ಕ್ಯಾಬ್ ಚಾಲಕನಿಂದ ಮಹಿಳೆಗೆ ಕಿರುಕುಳ

7
ಉಬರ್ ಚಾಲಕನ ವಿರುದ್ಧ ಟ್ವಿಟರ್ ಮೂಲಕ ದೂರು

ಕ್ಯಾಬ್ ಚಾಲಕನಿಂದ ಮಹಿಳೆಗೆ ಕಿರುಕುಳ

Published:
Updated:

ಬೆಂಗಳೂರು: ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪ್ರಯಾಣಿಕರೊಬ್ಬರ ಜತೆ ಉಬರ್ ಚಾಲಕ ಅನುಚಿತವಾಗಿ ವರ್ತಿಸಿರುವ ಮತ್ತೊಂದು ಪ್ರಸಂಗ ನಗರದಲ್ಲಿ ಸೋಮವಾರ ನಡೆದಿದೆ.

‘ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾದ ನಾನು, ಬೆಳ್ಳಂದೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಉಬರ್ ಕ್ಯಾಬ್‌ನಲ್ಲಿ ಕಂಪನಿಗೆ ತೆರಳುತ್ತಿದ್ದೆ. ಈ ವೇಳೆ ಚಾಲಕ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಚಾರ ದಟ್ಟಣೆಯಿದ್ದ ಕಾರಣ ಚಾಲಕ ಮಾರ್ಗ ಬದಲಿಸಿದ್ದಾನೆ. ಅದನ್ನು ಮಹಿಳೆ ಪ್ರಶ್ನಿಸಿದಾಗ ನಿರ್ಜನ ಪ್ರದೇಶದಲ್ಲಿ ಕ್ಯಾಬ್ ನಿಲ್ಲಿಸಿರುವ ಚಾಲಕ, ‘ಈ ಕ್ಷಣವೇ ಟ್ರಿಪ್ ರದ್ದುಪಡಿಸುತ್ತೇದ್ದೇನೆ. ಏನು ಬೇಕಾದರೂ ಮಾಡಿಕೋ’ ಎಂದಿದ್ದಾನೆ. ಆಗ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತ ಹೊರಟು ಹೋಗಿದ್ದಾನೆ. ಎಂದು ತಿಳಿದು ಬಂದಿದೆ.

‘ಪ್ರಯಾಣಿಕರ ಜತೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಉಬರ್ ಸಂಸ್ಥೆಯವರು ತಮ್ಮ ಚಾಲಕರಿಗೆ ತರಬೇತಿ ನೀಡುವುದು ಒಳ್ಳೆಯದು. ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥನಿಗೆ ತಕ್ಕ ಶಾಸ್ತಿ ಮಾಡಬೇಕು. ಮಹಿಳೆಯರ ರಕ್ಷಣೆಗೆ ಸಂಸ್ಥೆ ಇನ್ನಾದರೂ ಒತ್ತು ಕೊಡಬೇಕು’ ಎಂದು ಸಂತ್ರಸ್ತೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

ಪ್ರತಿ ಸಲವೂ ಅದೇ ಭರವಸೆ

‘ಪ್ರತಿ ಬಾರಿ ಪ್ರಯಾಣಿಕರ ಮೇಲೆ ದೌರ್ಜನ್ಯ ನಡೆದಾಗಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಕ್ಯಾಬ್ ಸಂಸ್ಥೆಯವರು ಹಾಗೂ ಪೊಲೀಸರು ಹೇಳುತ್ತಲೇ ಬಂದಿದ್ದಾರೆ. ಆದರೆ, ದೌರ್ಜನ್ಯ ನಡೆಯುವುದು ಮಾತ್ರ ನಿಂತಿಲ್ಲ. ಅಂದಿನ ಘಟನೆಯಿಂದ ಆಘಾತವಾಗಿದೆ. ಆ ಕ್ಯಾಬ್ ಚಾಲಕನಿಂದ ತುಂಬ ತೊಂದರೆ ಅನುಭವಿಸಿದ್ದೇನೆ’ ಎಂದು ಸಂತ್ರಸ್ತೆ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !