ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

80 ಮೀಟರ್ ದಾರಿಗೆ 4 ಕಿ.ಮೀ ಸುತ್ತಬೇಕು

ಮಳೆ ಬಂದಾಗ ಈಜುಕೊಳದಂತಾಗುತ್ತದೆ ಕೊಡಿಗೆಹಳ್ಳಿ ನೂತನ ರೈಲ್ವೆ ಕೆಳಸೇತುವೆ
ಅಕ್ಷರ ಗಾತ್ರ

ಬೆಂಗಳೂರು: ಸ್ವಲ್ಪ ಜೋರಾಗಿ ಮಳೆ ಸುರಿದರೂ ಸಾಕು, ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೆಹಳ್ಳಿಯಲ್ಲಿ ನಿರ್ಮಿಸಿರುವ ನೂತನ ರೈಲ್ವೆ ಕೆಳಸೇತುವೆ ಈಜುಕೊಳದಂತಾಗಿ ಬಿಡುತ್ತದೆ.

ವಾಹನ ಸವಾರರು ಸುತ್ತಿ ಬಳಸಿ ಸಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕೆಳಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ, ಸಾಮಾನ್ಯ ಮಳೆಗೂ ಇಲ್ಲಿ ನಾಲ್ಕೈದು ಅಡಿಗಳಷ್ಟು ನೀರು ನಿಲ್ಲುತ್ತಿದ್ದು, ಅದರಲ್ಲೇ ವಾಹನ ತಳ್ಳಿಕೊಂಡು ಹೋಗಬೇಕಾಗಿದೆ. ಇಲ್ಲಿ ರೈಲ್ವೆ ಹಳಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ಹೆಚ್ಚೆಂದರೆ 80 ಅಡಿ ದೂರ. ಆದರೆ, ಜೋರಾಗಿ
ಮಳೆಬಂದಾಗ ಕೆಳಸೇತುವೆ ದಾಟಲು ಸಾಧ್ಯವಾಗದೆ 4 ಕಿ.ಮೀ ಸುತ್ತಿಕೊಂಡು ಹೋಗಬೇಕು.

‘ಕೆಳಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಹಾಗಾಗಿ ಮಳೆ ಬಂದಾಗಲೆಲ್ಲ ನಮಗೆ ಸಮಸ್ಯೆ ತಪ್ಪಿದ್ದಲ್ಲ. ಇಲ್ಲಿ ನಿರ್ಮಾಣವಾಗುವ ಕೃತಕ ಈಜುಕೊಳ ಸ್ಥಳೀಯ ಜನಪ್ರತಿನಿಧಿಗಳು ಕೊಡಿಗೆಹಳ್ಳಿಗೆ ನೀಡಿರುವ ದೊಡ್ಡ ಕೊಡುಗೆ’ ಎಂದು ಸ್ಥಳೀಯ ನಿವಾಸಿ ಆಶಿತ್‌ಕುಮಾರ್‌ ವ್ಯಂಗ್ಯವಾಗಿ ಹೇಳಿದರು.

ಬೇಕಾಬಿಟ್ಟಿ ಕಾಮಗಾರಿ: ‘ಕಾಮಗಾರಿ ಆರಂಭಿಸಿದಾಗ ಸರಿಯಾದ ನೀಲನಕ್ಷೆ ಹೊಂದಿರಲಿಲ್ಲ. ಆದ್ದರಿಂದ ಬೇಕಾಬಿಟ್ಟಿ ಕಾಮಗಾರಿ ನಡೆಸಿದ್ದಾರೆ. ಅಂಡರ್‌ಪಾಸ್‌ನಲ್ಲಿ ನೀರು ನಿಂತುಕೊಳ್ಳುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಬಸ್‌ಗಳನ್ನು ಬಿಟ್ಟು ಬೇರೆ ವಾಹನಗಳು ಸಂಚರಿಸಲು ಆಗುವುದಿಲ್ಲ. ಇಲ್ಲಿ ಸರಿಯಾದ ರಸ್ತೆಗಳೂ ಇಲ್ಲ. ಬಸ್‌ಗಳ ಸಂಪರ್ಕವೂ ಕಡಿಮೆ’ ಎಂದು ಸ್ಥಳೀಯ ನಿವಾಸಿ ರಾಜು ಸಮಸ್ಯೆ ಹೇಳಿಕೊಂಡರು.

ದುರ್ವಾಸನೆ ಸಮಸ್ಯೆ: ‘ನಿಂತ ನೀರನ್ನು ನಾಲ್ಕೈದು ದಿನಗಳ ಬಳಿಕ ತೆರವುಗೊಳಿಸುತ್ತಾರೆ. ಮಳೆ ನೀರಿನ ಜೊತೆ ಒಳ
ಚರಂಡಿಯ ಕೊಳಚೆ ನೀರು ಸೇರಿಕೊಂಡು ದುರ್ವಾಸನೆ ಬೀರುತ್ತದೆ. ಮೂಗು ಮುಚ್ಚಿಕೊಂಡು ಓಡಾಡಬೇಕಿದೆ’ ಎಂದು ಅವರು ಅಳಲು ತೋಡಿಕೊಂಡರು.

ನೀರು ಸರಾಗವಾಗಿ ಹರಿದುಹೋಗಲು ನಿರ್ಮಿಸಿರುವ ತೂಬಿನಲ್ಲಿ ಸಿಮೆಂಟ್‌ ತುಂಬಿಕೊಂಡಿದೆ. ಅದನ್ನು ತೆರವು ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 15 ದಿನಗಳ ಹಿಂದಷ್ಟೇ ಕೆಲಸ ಶುರುಮಾಡಿದ್ದಾರೆ ಎಂದರು.

ಕಾಮಗಾರಿ ಅಪೂರ್ಣ: ‘ಮೇಲ್ನೋಟಕ್ಕೆ ಕಾಮಗಾರಿ ಅಲ್ಪಸ್ವಲ್ಪ ಉಳಿದಂತೆ ಕಾಣುತ್ತಿದೆ. ಆದರೆ, ಇನ್ನೂ ಶೇ 50ರಷ್ಟು ಕಾಮಗಾರಿ ಬಾಕಿ ಇದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸ್ಥಳೀಯ ಶಾಸಕರೂ ಆಗಿರುವ ಸಚಿವ ಕೃಷ್ಣಬೈರೇಗೌಡ ಅವರು ತರಾ
ತುರಿಯಲ್ಲಿ‌‌ ಕೆಳಸೇತುವೆಯನ್ನು ಉದ್ಘಾಟಿಸಿದರು. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲೂ ವಿದ್ಯುತ್‌ ಕಂಬಗಳನ್ನು ನಿಲ್ಲಿಸಿ ತಿಂಗಳು ಕಳೆದಿದ್ದರೂ, ದೀಪ ಅಳವಡಿಸಿಲ್ಲ. ರಾತ್ರಿ ವೇಳೆ ಬೆಳಕಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ವಾರದ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ಬೈಕ್‌ ಸವಾರರೊಬ್ಬರ ಕೈಕಾಲು ಮುರಿದಿತ್ತು’ ಎಂದು ದೂರುಗಳ ಸರಮಾಲೆ ಬಿಚ್ಚಿಟ್ಟರು ಚಾಲಕ ಸತೀಶ್‌.

‘ಸರ್ವಿಸ್‌ ರಸ್ತೆಯ ನಿರ್ಮಾಣಕ್ಕೆ ಒಂದು ಕಡೆ ಭೂಸ್ವಾಧೀನ ವಿಳಂಬವಾಗಿದೆ‌. ಇನ್ನೊಂದು ಕಡೆ ಸ್ವಾಧೀನಪಡಿಸಿಕೊಂಡ ಜಾಗವನ್ನು ಕೊಳವೆ ಅಳವಡಿಸಲು ಅಗೆಯಲಾಗಿದೆ. ವಿರೂಪಾಕ್ಷಪುರ–ಕೊಡಿಗೆಹಳ್ಳಿಗೆ ಓಡಾಡಲು ಭಯವಾಗುತ್ತದೆ. 80 ಮೀಟರ್ ದೂರ ಸಾಗುವುದಕ್ಕೂ ₹ 10 ಕೊಟ್ಟು ಆಟೊಗೆ ಹತ್ತುತ್ತಾರೆ. ಈ ಕೆಳಸೇತುವೆ ಮೂಲಕ ನೆಲಮಂಗಲ, ಹೆಸರಘಟ್ಟ ಹಾಗೂ ವಿಮಾನ ನಿಲ್ದಾಣ ಸಂಪರ್ಕ ಸುಲಭ ಆಗುತ್ತದೆ’ ಎನ್ನುತ್ತಾರೆ ಅವರು.

***

15 ವರ್ಷ ಹಳೆಯ ಸೇತುವೆಯಂತಿದೆ’
ಕಾಮಗಾರಿಗೆ ದುಡ್ಡನ್ನು ನೀರಿನಂತೆ ಪೋಲು ಮಾಡುವುದು ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ಕೆಳಸೇತುವೆ ಉದ್ಘಾಟಿಸಿ ನಾಲ್ಕೈದು ತಿಂಗಳಾಗಿದೆ. ಆದರೆ, ಇದು ಸುಮಾರು 15 ವರ್ಷಗಳಷ್ಟು ಹಳೆಯ ಸೇತುವೆಯಂತೆ ಕಾಣುತ್ತಿದೆ. ಅಂಡರ್‌ಪಾಸ್ ಕಾಮಗಾರಿಯಿಂದ ಐದು ವರ್ಷಗಳಿಂದ ಇಲ್ಲಿನ ರಸ್ತೆಯ ಅಕ್ಕಪಕ್ಕದ ಅಂಗಡಿಗಳಲ್ಲಿ ವ್ಯಾಪಾರಕ್ಕೂ ಧಕ್ಕೆ ಉಂಟಾಗಿದೆ

ವಿಜಯ್‌ಕುಮಾರ್, ಸ್ಥಳೀಯ ಅಂಗಡಿ ಮಾಲೀಕ

––

‘ಶಾಶ್ವತ ಪರಿಹಾರ ಅಗತ್ಯ’
ಮಳೆ ಬಂದಾಗಲ್ಲೆಲ್ಲ ಅಂಡರ್‌ಪಾಸ್‌ನಲ್ಲಿಯೇ ನೀರು ಶೇಖರಣೆಯಾಗುತ್ತದೆ. ಪ್ರತಿ ಬಾರಿ ಮಳೆ ಬಂದಾಗಲೂ ಮೋಟರ್‌ ಇಟ್ಟು ನೀರನ್ನು ಹೊರಹಾಕಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು

–ಆಶಿತ್‌ಕುಮಾರ್‌, ಸ್ಥಳೀಯ ನಿವಾಸಿ

––

‘ಸಮಸ್ಯೆ ನಿವಾರಣೆಗೆ ಕ್ರಮ’
ಈ ಸಮಸ್ಯೆ ಬಗ್ಗೆ ರೈಲ್ವೆ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸಂಸದ ಸದಾನಂದ ಗೌಡ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳುತ್ತೇವೆ

–ಎಚ್‌.ಕುಸುಮಾ, ಪಾಲಿಕೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT