ಸೋಮವಾರ, ಏಪ್ರಿಲ್ 12, 2021
23 °C
ಯಶಸ್ವಿ ಯೋಜನೆ ಅಡಿ ಸಂತ್ರಸ್ತ ಮಹಿಳೆಯರು ತಯಾರಿಸಿದ ಸಮವಸ್ತ್ರ

ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಾಲೂರು ಗ್ರಾಮದಲ್ಲಿನ ಯಶಸ್ವಿ ಯೋಜನೆ ಅಡಿ ಮಹಿಳೆಯರು ತಯಾರಿಸಿದ ಸಮವಸ್ತ್ರ ವಿತರಿಸಲಾಯಿತು.

ಹೊಲಿಗೆ ತರಬೇತುದಾರರಾದ ಮಡಿಕೇರಿಯ ಅಶ್ರಫುನ್ನೀಸಾ ಮಾತನಾಡಿ, ಅ.14ರಿಂದ ಪ್ರಾರಂಭವಾದ ಹೊಲಿಗೆ ತರಬೇತಿ ಅಡಿ ಕಾಲೂರಿನ 30 ಮಹಿಳೆಯರಿಗೆ ಮಾರ್ಚ್‌ 30ರವರೆಗೆ 140 ದಿನಗಳ ತರಬೇತಿ ನೀಡಲಾಗಿದ್ದು ಇದೀಗ ಎಲ್ಲಾ ಮಹಿಳೆಯರೂ ಹೊಲಿಗೆಯಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಶ್ಲಾಘಿಸಿದರು.

ಕಾಲೂರಿನ 30 ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಉದ್ಯೋಗ ಕಂಡುಕೊಂಡಿದ್ದಾರೆ ಎಂದು ಹೇಳಿದರು.

ಪ್ರಾಜೆಕ್ಟ್ ಕೂರ್ಗ್‌ನ ಬಾಲಾಜಿ ಕಶ್ಯಪ್ ಮಾತನಾಡಿ, ಕಳೆದ 10 ತಿಂಗಳಿನಿಂದ ಕಾಲೂರಿನ ಸ್ವಾಭಿಮಾನಿ ಮಹಿಳೆಯರು ಹೊಲಿಗೆ ಕಲಿತು  ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸಮವಸ್ತ್ರ ಹೊಲಿಯುತ್ತಿದ್ದಾರೆ ಎಂದು ಹೇಳಿದರು.

ಯಶಸ್ವಿ ಯೋಜನೆ ಅಡಿ ತಯಾರಿಸಲಾದ ವಿವಿಧ ಮಸಾಲೆ ಪದಾರ್ಥಗಳಿಗೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಇದೀಗ ಮಕ್ಕಳ ಏಪ್ರನ್‌ಗೂ ಬೇಡಿಕೆ ಬಂದಿದೆ. ಫ್ಯಾನ್ಸಿ ಬ್ಯಾಗ್ ತಯಾರಿಕೆಯಲ್ಲಿಯೂ ಕಾಲೂರಿನ ಯಶಸ್ವಿ ಯೋಜನೆ ಅಡಿ ತರಬೇತಿ ಪಡೆದ ಮಹಿಳಾ ಉದ್ಯೋಗಿಗಳು ನಿರತರಾಗಿದ್ದಾರೆ ಎಂದು ಕಶ್ಯಪ್ ಮಾಹಿತಿ ನೀಡಿದರು. 

ಕೊಡಗು ಮತ್ತು ಅದರ ಗಡಿಯಾಚೆಗಿನ ಜನರು ಕೊಳ್ಳಬಹುದಾದಷ್ಟು ಮಸಾಲೆ ಪದಾರ್ಥಗಳನ್ನು ತಯಾರಿಸಲು ಕಾಲೂರು ಮಹಿಳೆಯರು ಕಲಿತಿದ್ದಾರೆ. 2018ರ ಅಕ್ಟೋಬರ್‌ನಲ್ಲಿ ಕಾಲೂರು ಗ್ರಾಮದ ಸರ್ಕಾರಿ ಶಾಲಾ ಕೊಠಡಿಯಲ್ಲಿ ಪ್ರಾರಂಭವಾದ ತರಬೇತಿ 6 ತಿಂಗಳ ಕಾಲ ಸತತವಾಗಿ ನಡೆದ ಫಲವಾಗಿ ಕಾಲೂರಿನ ‘ಯಶಸ್ವಿ’ ತರಬೇತಿ ಕೇಂದ್ರದ ಮಹಿಳೆಯರು ಇದೀಗ ಶಾಲೆಗಳಿಗೆ ಸಮವಸ್ತ್ರ ಹೊಲಿದುಕೊಡಬಲ್ಲಷ್ಟು ನಿಪುಣರಾಗಿದ್ದಾರೆ. ಪೊನ್ನಂಪೇಟೆ ಸಾಯಿಶಂಕರ ಶಾಲೆಗೆ ಸಮವಸ್ತ್ರ ಹೊಲಿದು ಕೊಟ್ಟ ಗ್ರಾಮೀಣ ಪ್ರತಿಭೆಗಳು ಈಗ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಮವಸ್ತ್ರ ತಯಾರಿಸಿದ್ದಾರೆ.

ಉಪಾಧ್ಯಕ್ಷ ಕೆ.ಪಿ.ಉತ್ತಪ್ಪ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ,  ಊರ್ವಶಿ ಮುದ್ದಯ್ಯ, ನಕುಲ್ ಪೂಣಚ್ಚ, ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಹರೀಶ್, ಉಪ ಪ್ರಾಂಶುಪಾಲೆ ವನಿತಾ, ವ್ಯವಸ್ಥಾಪಕ ರವಿ ಹಾಜರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.