ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾದಲ್ಲಿ ‘ಇತಿಹಾಸ’ ಸೆರೆಹಿಡಿದ ಧೀಮಂತ

ರಾಜ್ಯದ ಮೊದಲ ಪತ್ರಿಕಾ ಛಾಯಾಗ್ರಾಹಕ ರಾಮಸ್ವಾಮಿ * ಹಸ್ತಾಕ್ಷರ ಹಾಕಿದ್ದರು ನೆಹರೂ
Last Updated 3 ಏಪ್ರಿಲ್ 2020, 21:17 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಆಚಾರ್ಯ ವಿನೋಬಾ ಭಾವೆ ಪರಸ್ಪರ ಕೈ ಮುಗಿದು ಅಭಿನಂದಿಸುವ ಚಿತ್ರವೊಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿತ್ತು.ಇದನ್ನು ಮೆಚ್ಚಿ ನೆಹರೂ ತಮ್ಮ ಹಸ್ತಾಕ್ಷರ ಬರೆದು ಕಳುಹಿಸಿ ಕೊಟ್ಟಿದ್ದರು. ಆ ಚಿತ್ರ ಸೆರೆ ಹಿಡಿದಿದ್ದವರು ಟಿ.ಎಲ್‌.ರಾಮಸ್ವಾಮಿ.

ರಾಜ್ಯದ ಮೊದಲ ಪತ್ರಿಕಾ ಛಾಯಾಗ್ರಾಹಕರಾಗಿದ್ದ ಟಿ.ಎಲ್. ರಾಮಸ್ವಾಮಿ, ಐವತ್ತರ ದಶಕದಲ್ಲಿ ‘ಮೈಸೂರು ನ್ಯೂಸ್‌ ಫೋಟೋಸ್‌’ ಸಂಸ್ಥೆ ಸ್ಥಾಪಿಸಿ,ಪತ್ರಿಕೆಗಳಿಗೆ ಛಾಯಾಚಿತ್ರಗಳನ್ನು ಪೂರೈಸುತ್ತಿದ್ದರು. ಪ್ರಮುಖವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳಿಗೂ ಸುದ್ದಿ ಚಿತ್ರಗಳನ್ನು ನೀಡುತ್ತಿದ್ದರು.

ವೃತ್ತಿಗೆ ಅಗತ್ಯವಾದ ಶಿಸ್ತನ್ನು ರೂಢಿಸಿಕೊಂಡವರು ರಾಮಸ್ವಾಮಿ. ಅವರು ತೆಗೆದ ಎಲ್ಲ ಚಿತ್ರಗಳ ದಿನಾಂಕ ಮತ್ತು ಸಂದರ್ಭ ಕುರಿತು ಒಂದು ಸಾಲಿನ ಮಾಹಿತಿ ಬರೆದಿಡುವ ಬದ್ಧತೆ ಹೊಂದಿದ್ದರು. ನಾಲ್ಕು ಲಕ್ಷಕ್ಕೂ ಹೆಚ್ಚು ನೆಗೆಟಿವ್‌ಗಳು ಅವರ ಬಳಿ ಇದ್ದವು. ‘ಪ್ರಜಾವಾಣಿ’ಯ ಚಿತ್ರ ಭಂಡಾರವನ್ನು ಶ್ರೀಮಂತಗೊಳಿಸಿದವರು ಅವರು. ಗಣ್ಯರು,ವಿಜ್ಞಾನಿಗಳು, ರಾಜತಾಂತ್ರಿಕರು,ರಾಜಕಾರಣಿಗಳಲ್ಲದೆ,ನಮ್ಮ ದೇಶ, ರಾಜ್ಯದ ಸಾಹಿತಿ,ಕಲಾವಿದರು,ಸಂಗೀತಗಾರರು ಸೇರಿದಂತೆ ಒಟ್ಟಾರೆ ಭಾರತದ ಮತ್ತು ಕರ್ನಾಟಕದ ಆರು ದಶಕಗಳ ಕಾಲದ ಪ್ರಮುಖ ಸಂಗತಿಗಳನ್ನು ಅವರು ತೆಗೆದ ಚಿತ್ರಗಳು ಅನಾವರಣಗೊಳಿಸುತ್ತವೆ.

ಮೊದಲ ಪ್ರಧಾನಮಂತ್ರಿಯಲ್ಲದೆ, ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿಯವರಿಂದ ಹಿಡಿದು ಹಲವು ಮುಖ್ಯಮಂತ್ರಿಗಳ ಪ್ರಮಾಣ
ವಚನ,ಕರ್ನಾಟಕ ಏಕೀಕರಣ,ಸಂಪುಟಗಳ ವಿಸ್ತರಣೆ, ಚುನಾವಣೆಗಳು,ರಾಜಕೀಯ ಮುಖಂಡರು,ಪ್ರಮುಖ ರಾಜಕೀಯ ವಿದ್ಯಮಾನಗಳು,ಭಿನ್ನಮತೀಯ ಚಟುವಟಿಕೆಗಳು,ಕರ್ನಾಟಕ ಕಂಡ ಚಳವಳಿಗಳು, ಕರ್ನಾಟಕ ಏಕೀಕರಣ, ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟ ಸಂದರ್ಭವಲ್ಲದೆ, ಸರ್‌.ಎಂ.ವಿಶ್ವೇಶ್ವರಯ್ಯ,ಸಿ.ವಿ.ರಾಮನ್‌ ಸೇರಿದಂತೆ ನೂರಾರು ಗಣ್ಯರ ಚಿತ್ರಗಳು ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

‘ರಾಮಸ್ವಾಮಿ ಅವರದು ಬಹಳ ಸರಳ ಸ್ವಭಾವ. ಯಾರೊಂದಿಗೂ ಸಿಟ್ಟಿನಲ್ಲಿ ಮಾತನಾಡಿದವರಲ್ಲ. ಎಲ್ಲರನ್ನೂ ನಗುತ್ತಲೇ ಮಾತನಾಡಿಸುತ್ತಿದ್ದರು. ಯಾವಾಗಲೂ ಸುದ್ದಿಚಿತ್ರಗಳಲ್ಲಿ ಹೊಸತನವನ್ನು ತೋರಿಸಲು ಪ್ರಯತ್ನಿಸುತ್ತಿದ್ದರು. ನೆಹರೂ ಹಾಗೂ ಆಚಾರ್ಯ ವಿನೋಬಾ ಭಾವೆ ಅವರ ಚಿತ್ರವಂತೂ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು’ ಎಂದು ಸ್ಮರಿಸುತ್ತಾರೆ ರಾಮಸ್ವಾಮಿಯವರ ಕೈಕೆಳಗೆ ಕೆಲಸ ಮಾಡಿರುವ ಹಿರಿಯ ಪತ್ರಿಕಾ ಛಾಯಾಗ್ರಾಹಕ ಟಿ. ಅಬ್ದುಲ್‌ ಹಫೀಜ್‌.

ಟಿ.ಎಲ್. ರಾಮಸ್ವಾಮಿ

ಛಾಯಾಗ್ರಾಹಕ ರಾಮಸ್ವಾಮಿ ನಿಧನ
ಬೆಂಗಳೂರು: ಹಿರಿಯ ಛಾಯಾಗ್ರಾಹಕ ಟಿ.ಎಲ್. ರಾಮಸ್ವಾಮಿ (89) ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಬನಶಂಕರಿಯಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದವರು ತಿಳಿಸಿದರು.

1950ರಿಂದ 1985ರವರೆಗೆ ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ಪ್ರಜಾವಾಣಿ’ ಪತ್ರಿಕೆಗೆ ಛಾಯಾಚಿತ್ರಗಳನ್ನು ಪೂರೈಸುತ್ತಿದ್ದರು.ಜಪಾನ್‌ನ ನಿಹಾನ್ ಸಿನ್‌ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್‌ನ ಥಾಮ್ಸನ್ ಪ್ರತಿಷ್ಠಾನದಿಂದ ಛಾಯಾಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದಿದ್ದರು. ಜಪಾನ್‌ನ ಹಲವು ಪತ್ರಿಕೆಗಳಿಗೂ ಅವರು ಕೆಲಸ ಮಾಡಿದ್ದರು.ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿತ್ತು. ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಆಜೀವ ಸದಸ್ಯರೂ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT