ತುರಹಳ್ಳಿ ಅರಣ್ಯದ 7 ಎಕರೆ ಬೆಂಕಿಗೆ ಅಹುತಿ

ಭಾನುವಾರ, ಏಪ್ರಿಲ್ 21, 2019
26 °C

ತುರಹಳ್ಳಿ ಅರಣ್ಯದ 7 ಎಕರೆ ಬೆಂಕಿಗೆ ಅಹುತಿ

Published:
Updated:
Prajavani

ಬೆಂಗಳೂರು: ಕನಕಪುರ ರಸ್ತೆಯ ತುರಹಳ್ಳಿ ಅರಣ್ಯದಲ್ಲಿ ಬುಧವಾರ ರಾತ್ರಿ ಬೆಂಕಿ ಕಾಣಿಸಿಕೊಂಡು, ಸುಮಾರು ಏಳು ಎಕರೆಯಷ್ಟು ಜಾಗದಲ್ಲಿ ತರಗೆಲೆಗಳು ಹಾಗೂ ಸಸಿಗಳು ಸುಟ್ಟು ಹೋಗಿವೆ.

ರಾತ್ರಿ 7.30ರ ಸುಮಾರಿಗೆ ಅರಣ್ಯ ಪ್ರದೇಶದಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು, ಕೂಡಲೇ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದಾರೆ. ಒಂದು ವಾಹನದಲ್ಲಿ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

‘ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡುವ ಸಲುವಾಗಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಬೆಂಕಿಯ ತೀವ್ರತೆ ಹೆಚ್ಚಿರಲಿಲ್ಲ. ಹೀಗಾಗಿ, ದೊಡ್ಡ ಮರಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತುರಹಳ್ಳಿ ಅರಣ್ಯದಲ್ಲಿ ಅನೈತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಕುಡಿತ, ಗಾಂಜಾ, ಸಿಗರೇಟ್ ಸೇದಲೆಂದೇ ಕೆಲವರು ಇಲ್ಲಿಗೆ ಬರುತ್ತಾರೆ. ಕುಡಿದ ಮತ್ತಿನಲ್ಲಿ ಬೆಂಕಿ ಇಡುವ ಪ್ರಸಂಗಗಳೂ ನಡೆದಿವೆ. ಈ ಬಗ್ಗೆ ನಿಗಾ ವಹಿಸುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ. 

‘ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯದೊಳಗೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲಿ ಮುನೇಶ್ವರ ದೇವಸ್ಥಾನ ಇರುವುದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಂಡು ಯಾರೋ ದುಷ್ಕೃತ್ಯ ಎಸಗಿರಬಹುದು. ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ, ಅರಣ್ಯದಲ್ಲಿ ಹೊಗೆ ಕಾಣಿಸಿಕೊಂಡರೆ ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದೇವೆ’ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !