ಸುಂದರ ಬದುಕು ಕಟ್ಟಿಕೊಡುವ ವಚನ: ಡಾ. ವೀರಣ್ಣ ಬಸಪ್ಪ ರಾಜೂರ

7
ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳ

ಸುಂದರ ಬದುಕು ಕಟ್ಟಿಕೊಡುವ ವಚನ: ಡಾ. ವೀರಣ್ಣ ಬಸಪ್ಪ ರಾಜೂರ

Published:
Updated:
Deccan Herald

ಹುಬ್ಬಳ್ಳಿ: ‘ವಚನ ಧರ್ಮ ಎಂದರೆ ಶರಣ ಧರ್ಮ, ಶರಣ ಧರ್ಮ ಎಂದರೆ ಲಿಂಗಾಯತ ಧರ್ಮ. ಇಷ್ಟಲಿಂಗ ಕೇಂದ್ರಿತವಾದ ಧರ್ಮ ಕನ್ನಡಿಗರು ಸೃಷ್ಟಿಸಿದ ಮೊಟ್ಟ ಮೊದಲ ಸ್ವತಂತ್ರ ಧರ್ಮ’ ಎಂದು 6ನೇ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳದನದ ಅಧ್ಯಕ್ಷ ಡಾ. ವೀರಣ್ಣ ಬಸಪ್ಪ ರಾಜೂರ ಅಭಿಪ್ರಾಯಪಟ್ಟರು.

ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ನಗರದ ಸಾಂಸ್ಕೃತಿಕ ಭವನದ ಬಿ.ಜಿ. ಬಣಕಾರ ವೇದಿಕೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ಏಕದೇವೋಪಾಸನೆ, ವರ್ಗ– ವರ್ಣ ಲಿಂಗಭೇದ ರಹಿತ, ಸರ್ವ ಸಮಾನತೆ ಸ್ವಾತಂತ್ರ್ಯಹಾಗೂ ಸಹೋದರತೆ ತಳಹದಿ ಮೇಲೆ ಕಟ್ಟಿದ ಧರ್ಮವಿದು. ಉದಾತ್ತ ಮೌಲ್ಯಗಳನ್ನು ಒಳಗೊಂಡ ವಿಶ್ವ ಧರ್ಮವಾಗಿದೆ. ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆದಿರುವುದು ನ್ಯಾಯಯುತವಾಗಿದ್ದು, ಮಾನ್ಯತೆ ದೊರೆಯುವಂತಾಗಲಿ’ ಎಂದು ಆಶಿಸಿದರು.

‘ಶರಣ ಸಮಾಜ ಇಂದು ಅನ್ಯ ಧರ್ಮಗಳ, ತತ್ವ, ಆಚರಣೆಗಳ ಪ್ರಭಾವಕ್ಕೆ ಒಳಗಾಗಿ ಶರಣರು ಕೊಟ್ಟು ಹೋದ ತನ್ನ ಸತ್ಯಶುದ್ಧ ನಿಜಾಚರಣೆ, ನಿಜ ತತ್ವ ಮರೆತು ವಿಸ್ಮೃತಿಗೆ ಒಳಗಾಗಿದೆ. ಅದಕ್ಕೆ ಅರಿವು ಮೂಡಿಸಿ ಸರಿದಾರಿಗೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಇದಕ್ಕಾಗಿಯೇ ಡಾ. ಎಂ.ಎಂ. ಕಲಬುರ್ಗಿ ಅವರು ಶರಣ ಸಮಾಜದ ಶುದ್ಧೀಕರಣ, ಏಕೀಕರಣ, ನವೀಕರಣ, ಜಾಗತೀಕರಣ ಹಾಗೂ ಸಬಲೀಕರಣ ಎಂಬ ಸೂತ್ರವನ್ನು ನೀಡಿದ್ದಾರೆ. ಇದರ ಆಧಾರದ ಮೇಲೆ ಸಮಾಜದ ಬಲವರ್ಧನೆ ಕಾರ್ಯದಲ್ಲಿ ತೊಡಗಬೇಕು’ ಎಂದು ಅವರು ಹೇಳಿದರು.

‘12ನೇ ಶತಮಾನದಲ್ಲಿ ಉಗಮ ಹೊಂದಿದ ವಚನ ಸಾಹಿತ್ಯ ಕಾಲಕಾಲಕ್ಕೆ ಅನೇಕ ಏಳುಬೀಳಗಳನ್ನು ಅನುಭವಿಸಿದರೂ, ಇಂದಿನವರೆಗೆ ಉಳಿದು ಬಂದಿರುವುದು ಜೀವಂತಿಕೆಯ ಲಕ್ಷಣವಾಗಿದೆ. ವಚನ ಸಾಹಿತ್ಯ ಸಾತ್ವಿಕ ವ್ಯಕ್ತಿತ್ವ, ಸ್ವಸ್ಥ ಸಮಾಜ ಸುಂದರ ಬದುಕು ಕಟ್ಟಿಕೊಡುವ ಸಾಹಿತ್ಯವಾಗಿದೆ. ಅದೇ ಕಾರಣಕ್ಕೆ ಅದರ ಮೌಲ್ಯಗಳು ಎಲ್ಲ ಕಾಲಕ್ಕೂ ಪ್ರಸ್ತುತ’ ಎಂದರು.

ವಚನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ. ಕೆ.ಸಿ. ಮಲ್ಲಿಗವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಚಂದ್ರಶೇಖರಪ್ಪ ತಂಬಾಕದ ಸ್ವಾಗತಿಸಿದರು. ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಎನ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ವಚನ ಜ್ಯೋತಿ ಸ್ಮರಣ ಸಂಚಿಕೆ, ವಚನ ದೀಪಿಕೆ, ವಚನಧಾರೆ ಹಾಗೂ ವಚನ ವಿಕಾಸ ಗ್ರಂಥ ಬಿಡುಗಡೆ‌ ಮಾಡಲಾಯಿತು.

ಮೆರವಣಿಗೆ: ನಗರದ ಸಿದ್ಧಾರೂಢ ಮಠದಿಂದ ಸಾಂಸ್ಕೃತಿಕ ಭವನದ ವೀರಣ್ಣ ಬಸಪ್ಪ ರಾಜೂರ ಮೆರವಣಿಗೆ ನಡೆಯಿತು. ವಾದ್ಯ ಮೇಳಗಳು, ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !