ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಟ್ಟಣೆ ನಡುವೆ ಖರೀದಿ ಸಂಭ್ರಮ

ವರಮಹಾಲಕ್ಷ್ಮಿ ಹಬ್ಬ l ಸಂಚಾರ ಕಿರಿಕಿರಿ ನಡುವೆ ಬೆಲೆ ಏರಿಕೆ ಸವಾಲು !
Last Updated 8 ಆಗಸ್ಟ್ 2019, 18:44 IST
ಅಕ್ಷರ ಗಾತ್ರ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಹೂವು–ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಗುರುವಾರ ಮಾರುಕಟ್ಟೆ ಬಂದ ಗ್ರಾಹಕರಿಗೆ ಸಂಚಾರ ದಟ್ಟಣೆಯ ಬಿಸಿ ಎದುರಾಯಿತು. ಮಾರುಕಟ್ಟೆ ಪ್ರದೇಶ ಪ್ರವೇಶಿಸಿದವರು ಮತ್ತೆ ಹೊರಬಾರಲಾಗದೆ ತೊಂದರೆ ಅನುಭವಿಸಿದರು. ಈ ನಡುವೆ, ದಿನವಿಡೀ ತುಂತುರು ಮಳೆ ಸುರಿದ ಪರಿಣಾಮ ಉಂಟಾದ ಕೆಸರು ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಲಾಯಿತು.

ಯಶವಂತಪುರ, ಮಲ್ಲೇಶ್ವರ, ಯಲಹಂಕ ಮಾರುಕಟ್ಟೆಯಲ್ಲಿ ಇದೇ ಪರಿಸ್ಥಿತಿ ಇತ್ತು. ಆದರೆ, ಕೆ.ಆರ್. ಮಾರುಕಟ್ಟೆಯಲ್ಲಿಯಂತೂ ದಟ್ಟಣೆ ಮತ್ತು ಕೆಸರು ಗ್ರಾಹಕರ ತಾಳ್ಮೆ ಪರೀಕ್ಷಿಸುವಂತಿತ್ತು.

ಈ ಸವಾಲುಗಳ ನಡುವೆಯೇ ಗ್ರಾಹಕರು ಖರೀದಿಯನ್ನು ಮುಂದುವರಿಸಿದ್ದರು.ಹಣ್ಣುಗಳನ್ನು ಕೆಜಿ ಲೆಕ್ಕದಲ್ಲಿ ಕೊಳ್ಳುವುದಕ್ಕೆ ಬದಲಾಗಿ ನಾಲ್ಕು–ಐದರ ಸಂಖ್ಯೆಯಲ್ಲಿ ಕೊಳ್ಳುತ್ತಿದ್ದರು. ಅಂದರೆ, ಒಂದು ಕೆಜಿ ತೂಕದಲ್ಲಿ ಮೂರು–ನಾಲ್ಕು ಬಗೆಯ ಹಣ್ಣುಗಳಿರುವಂತೆ ಖರೀದಿ ಮಾಡಲಾಗುತ್ತಿತ್ತು. ಹೂವುಗಳನ್ನು ಕೂಡ ಅರ್ಧ ಮೊಳದಂತೆ ಕೊಳ್ಳಲಾಗುತ್ತಿತ್ತು.

ಕೆಜಿ ಸೇಬನ್ನು ₹200, ಕಿತ್ತಳೆ ₹120, ದ್ರಾಕ್ಷಿ ₹120, ಬಾಳೆ ₹60ರಂತೆ ಮಾರಾಟ ಮಾಡಲಾಗುತ್ತಿತ್ತು. ಬಾಳೆ ಕಂಬ ಜೋಡಿಗೆ ₹30ರಿಂದ ₹50, 80 ವೀಳ್ಯೆದೆಲೆಗಳ ಕಟ್ಟಿಗೆ ₹60 ಬೆಲೆ ನಿಗದಿ ಮಾಡಲಾಗಿತ್ತು. ಆದರೆ, ಗಾತ್ರದಲ್ಲಿ ಚಿಕ್ಕದಾಗಿದ್ದ ಸೇಬು, ಮೋಸಂಬಿ ಹಣ್ಣುಗಳನ್ನು ₹50ಕ್ಕೆ ಐದು–ಆರರಂತೆ ಮಾರಾಟ ಮಾಡಲಾಗುತ್ತಿತ್ತು. ಈ ಹಣ್ಣುಗಳನ್ನೇ ಗ್ರಾಹಕರು ಹೆಚ್ಚಾಗಿ ಕೊಳ್ಳುತ್ತಿದ್ದರು.

‘ಹಬ್ಬ ಇರುವುದು ಗೊತ್ತಿದ್ದೂ, ಸಂಚಾರ ಪೊಲೀಸರಾಗಲಿ, ಬಿಬಿಎಂಪಿಯಾಗಲಿ ಜನ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಇರುವುದರಿಂದಲೂ ಮಾರುಕಟ್ಟೆ ಕೆಸರು ಮಯವಾಗಿರುವುದರಿಂದ ಖರೀದಿಗೆ ತೊಂದರೆಯಾಗಿದೆ’ ಎಂದು ಕೆ.ಆರ್. ಮಾರುಕಟ್ಟೆಗೆ ಬಂದಿದ್ದ ವೈಶಾಲಿ ಹೇಳಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ಕಡಿಮೆಯಾಗಿದೆ’ ಎಂದು ಹಣ್ಣಿನ ವ್ಯಾಪಾರಿ ಕೆ.ಎಂ. ನಾಗರಾಜ್ ಹೇಳಿದರು.

ಮಳೆಯ ಮಧ್ಯೆಯೂ ಕುಗ್ಗದಖರೀದಿ ಭರಾಟೆ

ದಾಬಸ್ ಪೇಟೆ: ಇಲ್ಲಿ ಮಳೆಯ ಮಧ್ಯೆಯೂ ಶ್ರಾವಣ ಮಾಸದ ಮೊದಲ ಹಬ್ಬ ’ವರಮಹಾಲಕ್ಷ್ಮೀ’ ವ್ರತ ಆಚರಣೆಗೆ ಗುರುವಾರ ಪೂಜಾ ಸಾಮಗ್ರಿ ಖರೀದಿ ಭರಾಟೆ ಜೋರಾಗಿಯೇ ಇತ್ತು.

ಅಗತ್ಯವಾಗಿ ಬೇಕಾಗಿರುವ ಹೂ, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದ್ದದ್ದು ಗ್ರಾಹಕರ ಉತ್ಸಾಹವನ್ನು ಕುಗ್ಗಿಸಿತ್ತು.ಪಟ್ಟಣದ ಮಧ್ಯಭಾಗವಾದ ಉದ್ದಾನೇಶ್ವರ ವೃತ್ತ, ದೊಡ್ಡಬಳ್ಳಾಪುರ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂ ಹಣ್ಣು, ಬಾಳೆದಿಂಡು, ಮಾವಿನ ಸೊಪ್ಪು, ತೆಂಗಿನ ಕಾಯಿ ಮಾರುವ ದೃಶ್ಯ ಸಾಮಾನ್ಯವಾಗಿತ್ತು. ಬಟ್ಟೆ, ದಿನಸಿ, ಹೂಹಣ್ಣು ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT