ಕಡಲೆ ಖರೀದಿ ಹಣ ಬಿಡುಗಡೆಗೆ ಆಹಗ್ರಹ

7

ಕಡಲೆ ಖರೀದಿ ಹಣ ಬಿಡುಗಡೆಗೆ ಆಹಗ್ರಹ

Published:
Updated:

ಧಾರವಾಡ: ‘ರೈತರಿಂದ ಸರ್ಕಾರ ಖರೀದಿ ಮಾಡಿದ ಕಡಲೆ ಹಣವನ್ನು ಕೂಡಲೇ ಬಿಡುಗಡೆ ಮಾಡುಬೇಕು’ ಎಂದು ತಾಲ್ಲೂಕಿನ ಶಿರೂರ ಗ್ರಾಮದ ರೈತ ಮುಖಂಡ ಮಲ್ಲಿಕಾರ್ಜುನ ಬಾಳನಗೌಡ್ರ ಆಗ್ರಹಿಸಿದರು.

‘2015 ರಿಂದ 2017ರ ವರೆಗೆ ಫಸಲ ಬಿಮಾ ಯೋಜನೆ ಹಾಗೂ ಬೆಳೆ ವಿಮೆ ಹಣವು ರೈತರಿಗೆ ಸರಿಯಾಗಿ ದೊರೆತಿಲ್ಲ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.  ‘ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ. ಈಗ ಮಾಡಿರುವ ರೈತರ ಸಾಲಮನ್ನಾದಿಂದ ಕೆಲ ರೈತರಿಗೆ ಮಾತ್ರ ಪ್ರಯೋಜನವಾಗಲಿದೆ. ಸಾಲಮನ್ನಾಕ್ಕಾಗಿ ವಿಧಿಸಿರುವ ಷರತ್ತುಗಳಿಂದ ಸಾಕಷ್ಟು ರೈತರು ವಂಚಿತರಾಗಿದ್ದಾರೆ. ಹೀಗಾಗಿ ಈ ಷರತ್ತು ರದ್ದುಗೊಳಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಸಾಲಮನ್ನಾ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು. ಬುಧವಾರ ಮುಖ್ಯಮಂತ್ರಿಯನ್ನು ಭೇಟಿ ಮಡಿ ಈ ಕುರಿತು ಮನವಿ ಮಾಡಿಕೊಳ್ಳಲಾಗುವುದು. ಇದಕ್ಕೆ ಸ್ಪಂದನೆ ದೊರೆಯದಿದ್ದರೆ ಮುಂದೆ ನಡೆಯುವುದಕ್ಕೆ ಅವರೇ ಹೊಣೆಗಾರರಗಲಿದ್ದಾರೆ. ರೈತರ ಹೋರಾಟದ ಕಿಚ್ಚು ಹೆಚ್ಚಾಗಲಿದೆ. ಇದರಿಂದ ಅನಿವಾರ್ಯವಾಗಿ ರೈತರು ಬೀದಿಗಿಳಿದು ಉಗ್ರ ಹೋರಾಟ ಮಾಡಲಿದ್ದಾರೆ’ ಎಂದರು.

‘ಈರುಳ್ಳಿಗೆ ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ ₹2500 ರಿಂದ ₹3ಸಾವಿರ ಬೆಲೆ ನಿಗದಿ ಮಾಡಿ, ಯಾವುದೇ ಮಿತಿಯಿಲ್ಲದೇ ರೈತರು ಬೆಳೆದ ಈರುಳ್ಳಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರವೇ ಖರೀದಿ ಮಾಡಬೇಕು. ಇದಲ್ಲದೇ ಅಂಗವಿಕಲ, ವೃದ್ಧರ ಪಿಂಚಣಿ ಹಾಗೂ ಹಿರಿಯ ನಾಗರಿಕರಿಗೆ ಸಹಾಯ ಧನ ಕೊಡಬೇಕು’ ಎಂದು ಒತ್ತಾಯಿಸಿದರು.

ಬಸವೆಣ್ಣಪ್ಪ ಯರಗುದ್ದಿ, ರಾಚಯ್ಯ ಮಠದ, ಶೇಖಪ್ಪ ಬಡಿಗೇರ, ಮಡಿವಾಳಪ್ಪ ಹೊಸೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !