ವಿದೇಶಕ್ಕೆ ಹಾರಲಿವೆ 50 ಲಕ್ಷ ಗುಲಾಬಿ

7
ಸಮೀಪಿಸುತ್ತಿದೆ ಪ್ರೇಮಿಗಳ ದಿನ* ಹೂಗಳಿಗೆ ಬೇಡಿಕೆ

ವಿದೇಶಕ್ಕೆ ಹಾರಲಿವೆ 50 ಲಕ್ಷ ಗುಲಾಬಿ

Published:
Updated:
Prajavani

ಬೆಂಗಳೂರು: ಪ್ರೇಮಿಗಳ ದಿನದ (ಫೆ.14) ಅಂಗವಾಗಿ ರಾಜ್ಯದಿಂದ ಸುಮಾರು 50 ಲಕ್ಷ ಗುಲಾಬಿ ಹೂಗಳನ್ನು ಪೂರೈಸಲು ವಿದೇಶಗಳಿಂದ ಎರಡು ತಿಂಗಳ ಹಿಂದೆಯೇ ಬೇಡಿಕೆ ಬಂದಿದೆ.

ಯುರೋಪ್‌, ಜಪಾನ್‌, ದುಬೈ, ಕತಾರ್‌ ಹಾಗೂ ಹಾಲೆಂಡ್‌ ರಾಷ್ಟ್ರಗಳಿಂದ ಈ ಪ್ರಮಾಣದ ಬೇಡಿಕೆ ಬಂದಿದ್ದು ಉತ್ತಮ ವಿದೇಶಿ ವಿನಿಮಯ ಗಳಿಸುವ ನಿರೀಕ್ಷೆ ಹೊಂದಿದ್ದೇವೆ. ಪ್ರೇಮಿಗಳ ದಿನದ ಎರಡು ದಿನ ಮೊದಲು ಹೂಗಳನ್ನು ರಫ್ತು ಮಾಡುತ್ತೇವೆ’ ಎಂದು ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ (ಐಫ್ಯಾಬ್)ದ ಎಂ.ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ದೊಡ್ಡಬಳ್ಳಾಪುರ, ಆನೇಕಲ್‌ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆಯುವ ತಾಜ್‌ಮಹಲ್‌ (ಕೆಂಗುಲಾಬಿ), ಸಮುರಾಯ್‌, ಗ್ರಾಂಡ್‌ ಗಾಲಾ, ಗೋಲ್ಡ್‌ ಸ್ಪ್ರೆಕ್‌ ಯೆಲ್ಲೊ, ಹಾಟ್‌ ಶಾಟ್‌, ಬೋನಿಯರ್‌, ಸೌರನ್‌ ಮತ್ತಿತರ ತಳಿಗಳ ಹೂವುಗಳು ನಗರಕ್ಕೆ ಲಗ್ಗೆ ಇಟ್ಟಿವೆ. ಪ್ರೇಮಿಗಳ ದಿನದಂದು ಇವುಗಳ ಬೆಲೆ ಮತ್ತು ಬೇಡಿಕೆ ಏರುಮುಖವಾಗಿವೆ.  

‘ಪಾಲಿಹೌಸ್‌ಗಳಲ್ಲಿ ಬೆಳೆದಿರುವ ಗುಣಮಟ್ಟದ ಡಚ್ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಸದ್ಯ ₹10 ರಿಂದ ₹20 ದರವಿರುವ ಗುಲಾಬಿ ಹೂವು, ‘ವ್ಯಾಲೆಂಟೈನ್ಸ್‌ ಡೇ’ ಹೊತ್ತಿಗೆ ₹50 ತಲುಪುವ ಸಾಧ್ಯತೆ ಇದೆ’ ಎಂದು ವ್ಯಾಪಾರಿಗಳು ಹೇಳಿದರು.

ಕಳೆದ ಬಾರಿಗಿಂತ ಈ ಬಾರಿ ಅಧಿಕ ಪ್ರಮಾಣದ ಗುಲಾಬಿ ಹೂವುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ದೆಹಲಿ, ಪುಣೆಯಲ್ಲಿ ಮಾತ್ರ ಡಚ್‌ ತಳಿಯ ಕೆಂಪು ಗುಲಾಬಿ ಬೆಳೆಯಲಾಗುತ್ತದೆ. ಹೂ ಬೆಳೆಗೆ ಪೂರಕ ಹವಾಮಾನ ಇಲ್ಲಿದೆ. ಗುಣಮಟ್ಟದ ಹೂಗಳು ಇಲ್ಲಿ ಬೆಳೆಯುತ್ತವೆ.  

ಅಪೆಡಾ (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ) ಪ್ರಕಾರ, ದೇಶದಿಂದ ಕಳೆದ ವರ್ಷ ವಿದೇಶಗಳಿಗೆ ₹507 ಕೋಟಿ ಮೌಲ್ಯದ ಗುಲಾಬಿ ಹೂಗಳು ರಫ್ತಾಗಿವೆ. 

‘ಸಾಮಾನ್ಯ ದಿನಗಳಲ್ಲಿ ಸುಮಾರು 2.5 ಲಕ್ಷ ಹೂಗಳು ಮಾರಾಟವಾಗುತ್ತವೆ. ಆದರೆ, ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಹೂಗಳು ಮಾರಾಟವಾಗುತ್ತವೆ. 70 ಸೆಂ.ಮೀ ಉದ್ದದ ಒಂದು ಗುಲಾಬಿ ಹೂವಿಗೆ ಅಂದಾಜು ₹12.5 ದರದಂತೆ ಮಾರಾಟ ಮಾಡಲಾಗುತ್ತದೆ. ಅಳತೆ ಹಾಗೂ ಗುಣಮಟ್ಟಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗುತ್ತದೆ’ ಎಂದು ವಿಶ್ವನಾಥ್‌ ಮಾಹಿತಿ ನೀಡಿದರು.

ಬೆಂಗಳೂರು ಹಾಗೂ ಸುತ್ತಮುತ್ತಲಿನ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪಕೃಷಿ ಇದೆ. ಈ ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ.

‘ಪ್ರೇಮಿಗಳ ದಿನದಂದು ಪ್ರೀತಿಪಾತ್ರರಿಗೆ ಸಂದೇಶ ಕೋರಲು ಕೈಯಲ್ಲಿ ಗುಲಾಬಿ ಇಲ್ಲದಿದ್ದರೆ ಹೇಗೆ? ಪ್ರೀತಿಗಿಂತ ‌ಹೆಚ್ಚಲ್ಲ ಗುಲಾಬಿ ಬೆಲೆ’ ಎನ್ನುತ್ತಾರೆ ವಿಜಯನಗರದ ಪ್ರೇಮ್‌ ಕುಮಾರ್.

ನಗರದಲ್ಲಿ ಎಲ್ಲೆಲ್ಲಿ ಹೂಗಳು ಲಭ್ಯ?

ಸಗಟು ದರದಲ್ಲಿ ಖರೀದಿಸಲು ಹೆಬ್ಬಾಳದ ಅಂತರರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರವನ್ನು ಸಂಪರ್ಕಿಸಬಹುದು. ಇಲ್ಲಿ ಗುಣಮಟ್ಟದ ಕೆಂಪು, ತಿಳಿ ಗುಲಾಬಿ, ಹಳದಿ, ತಿಳಿ ನೀಲಿ, ನೇರಳೆ ಇತ್ಯಾದಿ ಬಣ್ಣದ ಸುಮಾರು 15 ಬಗೆಯ ಗುಲಾಬಿ ಹೂವುಗಳು ಲಭ್ಯವಿವೆ.

ಕೆ.ಆರ್.ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಸಗಟು ದರದಲ್ಲಿ ಮಾರಾಟ ನಡೆಯುತ್ತದೆ. ಫೆ.11 ರಿಂದ 14ರವರೆಗೆ ಚಿಲ್ಲರೆ ಮಾರಾಟಗಾರರ ಹೂಗಳಿಗೆ ಹೆಚ್ಚು ಬೇಡಿಕೆ ಇರಲಿದೆ.

‘ಅಜೀಬ್ ದಾಸ್ತಾನ್’ ಸಂಗೀತ ಸಂಜೆ

ಪ್ರೇಮಿಗಳ ದಿನವನ್ನು ಮತ್ತಷ್ಟು ಮಧುರಗೊಳಿಸಲು ನಾದೋಪಾಸನಾ ಸಂಸ್ಥೆ, ಅಜೀಬ್ ದಾಸ್ತಾನ್ ಸಂಗೀತ ಸಂಜೆ ಆಯೋಜಿಸಿದೆ.

ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಗಾಯಕಿ ಅನುರಾಧಾ ಭಟ್ ಮತ್ತು ನಿಖಿಲ್ ಪಾರ್ಥಸಾರಥಿ ಕನ್ನಡ ಮತ್ತು ಹಿಂದಿ ಹಾಡುಗಳಿಗೆ ಧ್ವನಿಯಾಗಲಿದ್ದಾರೆ.

ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಮೊತ್ತವನ್ನು ನಾದೋಪಾಸನಾ ಸಂಸ್ಥೆ ದುರ್ಬಲರಿಗೆ ಹಾಗೂ ಅಸಮರ್ಥರಿಗೆ ನೀಡಲಿದೆ.

ವಿವರಗಳಿಗೆ: https://www.talkofthetown.in

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !