೆಸಿದರೆ ಸಾಕು ಎಂದು ತಿದ್ದುಪಡಿ ಮಾಡುವ ಪ್ರಯತ್ನ ನಡೆದಿದೆ.

2031ರ ಪರಿಷ್ಕೃತ ಮಹಾ ಯೋಜನೆಯಲ್ಲಿ (ಆರ್‌ಎಂಪಿ) ನಿವೇಶನಗಳಲ್ಲಿ ಗಿಡಗಳನ್ನು ಬೆಳೆಸುವ ನಿಯಮಗಳಿಗೆ ತಿದ್ದುಪಡಿ ತರಲು ಬಿಡಿಎ ಉದ್ದೇಶಿಸಿತ್ತು. ಆದರೆ, 2031ರ ಆರ್‌ಎಂಪಿ ಜಾರಿ ವಿಳಂಬ ಆಗುತ್ತಿರುವುದರಿಂದ 2015ರ ಪರಿಷ್ಕೃತ ಮಹಾಯೋಜನೆಯ ವಲಯ ನಿಬಂಧನಗಳಿಗೆ ತಿದ್ದುಪಡಿ ತಂದು ಗಿಡ ಗಳನ್ನು ನೆಟ್ಟು ಬೆಳೆಸುವ ನಿಯಮ ಮಾರ್ಪಾಡು ಮಾಡಲಾಗುತ್ತಿದೆ.

2015ರ ಆರ್‌ಎಂಪಿಯ ವಲಯ ನಿಬಂಧನೆಗಳಿಗೆ ತಿದ್ದುಪಡಿ ಮಾಡಲು ನಗರಾಭಿವೃದ್ಧಿ ಇಲಾಖೆಯು ಇದೇ ಮಾರ್ಚ್‌ 7ರಂದು ರಾಜ್ಯಪತ್ರದಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದೆ. ಅದರಲ್ಲಿ ಗಿಡ ನೆಡುವ ನಿಯಮಗಳನ್ನು ಬದಲಾಯಿಸುವ ಅಂಶಗಳೂ ಇವೆ.

2015ರ ನಗರ ಮಹಾ ಯೋಜನೆ ಪ್ರಕಾರ  2,400 ಚ. ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನ ದಲ್ಲಿ ಕನಿಷ್ಠ ಒಂದು ಮರವನ್ನು ಹಾಗೂ 4 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ನಿವೇಶನ ದಲ್ಲಿ ಕನಿಷ್ಠ ಎರಡು ಮರ ಹೊಂದುವುದು ಕಡ್ಡಾಯ. ಕಟ್ಟಡ ಯೋಜನೆಗೆ ಮಂಜೂರಾತಿ ನೀಡುವಾಗ ಪ್ರಾಧಿಕಾರವು ನಿವೇಶನ ದಲ್ಲಿ ಸಸಿ ಬೆಳೆಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಸಸಿ ಬೆಳೆಸಿರುವುದು ಖಾತರಿಯಾದ ಬಳಿಕವಷ್ಟೇ ಆ ಕಟ್ಟಡಕ್ಕೆ ತೆರಿಗೆಯ ಪ್ರಮಾಣ ನಿರ್ಧರಿಸಬೇಕು. ನಿವೇಶನದಲ್ಲಿರುವ ಕಟ್ಟಡ ಹಿಂಭಾಗದ ಸೆಟ್‌ ಬ್ಯಾಕ್‌ ಪ್ರದೇಶದಲ್ಲಿ ಮಾತ್ರ ಸಸಿಗಳನ್ನು ಬೆಳೆಸಬೇಕು ಎಂಬ ಅಂಶವೂ ಇದೆ. 

ತಿದ್ದುಪಡಿ ಕರಡಿನ ಪ್ರಕಾರ 180 ಚದರ ಮೀಟರ್‌ನಿಂದ (1,937.5 ಚ.ಅಡಿ) 240 ಚದರ ಮೀಟರ್‌ (2,583 ಚ.ಅಡಿ) ವಿಸ್ತೀರ್ಣದವರೆಗಿನ ನಿವೇಶನದಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ಬೆಳೆಸಬೇಕು. 240 ಚ.ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ಕನಿಷ್ಠ 2 ಸಸಿಗಳನ್ನಾದರೂ ನೆಟ್ಟು ಬೆಳೆಸಬೇಕು. ಇಲ್ಲಿನ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡುವ ಮುನ್ನ ಈ ಸಸಿಗಳನ್ನು ನೆಟ್ಟಿರುವುದನ್ನು ಸಂಬಂಧಪಟ್ಟ ಪ್ರಾಧಿಕಾರವು ಖಾತರಿಪಡಿಸಿಕೊಳ್ಳಬೇಕು. 

ಅಪಾರ್ಟ್‌ಮೆಂಟ್‌ ಸಮುಚ್ಚಯ, ಗುಂಪು ವಸತಿ ಅಥವಾ ಬಹು ವಸತಿ ಘಟಕಗಳಲ್ಲಿ ಪ್ರತಿ 240 ಚ.ಮೀ ಎಫ್‌ಎಆರ್‌ಗೆ ಒಂದರಂತೆ ಸಸಿ ನೆಟ್ಟು ಬೆಳೆಸಬೇಕು. ಸ್ವಾಧೀನಾನುಭವ ಪ್ರಮಾಣ ಪತ್ರ ನೀಡುವುದಕ್ಕೆ ಮುನ್ನ ಈ ಗಿಡಗಳು ಕನಿಷ್ಠ 2 ಮೀ ಎತ್ತರಕ್ಕೆ ಬೆಳೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಸೆಟ್‌ಬ್ಯಾಕ್‌ ಜಾಗ, ವಾಹನ ನಿಲುಗಡೆ ತಾಣ ಅಥವಾ ರಸ್ತೆಯಂಚಿನಲ್ಲಿ ವಾಹನ ಸಾಗಲು ದಾರಿ ಬಿಟ್ಟು ಗಿಡಗಳನ್ನು ಬೆಳೆಸಬೇಕು ಎಂಬ ಅಂಶವನ್ನು ಹೊಸತಾಗಿ ಸೇರ್ಪಡೆಗೊಳಿಸಲಾಗಿದೆ.

ಡೆವಲಪರ್‌ಗಳು ಬಡಾವಣೆ ನಿರ್ಮಿಸುವಾಗ ಪ್ರತಿ ಹೆಕ್ಟೇರ್‌ಗೆ 40 ಸಸಿ ನೆಟ್ಟು ಬೆಳೆಸುವುದು ಕಡ್ಡಾಯ. 

ರಾಜ್ಯಪತ್ರದಲ್ಲಿ ಪ್ರಕಟಿಸಿರುವ ತಿದ್ದುಪಡಿ ಕರಡುಗಳಿಗೆ ಆಕ್ಷೇಪ ಸಲ್ಲಿಸಲು 30 ದಿನ ಅವಕಾಶ ನೀಡಲಾಗಿದೆ.

ವಿಳಾಸ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ವಿಕಾಸ ಸೌಧ, ಬೆಂಗಳೂರು 560001

‘ಹೊಣೆಯಿಂದ ನುಣುಚಿಕೊಳ್ಳುವ ಯತ್ನ’

‘ಕಟ್ಟಡದ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವಾಗ ಗಿಡ ಬೆಳೆಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ತಿದ್ದುಪಡಿ ತರಲು ಹೊರಟಿರುವುದು ಅಧಿಕಾರಿಗಳು ಹೊಣೆಯಿಂದ ನುಣುಚಿಕೊಳ್ಳುವ ಹುನ್ನಾರ’ ಎನ್ನುತ್ತಾರೆ ಪರಿಸರ ಕಾರ್ಯಕರ್ತೆ ಮಹಾಲಕ್ಷ್ಮೀ ಪಾರ್ಥಸಾರಥಿ.

‘ಕಟ್ಟಡಕ್ಕೆ ಮಂಜೂರಾತಿ ನೀಡುವಾಗ ಅಧಿಕಾರಿಗಳು ಗಿಡ ಬೆಳೆಸಿರುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರೆ ನಗರದಲ್ಲಿ ಹಸಿರು ಇಷ್ಟೊಂದು ಪ್ರಮಾಣದಲ್ಲಿ ಕಣ್ಮರೆ ಆಗುತ್ತಿರಲಿಲ್ಲ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿನ ನಿವಾಸಿಗಳನ್ನು ಹೊರತುಪಡಿಸಿದರೆ, ಬಹುತೇಕ ಮನೆ ಮಾಲೀಕರು ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದೇ ಇಲ್ಲ. ಕಟ್ಟಡದ ಯೋಜನೆಗೆ ಮಂಜೂರಾತಿ ನೀಡಿದ ಬಳಿಕ ಅಧಿಕಾರಿಗಳಂತೂ ನಿವೇಶನಗಳತ್ತ ಕಡೆ ತಲೆ ಹಾಕುವುದಿಲ್ಲ. ಹಾಗಾಗಿ ನಿಯಮ ಮಾರ್ಪಾಡಿನಿಂದಾಗಿ ಗಿಡ ಬೆಳೆಸುವ ಆಶಯಗಳಿಗೆ ಮತ್ತಷ್ಟು ಹಿನ್ನಡೆ ಆಗಲಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ತೋಪುಗಳನ್ನು ಕಡಿದು ಮನೆ ನಿರ್ಮಿಸುತ್ತಿದ್ದಾರೆ’

‘ನಗರದ ಹೊರವಲಯಗಳಲ್ಲಂತೂ ಮಾವಿನ ತೋಪು, ತೆಂಗಿನ ತೋಪುಗಳನ್ನು ಕಡಿದು ಕಟ್ಟಡ ನಿರ್ಮಿಸುವ ಪರಿಪಾಠ ಅವ್ಯಾಹತವಾಗಿ ಹೆಚ್ಚುತ್ತಿದೆ. ಮೊದಲು ಇದಕ್ಕೆ ಕಡಿವಾಣ ಹಾಕುವಂತಹ ನಿಯಮ ರೂಪಿಸಬೇಕು’ ಎಂದು ವಿಜಯಲಕ್ಷ್ಮೀ ಪಾರ್ಥಸಾರಥಿ ಒತ್ತಾಯಿಸಿದರು.

‘ನಗರದಲ್ಲಿ ಮರಗಳ ಸಮೀಕ್ಷೆ ನಡೆಸಿ ಈ ಕುರಿತು ನಿಖರ ಮಾಹಿತಿಯನ್ನು ಬಿಬಿಎಂಪಿ ಮೊದಲು ಕಲೆ ಹಾಕಬೇಕು. ಒಂದು ವೇಳೆ ಕಟ್ಟಡ ನಿರ್ಮಿಸುವುದಕ್ಕೆ ಮರ ಕಡಿಯಬೇಕಾದ ಪ್ರಮೇಯ ಎದುರಾದರೆ ಅವುಗಳನ್ನು ಸ್ಥಳಾಂತರ ಮಾಡುವಂತೆ ಷರತ್ತು ವಿಧಿಸಬೇಕು’ ಎಂದು ಅವರು ಸಲಹೆ ನೀಡಿದರು.

ಈಗಿನ ನಿಯಮ ಪ್ರಕಾರ...

* 2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ ಕನಿಷ್ಠ ಒಂದು ಮರ ಅಗತ್ಯ

* 4 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ನಿವೇಶನದಲ್ಲಿ ಕನಿಷ್ಠ ಎರಡು ಮರ

ತಿದ್ದುಪಡಿ ಪ್ರಕಾರ...

* 180 ಚದರ ಮೀಟರ್‌ನಿಂದ (1,937.5 ಚ.ಅಡಿ) 240 ಚದರ ಮೀಟರ್‌ (2,583 ಚ.ಅಡಿ) ವಿಸ್ತೀರ್ಣದವರೆಗಿನ ನಿವೇಶನದಲ್ಲಿ ಕನಿಷ್ಠ ಒಂದು ಮರ ಅಗತ್ಯ

* 240 ಚ.ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ನಿವೇಶನಗಳಲ್ಲಿ ಕನಿಷ್ಠ 2 ಸಸಿ ಬೆಳೆಸಬೇಕು 

* ಡೆವೆಲಪರ್‌ಗಳು ಬಡಾವಣೆ ನಿರ್ಮಿಸುವಾಗ ಪ್ರತಿ ಹೆಕ್ಟೇರ್‌ಗೆ 40 ಸಸಿಗಳನ್ನು ನೆಟ್ಟು ಬೆಳೆಸುವುದನ್ನು ಕಡ್ಡಾಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !